ಶುಕ್ರವಾರ, ಅಕ್ಟೋಬರ್ 29, 2021
20 °C
ಶಿವಮೊಗ್ಗ ದಸರಾ ಚಲನಚಿತ್ರೋತ್ಸವದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್

ಶಿವಮೊಗ್ಗ: ಚಿತ್ರಮಂದಿರಕ್ಕೆ ಪ್ರೇಕ್ಷಕರು ಬಂದಾಗ ಸಿನಿಮಾದ ಉಳಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿದಾಗ ಮಾತ್ರ ಕೊರೊನಾದಿಂದ ನಲುಗಿರುವ ಸಿನಿಮಾ ರಂಗ ಉಳಿಯುತ್ತದೆ ಎಂದು ಸಂಗೀತ ನಿರ್ದೇಶಕ ವಿ. ಮನೋಹರ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ವಾರ್ತಾ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ ಚಿತ್ರ ಸಮಾಜದಿಂದ ನಗರದ ಎಚ್‌ಪಿಸಿ ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಶಿವಮೊಗ್ಗ ದಸರಾ ಚಲನಚಿತ್ರೋತ್ಸವ-2021’ ಉದ್ಘಾಟಿಸಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆ ಕಲಾವಿದರಿಗೆ ತಾಯಿ ಇದ್ದಂತೆ. ಇಲ್ಲಿ ಅನೇಕ ಸಾಹಿತ್ಯದ ದಿಗ್ಗಜರು ಮತ್ತು ಕಲಾವಿದರು ಜನ್ಮ ತಾಳಿದ್ದು, ಸಿನಿಮಾ ರಂಗಕ್ಕೆ ಶಿವಮೊಗ್ಗದ ಕೊಡುಗೆ ಅಪಾರ. ಇಲ್ಲಿಯ ಜನ ಕಲೆಯ ಆರಾಧಕರು ಮತ್ತು ಕಲಾವಿದರಿಗೆ ಅನ್ನದಾತರು ಎಂದು ಬಣ್ಣಿಸಿದರು.

ದಸರಾ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮ ಏರ್ಪಡಿಸಿ ಚಿತ್ರ ಕಲಾವಿದರನ್ನು ಗೌರವಿಸುತ್ತಿರುವುದು ಕಲಾವಿದರಲ್ಲಿ ಸ್ಫೂರ್ತಿ ತಂದಿದೆ. ಧಾರಾವಾಹಿಯ ಒಂದು ಎಪಿಸೋಡ್ ಒಂದು ಸಿನಿಮಾಕ್ಕೆ ಸಮ. ಚಾನೆಲ್ ಬದಲಿಸದೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಧಾರಾವಾಹಿಗಳಿಗೆ ಇವೆ ಎಂದರು.

ನಟಿ ವೀಣಾ ಸುಂದರ್ ಮಾತನಾಡಿ, ‘ಕಲಾವಿದರನ್ನು ಗೌರವಿಸುವುದರಿಂದ ಅವರಿಗೆ ಸ್ಫೂರ್ತಿ ಸಿಗುತ್ತದೆ. ಸಿನಿಮಾ ರಂಗಕ್ಕೆ ಎರಡು ವರ್ಷಗಳಲ್ಲಿ ತಡೆಯಲಾಗದಷ್ಟು ಹೊಡೆತ ಬಿದ್ದಿದೆ. ಸಿನಿಮಾ ಕಲಾವಿದರಿಗೆ ಆನ್‌ಲೈನ್ ಜೀವನ ಇಲ್ಲ. ಜನ ಚಿತ್ರಮಂದಿರಕ್ಕೆ ಬಂದಾಗ ಮಾತ್ರ ಸಿನಿಮಾ ಕಲಾವಿದರಿಗೆ ಬದುಕು’ ಎಂದು ಹೇಳಿದರು.

ನಟ ಸುಂದರ್ ಮಾತನಾಡಿ, ‘ಮನುಷ್ಯನ ಎಲ್ಲ ಬೇಕು ಬೇಡಗಳನ್ನು ಪೂರೈಸಿದ ನಂತರ ಕಟ್ಟಕಡೆಗೆ ಸಿನಿಮಾ ಕ್ಷೇತ್ರದ ಕಡೆಗೆ ಬರುವಂತಹುದು. ನಾವೆಲ್ಲರೂ ಅನಿವಾರ್ಯವಾಗಿ ಆ ಕ್ಷೇತ್ರದಲ್ಲೇ ಇದ್ದೇವೆ. ಕನ್ನಡ ಸಿನಿಮಾಕ್ಕೆ ಶಿವಮೊಗ್ಗ ಜಿಲ್ಲೆ ಬೇರು. ಸಿನಿಮಾವನ್ನು ಪ್ರೋತ್ಸಾಹಿಸುವುದು ಕೂಡ ಶಿವಮೊಗ್ಗದಂತಹ ಜಿಲ್ಲೆಗಳೇ. ಈ ಕ್ಷೇತ್ರವನ್ನು ಪ್ರೋತ್ಸಾಹಿಸಿ’ ಎಂದು ಮನವಿ ಮಾಡಿದರು.

ವಾಸುಕಿ ವೈಭವ್, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಗನ್ನಿಶಂಕರ್, ದಸರಾ ಚಲನಚಿತ್ರ ಸಮಿತಿ ಅಧ್ಯಕ್ಷ ಲಕ್ಷ್ಮಿ ಶಂಕರನಾಯ್ಕ್, ಬೆಳ್ಳಿಮಂಡಲ ಸಂಚಾಲಕ ವೈದ್ಯ, ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.