ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೆಚ್ಚಿಸದೇ ಸಮಾಜ ತುಳಿಯುವ ಕೆಲಸ

ಸರ್ಕಾರದ ವಿರುದ್ಧ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಆಕ್ರೋಶ
Last Updated 10 ಏಪ್ರಿಲ್ 2021, 12:51 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿ ಸರ್ಕಾರ ವಾಲ್ಮೀಕಿ ಸಮಾಜದ ಮೀಸಲಾತಿ ಹೆಚ್ಚಿಸುವ ಬದಲು ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡುತ್ತಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಸವ ಕೇಂದ್ರದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಾತ್ರೆಯ ಯಶಸ್ಸಿಗೆ ಶ್ರಮಿಸಿದ ಮುಖಂಡರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಗಳು ಮೀಸಲಾತಿ ಕಲ್ಪಿಸುವಾಗ ಜನಸಂಖ್ಯೆಯ ಆಧಾರದಲ್ಲಿ ನೀಡಬೇಕಿದೆ. ಇದೇ ಆಧಾರದಲ್ಲಿ ಶೋಷಿತ ಸಮುದಾಯಗಳ ರಾಜಕೀಯ, ಆರ್ಥಿಕ ಮೀಸಲಾತಿಗಳು ಒಳಗೊಳ್ಳುತ್ತವೆ. ಇದೇ ಸೂತ್ರ ಶಿಕ್ಷಣ, ಉದ್ಯೋಗ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ವಾಲ್ಮೀಕಿ ಸಮಾಜಕ್ಕೆ ಸರ್ಕಾರ ಶೇ 7.5ರಷ್ಟು ಮೀಸಲಾತಿ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಮೀಸಲಾತಿಗಾಗಿ ಸಮಾಜ ಇನ್ನಷ್ಟು ಸಂಘಟಿತ ಹೋರಾಟ ಹಮ್ಮಿಕೊಳ್ಳಲಿದೆ ಎಂದರು.

ಮುಖ್ಯಮಂತ್ರಿ ಭರವಸೆ ನೀಡಿದ್ದರೂ, ಮೀಸಲಾತಿ ಹೆಚ್ಚಳ ಮಾಡಿಲ್ಲ. ಅಲ್ಲದೇ, ಈ ಬಾರಿಯ ಬಜೆಟ್‌ನಲ್ಲಿ ₹ 5 ಸಾವಿರ ಕೋಟಿ ಹಣ ಕಡಿಮೆ ಮಾಡಿದ್ದಾರೆ. ಸರ್ಕಾರ ಜನಾಂಗವನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ಮಾಡುತ್ತಿದೆ. ಸಮಾಜದಿಂದ ಆಯ್ಕೆಯಾದ ಶಾಸಕರು ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸುಮಾರು 60 ಲಕ್ಷ ವಾಲ್ಮೀಕಿ ಜನರು ಇದ್ದಾರೆ. ದೇಶದ ಜನಸಂಖ್ಯೆಯಲ್ಲಿ 10 ಕೋಟಿ ದಾಟಿದ್ದಾರೆ. ಈ ನಾಡಿಗೆ, ಈ ದೇಶಕ್ಕೆ ನಾಯಕ ಜನಾಂಗದ ಕೊಡುಗೆ ಸಾಕಷ್ಟಿದೆ. ಭೇಟೆಗಾರನಾದ ವಾಲ್ಮೀಕಿ ಮಂತ್ರ ಕಲಿತುಕೊಂಡು ರಾಮಾಯಣ ಬರೆದು ಜಗತ್ತಿಗೆ ಕೊಡುಗೆ ನೀಡಿದ್ದಾರೆ. ಅಲ್ಲಿಂದ ಎಲ್ಲಾ ಯುಗಗಳಲ್ಲೂ ನಮ್ಮ ಸಮಾಜದ ಶಕ್ತಿ ಬೆಳೆದು ಬಂದಿದೆ. ಈ ಶಕ್ತಿ ಪ್ರಜಾಪ್ರಭುತ್ವದಲ್ಲಿ ಯುಕ್ತಿಯಾಗಬೇಕಾಗಿದೆ. ಶಿಕ್ಷಣದ ಮೂಲಕ ನಾವು ಮತ್ತೆ ಒಟ್ಟಾಗಬೇಕಾಗಿದೆ.ನಾವು ಹೋರಾಟ ಮಾಡಿಯಾದರೂ ಸಮಾಜಕ್ಕೆ ಸಿಗಬೇಕಾದ ಗೌರವ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮೀಸಲಾತಿಯ ಹೋರಾಟ ನಿಲ್ಲುವುದಿಲ್ಲ. ರಾಜೇನಹಳ್ಳಿ ಮಠ ಪಾದಯಾತ್ರೆ ಮೂಲಕವೇ ಇಡೀ ಸಮುದಾಯ ತಲುಪಿಸುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರಶಾಂತ್ ಜಿ.ನಾಯಕ್, ರಾಜೇನಹಳ್ಳಿ ಶ್ರೀಗಳು ಸಾಂಸ್ಕೃತಿಕ ರಾಯಭಾರಿ. ಸಮಾಜದ ಜನರನ್ನು ಎಚ್ಚರಿಸಲು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಮಠದ ಮೂಲಕ ಜಾತ್ರೆ ಮಾಡುವ ಅವರ ಕನಸು ಯುವ ಸಮುದಾಯಗಳ ಒಟ್ಟುಗೂಡಿಸುವಿಕೆ ನಾಂದಿ ಹಾಡಿದೆ. ಭವಿಷ್ಯದಲ್ಲಿ ವಾಲ್ಮೀಕಿ ಬಲಿಷ್ಠ ಸಮಾಜವಾಗಲಿದೆ. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯವಾಗಿಯೂ ಛಾಪು ಮೂಡಿಸಲಿದೆ ಎಂದು ಭವಿಷ್ಯ ನುಡಿದರು.

ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಹನುಮಂತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT