ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿಯಲ್ಲಿ ಆರ್‌ಎಸ್‌ಎಸ್‌ ಆಸ್ತಿ ಮೌಲ್ಯ ₹200 ಕೋಟಿ: ಕಿಮ್ಮನೆ ಆರೋಪ

Published 2 ಏಪ್ರಿಲ್ 2024, 15:56 IST
Last Updated 2 ಏಪ್ರಿಲ್ 2024, 15:56 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಜಾತಿ ಧರ್ಮದ ಆಧಾರದಲ್ಲಿ ಸರ್ಕಾರಿ ಜಾಗಗಳನ್ನು ಸಂಘಪರಿವಾರ ಮಂಜೂರು ಮಾಡಿಸಿಕೊಳ್ಳುತ್ತಿದೆ. ಪ್ರಶ್ನಿಸುವವರಿಗೆ ಹಿಂದೂ ವಿರೋಧಿ ಪಟ್ಟ ಕಟ್ಟುತ್ತಿದ್ದು ತೀರ್ಥಹಳ್ಳಿ ಸುತ್ತಮುತ್ತ ಆರ್‌ಎಸ್‌ಎಸ್‌ ಆಸ್ತಿ ಮೌಲ್ಯ ₹200 ಕೋಟಿಗೂ ಹೆಚ್ಚಿದೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಗಂಭೀರ ಆರೋಪ ಮಾಡಿದರು.

ಗಾಂಧಿ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇ.ಡಿ., ಐ.ಟಿ. ಅಸ್ತ್ರಗಳನ್ನು ಬಳಸಿಕೊಂಡು ಬಿಜೆಪಿಯು ಕೊಲೆಗಡುಕ ಆಡಳಿತ ನಡೆಸುತ್ತಿದೆ ಎಂದು ದೂರಿದರು.

‘ಬಿಜೆಪಿಯ ಆರ್ಥಿಕ ಭದ್ರತೆ ಇರುವ ಭೂಮಾಲೀಕರು ಗ್ಯಾರಂಟಿ ಯೋಜನೆಯನ್ನು ಭಿಕ್ಷೆ ಎಂದು ಹಂಗಿಸುತ್ತಾರೆ. ಜನರ ಸಾಮಾನ್ಯರ ಮೇಲೆ ಸಂಘದ ಕೆಟ್ಟ ದೃಷ್ಟಿ ಇದೆ ಎಂಬುದನ್ನು ಇಂತಹ ಹೇಳಿಕೆ ಪ್ರತಿಬಿಂಬಿಸುತ್ತದೆ. ಉತ್ತರಪ್ರದೇಶ, ಬಿಹಾರದಲ್ಲಿ ಇತ್ತೀಚಿನವರೆಗೂ ಜೀತ ಪದ್ಧತಿ ಜಾರಿಯಲ್ಲಿತ್ತು. ಇಂದಿರಾಗಾಂಧಿ ಕಾನೂನು ತಾರದಿದ್ದರೆ ಬಿಜೆಪಿ ಮುಖಂಡರು ಜನಸಾಮಾನ್ಯರನ್ನು ಶೋಷಣೆ ಮಾಡುತ್ತಿದ್ದರು’ ಎಂದು ಆರೋಪಿಸಿದರು.

‘ನರೇಂದ್ರ ಮೋದಿ ಸೋಲುವ ಭೀತಿಯಿಂದ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಪಕ್ಷದ ಹಣ ಇಲ್ಲದಿದ್ದರೆ ಚುನಾವಣೆಯಲ್ಲಿ ಕರಪತ್ರ ಹಂಚುವುದು ಕೂಡ ಸಾಧ್ಯವಿಲ್ಲ. ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಬಿಜೆಪಿಯ ಕೆಟ್ಟ ಸರ್ವಾಧಿಕಾರಿ ಆಡಳಿತಕ್ಕೆ ಜನರು ಉತ್ತರ ನೀಡಬೇಕು. ಭಾರತದ ಮಣ್ಣು, ಭಾವುಟ, ಧರ್ಮ ಎನ್ನುವವರಿಗೆ ಬಡತನದ ಹಸಿವು ಗೊತ್ತಿಲ್ಲ. ದೇಶದ ಎಲ್ಲಾ ಒಕ್ಕೂಟ ಪ್ರಾಂತ್ಯ, ಭಾಷೆ ಉಳಿಯಬೇಕಾದರೆ ರಾಜ್ಯದ ಸರ್ಕಾರಗಳು ಗಟ್ಟಿಗೊಳ್ಳಬೇಕು’ ಎಂದು ಕಿಮ್ಮನೆ ಹೇಳಿದರು. 

‘ದೇಶದ ಸ್ವತ್ತು ಮಾರುವುದನ್ನೇ ಬಿಜೆಪಿ ಅಭಿವೃದ್ಧಿ ಎಂದು ಜನರನ್ನು ವಂಚಿಸುತ್ತಿದೆ. ಖಾಸಗೀಕರಣದಿಂದ ಮೀಸಲಾತಿ ರದ್ದಾಗುವ ಆತಂಕ ಇದೆ. ದೇಶದ ಎಲ್ಲಾ ಮಾಧ್ಯಮಗಳು ಏಕತೆ, ಭ್ರಾತೃತ್ವಕ್ಕೆ ಧಕ್ಕೆ ಆಗದಂತೆ ವರದಿ ಮಾಡಬೇಕು. ಭ್ರಷ್ಟಾಚಾರ ಆರೋಪ ಹೊತ್ತು ಬಿಜೆಪಿ ಸೇರಿದವರು ಏನಾಗಿದ್ದಾರೆ ಎಂಬುದರ ಮೇಲೆ ‘ಪ್ರಜಾವಾಣಿ’ ಪತ್ರಿಕೆ ಬೆಳಕು ಚೆಲ್ಲಿದೆ’ ಎಂದು ಶ್ಲಾಘಿಸಿದರು.

ಎಂಎಡಿಬಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ, ಕೆಪಿಸಿಸಿ ಸದಸ್ಯ ಜಿ.ಎಸ್.‌ ನಾರಾಯಣರಾವ್‌, ಉಸ್ತುವಾರಿ ರಮೇಶ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT