ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಹಳದಿ, ಬಿಳಿ ಪಟ್ಟೆ, ಮಾರ್ಗಸೂಚಿ ಇಲ್ಲದ ರಸ್ತೆಗಳು

ಮಳೆಗಾಲದ ಅಪಾಯಕಾರಿ ವಾಹನ ಸವಾರಿ; ಮೈಮರೆತರೆ ಅಪಘಾತ
Published 26 ಮೇ 2024, 5:39 IST
Last Updated 26 ಮೇ 2024, 5:39 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಈ ರಸ್ತೆಗಳಲ್ಲಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸಲು ಸೂಚಿಸಲಾಗಿಲ್ಲ. ಚರಂಡಿಗೆ ಹೊಂದಿಕೊಂಡಿದ್ದರೂ ಹಳದಿ, ಬಿಳಿ ಪಟ್ಟೆಗಳಿಲ್ಲ. ವಾಹನ ಸವಾರರು ಇದು ಖಾಲಿ ರಸ್ತೆ ಎಂದು ವೇಗವಾಗಿ ಮುನ್ನುಗ್ಗಿದರೆ ಅಪಾಯ ಗ್ಯಾರಂಟಿ.

ಶಿವಮೊಗ್ಗ– ಮಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169 ಮತ್ತು ತೀರ್ಥಹಳ್ಳಿ– ಮಲ್ಪೆ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169 ‘ಎ’ ಮಾರ್ಗದ ಅನೇಕ ಕಡೆಗಳಲ್ಲಿ ರಸ್ತೆ ಸುರಕ್ಷತೆಗೆ ಸೂಚಿಸುವ ಕ್ರಮ ವಹಿಸಿಲ್ಲ. ಅಪಘಾತ ವಲಯಗಳಲ್ಲಿಯೂ ಫಲಕಗಳು ಗೋಚರಿಸುವುದಿಲ್ಲ. ಅಪರಿಚಿತ ರಸ್ತೆ ಸವಾರರಿಗೆ ರಸ್ತೆಯೇ ಜವರಾಯ ಆಗುವ ಅಪಾಯ ಕಾಡುತ್ತಿದೆ.

ಆಗುಂಬೆಯಂತಹ ನಿತ್ಯ ಹರಿದ್ವರ್ಣ ಅಭಯಾರಣ್ಯದ ನಡುವೆ ಹಾದು ಹೋಗುವ ರಸ್ತೆ ಬೇಸಿಗೆಯಲ್ಲಿಯೂ ಸೂರ್ಯನ ಮುಖ ನೋಡುವುದಿಲ್ಲ. ಚಳಿಗಾಲ ಮತ್ತು ಮಳೆಗಾಲದ ಮಂಜಿನಲ್ಲಿ ಇಲ್ಲಿನ ರಸ್ತೆಗಳು ಸಂಪೂರ್ಣ ಕಣ್ಮರೆಯಾಗುತ್ತವೆ. ಕೇವಲ 10 ಅಡಿ ಸಮೀಪದ ವಾಹನ ಗುರುತಿಸುವುದೂ ಕಷ್ಟದ ಕೆಲಸ. ಎಷ್ಟೇ ಅನುಭವಿ ಚಾಲಕನಾಗಿದ್ದರೂ ಇಲ್ಲಿನ ರಸ್ತೆಗಳಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ.

ಇದೀಗ ರಸ್ತೆ ವಿಸ್ತರಣೆಗೊಂಡಿದೆ. ಕಿರಿದಾದ ರಸ್ತೆಯಲ್ಲಿ ಚಲಿಸುವಾಗ ಮೆಲ್ಲಗೆ ಸಾಗುತ್ತಿದ್ದ ವಾಹನಗಳು ರಸ್ತೆ ಅಗಲವಾದ ನಂತರ ಇದೀಗ ವೇಗ ಹೆಚ್ಚಿಸಿಕೊಂಡಿವೆ. ನಿತ್ಯ ಸಣ್ಣ ಪ್ರಮಾಣದ ಹತ್ತಾರು ಅಪಘಾತಗಳು ನಡೆಯುತ್ತಲೇ ಇವೆ.

ಕತ್ತಲೆ ಬೆಳಕಿನ ಸಂಕಷ್ಟ: ಮಳೆಗಾಲದ ಸಂದರ್ಭ ಅರಣ್ಯ ಪ್ರದೇಶದಲ್ಲಿ ವಾಹನ ಚಾಲನೆ ಮಾಡುವಾಗ ಹಗಲಿನಲ್ಲಿಯೇ ಫೋರ್‌ ಇಂಡಿಕೇಟರ್‌, ಫಾಗ್‌ ಲೈಟ್‌ ಸೇರಿ ತರಹೇವಾರಿ ಬೆಳಕಿನ ಸಂಕೇತಗಳನ್ನು ಬಳಸಲಾಗುತ್ತದೆ. ರಾತ್ರಿಯ ಪರಿಸ್ಥಿತಿಯಂತೂ  ಹೇಳತೀರದು. ಎಷ್ಟೇ ಸಂಜ್ಞೆಗಳು ಇದ್ದರೂ ರಸ್ತೆಯ ಗುಂಡಿ, ಪಟ್ಟಿಗಳು ಅಷ್ಟಾಗಿ ಕಾಣಿಸುವುದಿಲ್ಲ. ಬಿಳಿ, ಹಳದಿ ಪಟ್ಟೆಯ ಮೇಲೆ ಹಾಕುವ ಪ್ಲಾಸ್ಟಿಕ್‌ ರೇಡಿಯಂ ರೋಡ್ ಸ್ಟಡ್‌ ಅಂದಾಜಿನ ಮೇಲೆಯೇ ಅನೇಕ ಚಾಲಕರು ವಾಹನ ಚಲಾಯಿಸುತ್ತಾರೆ. ವಿರುದ್ಧ ದಿಕ್ಕಿನಲ್ಲಿ ಚಲಿಸುವ ವಾಹನದ ಬೆಳಕು ಚಾಲಕರ ಕಣ್ಣಿಗೆ ಬೀಳುತ್ತಿದ್ದಂತೆಯೇ ಬೆಳಕಿನಲ್ಲಿಯೇ ಕತ್ತಲೆ ಆವರಿಸುತ್ತದೆ. ಇದು ಹಿರಿಯ ನಾಗರಿಕರು ಮತ್ತು ಕನ್ನಡಕ ಬಳಸುವವರಿಗೆ ವಿಪರೀತವಾಗಿ ಆಘಾತ ಸೃಷ್ಟಿಸುತ್ತದೆ. ಅನೇಕ ವೇಳೆ ಇವುಗಳಿಂದಲೇ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ತೀರ್ಥಹಳ್ಳಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗ ಮಧ್ಯದ ಆಗುಂಬೆ ರಸ್ತೆಯಲ್ಲಿ ಹಳದಿ ಬಿಳಿ ಪಟ್ಟೆ ಅಳವಡಿಸದಿರುವುದು
ತೀರ್ಥಹಳ್ಳಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗ ಮಧ್ಯದ ಆಗುಂಬೆ ರಸ್ತೆಯಲ್ಲಿ ಹಳದಿ ಬಿಳಿ ಪಟ್ಟೆ ಅಳವಡಿಸದಿರುವುದು
ಮಂಡಗದ್ದೆ ಶೆಟ್ಟಿಹಳ್ಳಿ ಆಗುಂಬೆ ನಾಲೂರು ಭಾಗದಲ್ಲಿ ಹಳದಿ ಬಿಳಿ ಬಣ್ಣದ ಪಟ್ಟೆಗಳಿಲ್ಲ. ಕೆಂಪು ಬಿಳಿ ಹಳದಿ ಸ್ಟಡ್ಸ್‌ ಹಾಕಿಲ್ಲ. ಪ್ರಯಾಣಿಕರಿಗೆ ಆಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು
ಮವೀಶ ಅರೇಹಳ್ಳಿ ಯುವ ಮುಖಂಡ
ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರ ರಸ್ತೆ ಸುರಕ್ಷತೆಯ ಫಲಕಗಳು ಮತ್ತು ಪಟ್ಟಿಗಳನ್ನು ಅಳವಡಿಸಲಾಗುತ್ತದೆ.
ದಿವಾಕರ್‌ ಸಿ.ಎಂ ಹೆದ್ದಾರಿ ಪ್ರಾಧಿಕಾರದ ಇಇ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT