ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಬಸ್ ನಿಲ್ದಾಣ.. ಕಳ್ಳರಿಗೆ ಸ್ವರ್ಗ ಸಮಾನ...

10 ತಿಂಗಳಲ್ಲಿ 17 ಕಳ್ಳತನ ಕೃತ್ಯ; ಪ್ರಯಾಣಿಕರ ಆತಂಕ
Published 17 ನವೆಂಬರ್ 2023, 5:52 IST
Last Updated 17 ನವೆಂಬರ್ 2023, 5:52 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಳ್ಳರ ಪಾಲಿಗೆ ಅಕ್ಷರಶಃ ಸ್ವರ್ಗವಾಗಿ ಪರಿಣಮಿಸಿದೆ. ಕಳೆದ 10 ತಿಂಗಳಲ್ಲಿ ಇಲ್ಲಿ 17 ಕಳ್ಳತನ ಪ್ರಕರಣ ನಡೆದಿವೆ. ಪ್ರಯಾಣಿಕರ ಚಿನ್ನಾಭರಣ, ಲ್ಯಾಪ್‌ಟಾಪ್, ಮೊಬೈಲ್‌ ಫೋನ್, ಬಟ್ಟೆ ಬ್ಯಾಗ್‌, ನಗದು ಎಲ್ಲವೂ ಕ್ಷಣಾರ್ಧದಲ್ಲಿ ಕಳ್ಳರ ಪಾಲಾಗಿವೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಹಾಸನದ ಕೇಂದ್ರ ಬಸ್ ನಿಲ್ದಾಣ ಹೊರತಾಗಿ ಈ ವರ್ಷ ಅತಿಹೆಚ್ಚು ಕಳ್ಳತನ ವರದಿ ಆಗಿರುವ ಕುಖ್ಯಾತಿ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಅಂಟಿಕೊಂಡಿದೆ.

ಮಲೆನಾಡು, ಕರಾವಳಿ, ಬಯಲುಸೀಮೆಯ ನಂಟು ಬೆಸೆಯುವ ಕಾರಣ ಶಿವಮೊಗ್ಗ ಬಸ್ ನಿಲ್ದಾಣ ದಿನದ 24 ಗಂಟೆಯೂ ಪ್ರಯಾಣಿಕರಿಂದ ಗಿಜಿಗುಡುತ್ತದೆ. ‘ಶಕ್ತಿ’ ಯೋಜನೆ ಜಾರಿಗೆ ಬಂದ ನಂತರ ಬಸ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದು ಕಳ್ಳರಿಗೆ ವರವಾಗಿದೆ.

ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬೆಂಗಳೂರು, ಶಿಕಾರಿಪುರ, ಸಾಗರ ಹಾಗೂ ಹರಿಹರ, ಚಿತ್ರದುರ್ಗದ ಕಡೆಗೆ ಬಸ್‌ಗಳು ತೆರಳುವ ಪ್ಲಾಟ್‌ಫಾರಂ 9, 10, 11 ಹಾಗೂ 12ರಲ್ಲಿ ಮತ್ತು ಪ್ರಯಾಣಿಕರ ನಿರೀಕ್ಷಣಾ ಕೊಠಡಿಯ ಬಳಿ ಹೆಚ್ಚು ಕಳ್ಳತನ ಪ್ರಕರಣ ವರದಿಯಾಗಿವೆ.

‘ನಿಲ್ದಾಣದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇದ್ದರೂ ಅವುಗಳಲ್ಲಿ ಬಹಳಷ್ಟು ಬಸ್‌ಗಳತ್ತ ಮುಖ ಮಾಡಿಲ್ಲ. ನಿಲ್ದಾಣದ ಅಂಗಡಿ, ವಾಣಿಜ್ಯ ಮಳಿಗೆಗಳತ್ತ ಮುಖ ತಿರುಗಿಸಿವೆ. ಕೆಲವು ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ. ಇರುವ ಕ್ಯಾಮೆರಾ ಗುಣಮಟ್ಟ ಹೊಂದಿಲ್ಲ. ವಾರದ ಹಿಂದೆ ವೃದ್ಧೆಯೊಬ್ಬರಿಗೆ ಕಾಸಿನ ಸರ ಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬ ₹ 25,000 ತೆಗೆದುಕೊಂಡು ವಂಚಿಸಿದ್ದಾನೆ. ಅದು ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ದಾಖಲಾದರೂ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಇದು ಕಳ್ಳರನ್ನು ಹಿಡಿಯಲು ಅಡ್ಡಿಯಾಗಿದೆ’ ಎಂದು ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹೇಳಿದರು. ಕ್ಯಾಮೆರಾದಲ್ಲಿ ದಾಖಲಾಗಿದ್ದ ಮುಸುಕಾದ ದೃಶ್ಯಾವಳಿಯನ್ನು ಅವರು ತೋರಿಸಿದರು.

ನಿಲ್ದಾಣದಲ್ಲಿ ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ದಟ್ಟಣೆಯ ನಡುವೆ ಪ್ರಯಾಣಿಕರಂತೆ ನಟಿಸಿ ಬಸ್ ಹತ್ತುವ ಕಳ್ಳರು ಕೃತ್ಯ ಎಸಗುತ್ತಾರೆ. ಬಸ್‌ ನಿಲ್ದಾಣದಲ್ಲಿಯೇ ಇಳಿದುಕೊಂಡರೆ ಅನುಮಾನ ಬರುತ್ತದೆ ಎಂದು ಮುಂದೆ ಇರುವ ಸರ್ಕಲ್‌ಗಳಲ್ಲಿ ಇಲ್ಲವೇ ನಿಲ್ದಾಣಗಳಲ್ಲಿ ಇಳಿದುಕೊಳ್ಳುತ್ತಾರೆ ಎಂದು ಪೊಲೀಸರು ಹೇಳುತ್ತಾರೆ.

ಒಂದೇ ತಂಡದ ಕೃತ್ಯ: ‘ಬಸ್ ನಿಲ್ದಾಣದಲ್ಲಿನ ಕ್ಯಾಮೆರಾಗಳು ಎತ್ತ ಮುಖ ಮಾಡಿವೆ. ಯಾವುದು ಕೆಲಸ ಮಾಡುತ್ತಿಲ್ಲ ಎಂಬುದನ್ನು ತಿಳಿದಿರುವ ತಂಡವೇ ಇಲ್ಲಿ ಕಳ್ಳತನ ಮಾಡುತ್ತಿದೆ. ಒಂದೇ ತಂಡ ಈ ಕೃತ್ಯದಲ್ಲಿ ತೊಡಗಿರುವ ಅನುಮಾನವಿದೆ. ಬಹುತೇಕ ಪ್ರಕರಣಗಳಲ್ಲಿ ಕಳ್ಳತನ ಕೃತ್ಯಗಳು ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ದಾಖಲಾಗದಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ’ ಎಂದು ಪೊಲೀಸರು ಹೇಳುತ್ತಾರೆ.

10 ಪತ್ರ ಬರೆದಿದ್ದೇವೆ: ‘ಈಗ ಇರುವ ಕ್ಯಾಮೆರಾಗಳು ಸರಿ ಇಲ್ಲ. ಚೆನ್ನಾಗಿರುವ ಕ್ಯಾಮೆರಾ ಅಳವಡಿಸಿ ಎಂದು ಬಸ್ ನಿಲ್ದಾಣದ ಆಡಳಿತಕ್ಕೆ 10 ಬಾರಿ ಪತ್ರ ಬರೆದಿದ್ದೇವೆ. ಜಾಸ್ತಿ ಕಳ್ಳತನ ನಡೆಯುವ ಸ್ಥಳ ಕೂಡ ಗುರುತಿಸಿ ಅವರಿಗೆ ಮಾಹಿತಿ ನೀಡಿದ್ದೇವೆ. ಆದರೂ ಕ್ಯಾಮೆರಾ ಅಳವಡಿಸಲು ಗಮನ ನೀಡುತ್ತಿಲ್ಲ’ ಎಂದು ಪೊಲೀಸರು ಬೇಸರ ವ್ಯಕ್ತಪಡಿಸುತ್ತಾರೆ.

ಈ ಮೊದಲು ಬಸ್‌ ನಿಲ್ದಾಣದಲ್ಲಿ ಪೊಲೀಸ್ ಇಲಾಖೆಯ ಕೇವಲ ಒಬ್ಬ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿತ್ತು. ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದಂತೆಯೇ ಹಗಲು–ರಾತ್ರಿ ಎರಡೂ ಪಾಳಿಗಳಲ್ಲಿ ಇಬ್ಬರನ್ನು ನೇಮಿಸಲಾಗುತ್ತಿದೆ. ಆದರೂ ಕಳ್ಳತನ ಪ್ರಕರಣ ಕಡಿಮೆ ಆಗಿಲ್ಲ ಎಂದು ತಿಳಿದುಬಂದಿದೆ.

ಎಸ್.ಜೆ.ಅನಿತಾ
ಎಸ್.ಜೆ.ಅನಿತಾ
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಖಾಸಗಿ ನಿರ್ವಹಣಾ ಸಂಸ್ಥೆಯವರು ಅಳವಡಿಸಿರುವ ಸಿ ಸಿ ಕ್ಯಾಮೆರಾ
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಖಾಸಗಿ ನಿರ್ವಹಣಾ ಸಂಸ್ಥೆಯವರು ಅಳವಡಿಸಿರುವ ಸಿ ಸಿ ಕ್ಯಾಮೆರಾ

ಶಿವಮೊಗ್ಗ ಬಸ್ ನಿಲ್ದಾಣದ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಕೆಗೆ ಟೆಂಡರ್ ಕರೆದಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಕ್ಯಾಮೆರಾ ಅಳವಡಿಸಲಾಗುವುದು

-ವಿಜಯ್‌ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ ಶಿವಮೊಗ್ಗ

ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ಕರೆದು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಕಳ್ಳತನ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸೂಚನೆ ನೀಡುವೆ

-ಅನಿಲ್‌ಕುಮಾರ್, ಭೂಮರಡ್ಡಿ ಶಿವಮೊಗ್ಗ ಎಎಸ್‌ಪಿ

ಬಸ್‌ ನಿಲ್ದಾಣದಲ್ಲಿ ₹ 2 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಒಂದೂವರೆ ವರ್ಷ ಆಗಿದೆ. ದೊಡ್ಡಪೇಟೆ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಇಲ್ಲಿಯವರೆಗೂ ಕಳ್ಳರು ಪತ್ತೆಯಾಗಿಲ್ಲ.

-ಎಸ್.ಜೆ.ಅನಿತಾ ಮೆಸ್ಕಾಂ ಉದ್ಯೋಗಿ ಶಿವಮೊಗ್ಗ

ಬೆಕ್ಕಿಗೆ ಗಂಟೆ ಕಟ್ಟುವವರಾರು?

‘ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಕೆಎಸ್‌ಆರ್‌ಟಿಸಿ ಒತ್ತು ಕೊಡುತ್ತಿಲ್ಲ. ಕನಿಷ್ಠ ಆಯಕಟ್ಟಿನ ಸ್ಥಳದಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿಲ್ಲ. ಬಸ್‌ ನಿಲ್ದಾಣದ ನಿರ್ವಹಣೆ ಹೊತ್ತಿರುವ ಖಾಸಗಿ ಸಂಸ್ಥೆ ಬರೀ ವಾಣಿಜ್ಯ ಮಳಿಗೆಗಳ ಸುರಕ್ಷತೆಗೆ ಒತ್ತು ನೀಡಿದೆ. ಇದು ಕಳ್ಳರ ಹಿಡಿಯಲು ತೊಂದರೆಯಾಗಿದೆ’ ಎಂದು ಪೊಲೀಸರು ಹೇಳುತ್ತಾರೆ. ‘ನಾವು ಪೊಲೀಸರಿಗೆ ಕಾವಲು ಇರಲು ಪ್ರತ್ಯೇಕ ಕೊಠಡಿ (ಪೊಲೀಸ್‌ ಚೌಕಿ) ವ್ಯವಸ್ಥೆ ಮಾಡಿದ್ದೇವೆ. ಪ್ರಯಾಣಿಕರ ಸುರಕ್ಷತೆ ಕಳ್ಳತನ ಆಗದಂತೆ ತಡೆಯುವುದು ಅವರ ಜವಾಬ್ದಾರಿ’ ಎಂಬುದು ಸಾರಿಗೆ ಸಂಸ್ಥೆ ಅಧಿಕಾರಿಗಳ ವಾದ. ಹಾಗಿದ್ದರೆ ಬೆಕ್ಕಿಗೆ ಗಂಟೆ ಕಟ್ಟುವರರು ಯಾರು ಎಂಬುದು ಪ್ರಯಾಣಿಕರ ಪ್ರಶ್ನೆ.

ಒಂದು ನಿಲ್ದಾಣ ನಾಲ್ಕು ಬಾಗಿಲು..

ಶಿವಮೊಗ್ಗ ಬಸ್ ನಿಲ್ದಾಣದೊಳಗೆ ಪ್ರವೇಶಿಸಲು ಕಟ್ಟಡದ ಮುಖ್ಯದ್ವಾರ ಮಾತ್ರವಲ್ಲದೇ ಎಡ ಬಲ ಹಾಗೂ ಹಿಂಭಾಗದ ಗೇಟ್ ಮೂಲಕವೂ ಜನರು ಒಳಗೆ ಬರಬಹುದಾಗಿದೆ. ಇದು ಕಳ್ಳರಿಗೆ ಅನುಕೂಲವಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಾರೆ. ‘ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ಹೇಳಿದ್ದೇವೆ. ಸಂಸ್ಥೆಯ ವಾಹನಗಳ ಹೊರತಾಗಿ ಸಾರ್ವಜನಿಕರು ಮುಖ್ಯದ್ಚಾರದ ಮೂಲಕವೇ ಒಳಗೆ ಬರುವಂತೆ ವ್ಯವಸ್ಥೆ ಮಾಡಲು ಕೋರಿದ್ದೇವೆ. ಆದರೂ ಅದಕ್ಕೆ ಮನ್ನಣೆ ದೊರೆತಿಲ್ಲ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT