ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ ಕೇಂದ್ರ ಕಾರಾಗೃಹ: ವಿಮಾನಗಳಿಗೆ ಅಡ್ಡಿಯ ಕಾರಣ ಜೈಲಿಗಿಲ್ಲ ಜಾಮರ್!

ಜಾಮರ್ ಅಳವಡಿಕೆಗೆ ಸಿಗದ ಅನುಮತಿ
Published 29 ಆಗಸ್ಟ್ 2024, 6:56 IST
Last Updated 29 ಆಗಸ್ಟ್ 2024, 6:56 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಮಾನ ಹಾರುವಾಗ, ಇಳಿಯುವಾಗ ಸಂವಹನಕ್ಕೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಇಲ್ಲಿನ ಸೋಗಾನೆಯಲ್ಲಿರುವ ನೂತನ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಜಾಮರ್ ಅಳವಡಿಕೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ  ಅನುಮತಿ ಕೊಟ್ಟಿಲ್ಲ. ಹೀಗಾಗಿ ಕಾರಾಗೃಹದ ಒಳಗಿರುವ ಕೈದಿಗಳು ಮೊಬೈಲ್‌ ಫೋನ್ ಬಳಸದಂತೆ ಕಡಿವಾಣ ಹಾಕಲು ಜಾಮರ್ ಅಳವಡಿಕೆ ಸಾಧ್ಯವಾಗಿಲ್ಲ.

ಸೋಗಾನೆಯಲ್ಲಿ 63 ಎಕರೆ ವ್ಯಾಪ್ತಿಯಲ್ಲಿರುವ ಕಾರಾಗೃಹ ಕಟ್ಟಡ ಶಿವಮೊಗ್ಗ ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡೇ ಇದೆ. ವಿಮಾನಗಳು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಸಾಧಿಸಲು ಇಲ್ಲವೇ ಸಂವಹನಕ್ಕೆ ಜಾಮರ್ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಕಾರಾಗೃಹದಲ್ಲಿ ಉಪಕರಣ ಅಳವಡಿಕೆಗೆ ಅನುಮತಿ ದೊರೆತಿಲ್ಲ.

ಸಾಮರ್ಥ್ಯಕ್ಕಿಂತ ಹೆಚ್ಚು: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ 500 ಜನ ಕೈದಿಗಳಿಗೆ ಸ್ಥಳಾವಕಾಶವಿದೆ. ಆದರೆ ಸದ್ಯ ಅಲ್ಲಿ 778 ಜನ ಕೈದಿಗಳು ಇದ್ದಾರೆ. ಕಾರಾಗೃಹದ ಸಾಮರ್ಥ್ಯಕ್ಕಿಂತ ಶೇ 50 ರಷ್ಟು ಕೈದಿಗಳು ಹೆಚ್ಚಿರುವ ಕಾರಣ ಜೈಲಿನೊಳಗೆ ಮೊಬೈಲ್‌ ಫೋನ್‌ ಬಳಕೆಯಂತಹ ಅಕ್ರಮ ಚಟುವಟಿಕೆ ತಡೆಯಲು ಜಾಮರ್ ಅಳವಡಿಕೆಗೆ ಎದುರಾದ ಈ ತಾಂತ್ರಿಕ ಸಮಸ್ಯೆ ಅಡ್ಡಿಯಾಗಿ ಪರಿಣಮಿಸಿದೆ ಎಂದು ಮೂಲಗಳು ಹೇಳುತ್ತವೆ.

ತಾಂತ್ರಿಕ ಸಾಧ್ಯತೆಗಳ ಪರಿಶೀಲನೆ: ‘ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಅವಧಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ಜೈಲ್‌ನ ಜಾಮರ್‌ ಚಾಲನೆಯಲ್ಲಿಡುವ ಯೋಜನೆಯೂ ಇತ್ತು. ಆದರೆ, ದೈನಂದಿನ ವಿಮಾನಗಳ ಹಾರಾಟದ ಹೊರತಾಗಿ ತುರ್ತು ಸಂದರ್ಭದಲ್ಲಿ ವಿಮಾನಗಳು ಬಂದು ಹೋಗುವುದು ಇರುತ್ತದೆ. ಹೀಗಾಗಿ ಬೇಕೆಂದಾಗ ಜಾಮರ್ ಆನ್ ಆಫ್ ಮಾಡಲು ಆಗುವುದಿಲ್ಲ. ಅದಕ್ಕೆ ಸಮಯ ಮಿತಿ ನಿಗದಿಪಡಿಸಲು ಆಗುವುದಿಲ್ಲ. ಬೇರೆ ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸಲು ಕಾರಾಗೃಹ ಇಲಾಖೆಗೆ ಹೇಳಿದ್ದೇನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸದ್ಯ ನಾನ್ ಲೀನಿಯರ್ ಜಂಕ್ಷನ್ ಡಿಟೆಕ್ಟರ್ (ಎನ್‌ಎಲ್‌ಜೆಡಿ) ಉಪಕರಣವನ್ನು ಜಾಮರ್‌ ಆಗಿ ಅಳವಡಿಸಲಾಗುತ್ತಿದೆ. ಜೈಲಿನ ಬ್ಯಾರಕ್‌ಗಳಿಗೆ ಮಾತ್ರ ಸೀಮಿತವಾಗುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ‘ಮಿಸಾ’ ಹೆಸರಿನ ತಾಂತ್ರಿಕತೆಯ ಜಾಮರ್ ಅಳವಡಿಸಲಾಗಿದೆ. ಅದರ ಅಧ್ಯಯನಕ್ಕೆ ಸೂಚಿಸಿದ್ದೇನೆ’ ಎಂದು ಅವರು ತಿಳಿಸಿದರು.

‘ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಉನ್ನತ ತಾಂತ್ರಿಕತೆಯ ಜಾಮರ್ ಅನ್ನು ಶೀಘ್ರವೇ ಪ್ರಾಯೋಗಿಕವಾಗಿ ಅಳವಡಿಕೆ ಮಾಡಿ ಪರಿಶೀಲನೆ ನಡೆಸಲಾಗುವುದು’ ಎಂದು ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಟೆಂಡೆಂಟ್ ಆರ್‌. ಅನಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’

‘ಜೈಲಿನ ಪಕ್ಕದಲ್ಲಿಯೇ ವಿಮಾನ ನಿಲ್ದಾಣ ಇರುವುದರಿಂದ ಜಾಮರ್ ಆನ್‌ ಮಾಡಿದಲ್ಲಿ ಅದು ತರಂಗಗಳ (ಫ್ರೀಕ್ವೆನ್ಸಿ) ಮೇಲೆ ಪರಿಣಾಮ ಬೀರಿ ಕಂಟ್ರೋಲ್‌ ರೂಮ್‌ಗೆ ವಿಮಾನಗಳ ಸಂಪರ್ಕ ತಪ್ಪುವ ಅವಕಾಶವಿರುತ್ತದೆ. ಈ ವಿಚಾರವನ್ನು ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಿಗದಿತ ಸ್ಥಳದಲ್ಲಿ (ಲಿಮಿಟೆಡ್ ಸ್ಪೇಸ್‌) ಮಾತ್ರ ಕೆಲಸ ಮಾಡುವ ತಾಂತ್ರಿಕತೆಯ ಜಾಮರ್ ಅಳವಡಿಕೆ ಸಾಧ್ಯವೇ ಎಂದು ಪರಿಶೀಲಿಸಲು ಹೇಳಿದ್ದೇನೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.

ಹೊಟ್ಟೆಯೊಳಗೆ ಮೊಬೈಲ್ ಫೋನ್ ಪತ್ತೆ!

2024ರ ಮಾರ್ಚ್‌ನಲ್ಲಿ ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್‌ ಕುಮಾರ್‌ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆಗಾಗಿ ಇಲ್ಲಿನ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದರು. ಆಗ ಸಿಕ್ಕಿ ಬೀಳುವ ಭಯದಲ್ಲಿ ಕೈದಿಯೊಬ್ಬ ಪರಶುರಾಮ ಅಲಿಯಾಸ್ ಚಿಂಗಾರಿ ಬ್ಯಾಟರಿ ಸಿಮ್ ಸಹಿತ ಮೊಬೈಲ್‌ ಫೋನ್ ನುಂಗಿದ್ದ. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಚಿಂಗಾರಿಗೆ ಆರಂಭದಲ್ಲಿ ಕಾರಾಗೃಹದಲ್ಲಿಯೇ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ನೋವು ಉಲ್ಬಣಗೊಂಡಿದ್ದರಿಂದ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಪರಿಶೀಲನೆ ನಡೆಸಿದಾಗ ಹೊಟ್ಟೆಯಲ್ಲಿ ಮೊಬೈಲ್‌ ಫೋನ್ ಇರುವುದು ಪತ್ತೆಯಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಏಪ್ರಿಲ್‌ 25ರಂದು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಡಾ.ನಿಯಾಜ್ ಅಹಮದ್‌ ನೇತೃತ್ವದ ವೈದ್ಯರ ತಂಡ ಆಪರೇಷನ್ ಮಾಡಿ ಚಿಂಗಾರಿಯ ಹೊಟ್ಟೆಯಲ್ಲಿದ್ದ ಮೊಬೈಲ್‌ ಫೋನ್ ಹೊರಗೆ ತೆಗೆ‌ದಿತ್ತು. ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾದ ಕಾರಣ ಕಾರಾಗೃಹದಲ್ಲಿ ಮೊಬೈಲ್‌ ಫೋನ್ ಹೊಂದುವುದಕ್ಕೆ ನಿಷೇಧ ಇರುವುದರಿಂದ ಚಿಂಗಾರಿ ವಿರುದ್ಧ ಜೈಲು ಸೂಪರಿಟೆಂಡೆಂಟ್ ಆರ್.ಅನಿತಾ ಆಗ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜೈಲಿನಿಂದ ವಿಡಿಯೊ ಕಾಲ್!
2023ರ ಏಪ್ರಿಲ್ 7ರಂದು ನಾಲ್ವರು ವಿಚಾರಣಾಧೀನ ಕೈದಿಗಳು ಜೈಲಿನಿಂದ ಸ್ನೇಹಿತರಿಗೆ ಇನ್‌ಸ್ಟಾಗ್ರಾಂ ಮೂಲಕ ವಿಡಿಯೊ ಕಾಲ್ ಮಾಡಿದ್ದರು. ಆಗಲೂ ಜೈಲ್ ಸೂಪರಿಟೆಂಡೆಂಟ್ ಆರ್.ಅನಿತಾ ತುಂಗಾ ನಗರ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು.

ಕಾರಾಗೃಹಕ್ಕೆ ಎಸ್ಪಿ ಭೇಟಿ ಪರಿಶೀಲನೆ

ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಬುಧವಾರ ಬೆಳಗಿನ ಜಾವ ಶಿವಮೊಗ್ಗ ಸೆಂಟ್ರಲ್‌ ಜೈಲ್‌ಗೆ ಭೇಟಿ ನೀಡಿ ಸತತ 4 ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಈ ವೇಳೆ ಬೀಡಿ ಪೊಟ್ಟಣ ಸಿಕ್ಕಿದೆ ಎಂದು ಎಸ್ಪಿ ತಿಳಿಸಿದರು.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೊತೆ ಸಹ ಆರೋಪಿಗಳಾದ ಜಗದೀಶ್ ಹಾಗೂ ಲಕ್ಷ್ಮಣ್‌ನನ್ನು ಬುಧವಾರ ಸಂಜೆ ಶಿವಮೊಗ್ಗ ಜೈಲಿಗೆ ಕರೆತರುವ ಕಾರಣ ಪೊಲೀಸರು ಬೆಳಿಗ್ಗೆ ಪರಿಶೀಲನೆ ನಡೆಸಿದ್ದರು. ಸಂಜೆ ಜಗದೀಶ್ ಹಾಗೂ ಲಕ್ಷ್ಮಣ್‌ನನ್ನು ಕರೆತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT