ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆಯಲ್ಲಿ ಲೀನವಾಗುವ ಶ್ವೇತನಾರಿ ‘ಮಾವಿನಗುಂಡಿ’

ಪ್ರವಾಸಿಗರನ್ನು ಸೆಳೆಯುವ ಜೋಗದ ಸಮೀಪದ ಜಲಪಾತ
Last Updated 11 ಜುಲೈ 2018, 16:41 IST
ಅಕ್ಷರ ಗಾತ್ರ

ಕಾರ್ಗಲ್: ಈ ಶರಾವತಿ ಕಣಿವೆಯ ವೈಭವವೇ ಮನಮೋಹಕ. ಒಂದಕ್ಕಿಂತ ಇನ್ನೊಂದು ಭಿನ್ನ. ಇದಕ್ಕಿಂತ ಅದು ಸುಂದರ, ಅದಕ್ಕಿಂತ ಇದು ಸೊಗಸು..

ಪಶ್ಚಿಮ ಘಟ್ಟಗಳ ತಪ್ಪಲಿನಿಂದ ಬಿಳಿ ಹಾಲ್ನೊರೆಯ ಚೆಲುವನ್ನು ತನ್ನಲ್ಲಿ ಅಡಗಿಸಿಕೊಂಡಿರುವ, ಮೈ-ಮನಕ್ಕೆ ಮುದ ನೀಡುವ ಕಾನನದಲ್ಲಿ ಸೌಮ್ಯ ನಡಿಗೆ ಸಾಗುವ ಮಾವಿನ ಗುಂಡಿ ಜಲಪಾತ ನೋಡುಗರ ಗಮನ ಸೆಳೆಯುತ್ತದೆ. ಇದು ಶರಾವತಿ ಕೊಳ್ಳದಲ್ಲಿ ಭೋರ್ಗರೆದು ಅಬ್ಬರದಿಂದ ಧುಮ್ಮಿಕ್ಕುತ್ತಿರುವ ಜೋಗ ಜಲಪಾತದ ಪಕ್ಕದಲ್ಲೇ ಪ್ರವಾಸಿಗರನ್ನು ಸೆಳೆಯುತ್ತಿರುವ ಮತ್ತೊಂದು ಜಲಪಾತ.

ಪುಷ್ಯ ಮಳೆಯ ಅಬ್ಬರಕ್ಕೆ ಜೋಗ ಜಲಪಾತದಲ್ಲಿ ಜಲಧಾರೆ ಧುಮ್ಮಿಕ್ಕುತ್ತಾ ಭಾರಿ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೆ, ಜಲಪಾತದಿಂದ ಕೊಂಚ ದೂರದಲ್ಲಿರುವ ಮಾವಿನ ಗುಂಡಿ ಆರ್ಭಟವಿಲ್ಲದೇ ಮೈದುಂಬಿಕೊಂಡು ಸೌಮ್ಯವಾಗಿ ಶರಾವತಿ ಕಣಿವೆಯೊಳಗೆ ಜಾರುತ್ತಾ ಸೆಳೆಯುತ್ತದೆ.

ಜೋಗ ಜಲಪಾತಕ್ಕಿಂತ ತುಸು ಎತ್ತರದ ಇದು. ಉತ್ತರ ಕನ್ನಡ ಜಿಲ್ಲೆಯ ಮಾವಿನ ಗುಂಡಿ ಗ್ರಾಮದ ಸುತ್ತಮುತ್ತಲೂ ಸುರಿಯುವ ಮಳೆ ನೀರನ್ನು ಸೇರಿಸಿಕೊಂಡು ನದಿಯಂತೆ ಹರಿದು ಬರುತ್ತದೆ. ಒಮ್ಮೆಲೆ ಶರಾವತಿ ಕಣಿವೆಯ ಶಿಖರ ಪ್ರದೇಶದಿಂದ ಹೆಬ್ಬಂಡೆಗಳ ಮೇಲೆ ಬಿಳಿ ಹಾಲ್ನೊರೆಯನ್ನು ಚೆಲ್ಲುತ್ತದೆ. ಮಾವಿನ ಗುಂಡಿ ಜಲಪಾತವನ್ನು ‘ಕೆಪ್ಪೆಜೋಗ’ ಜಲಪಾತ ಎಂದು ಕರೆಯುತ್ತಾರೆ. ಮತ್ತೆ ಕೆಲವರು ‘ಗೇರುಸೊಪ್ಪ’ ಜಲಪಾತ ಎಂದು ಕರೆಯುತ್ತಾರೆ.

ಜೋಗಕ್ಕೆ ಬರುವ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಸೆಳೆಯುತ್ತಿರುವ ಈ ಜಲಪಾತ ಮಳೆಗಾಲ ಮುಗಿಯುವವರೆಗೂ ಪ್ರವಾಸಿಗರ ಮನತಣಿಸುತ್ತದೆ ಎಂದು ಛಾಯಾಗ್ರಾಹಕ ನಾಗರಾಜ ಹೇಳುತ್ತಾರೆ.
ಸಂತೋಷ್‌ಕುಮಾರ್‌ ಕಾರ್ಗಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT