ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆಗೆ ಗ್ರಾಮ ಮಟ್ಟದಲ್ಲಿ ಕಣ್ಗಾವಲು 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿವಿಧ ಯೋಜನೆ ಪ್ರಗತಿ ಪರಿಶೀಲನಾ ಸಭೆ
Last Updated 7 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಶಿವಮೊಗ್ಗ: ಬಾಲ್ಯವಿವಾಹ ತಡೆಯಲು ಗ್ರಾಮ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಣ್ಗಾವಲು ಇರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಸಂದರ್ಭದಲ್ಲಿ ಸದ್ದಿಲ್ಲದೇ ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಲೇ ಇವೆ. ಇವುಗಳ ಬಗ್ಗೆ ನಿರಂತರ ನಿಗಾವಹಿಸಬೇಕಾದ ಅನಿವಾರ್ತೆ ಇದೆ. ಎಪ್ರಿಲ್‍ನಿಂದ ಸೆಪ್ಡೆಂಬರ್ ಅಂತ್ಯದವರೆಗೆ ಒಟ್ಟು 12 ಬಾಲ್ಯವಿವಾಹ ಪ್ರಕರಣಗಳು ನಡೆದಿದ್ದು, ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.

48 ಬಾಲ್ಯ ವಿವಾಹ ತಡೆ:

ಲಾಕ್‌ಡೌನ್ ಆರಂಭದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ48 ಬಾಲ್ಯವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಗ್ರಾಮ ಮಟ್ಟದಲ್ಲಿ ಪಿಡಿಒಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಪೊಲೀಸರು ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಹಕರಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಮಕ್ಕಳ ಪಾಲನಾ ಸಂಸ್ಥೆಗಳು:

ಜಿಲ್ಲೆಯಲ್ಲಿ ಜೆಜೆ ಕಾಯ್ದೆಯಡಿ ನೋಂದಣಿಯಾದ 37 ಮಕ್ಕಳ ಪಾಲನಾ ಸಂಸ್ಥೆಗಳಿವೆ. ಕೋವಿಡ್ ಕಾರಣ 1121 ಮಕ್ಕಳನ್ನು ಅವರ ಪಾಲಕರ ವಶಕ್ಕೆ ಕಳುಹಿಸಲಾಗಿದ್ದು, ಪ್ರಸ್ತುತ 212 ಮಕ್ಕಳ ಮಾತ್ರ ಕೇಂದ್ರದಲ್ಲಿದ್ದಾರೆ. ಈಗಾಗಲೆ ಎಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಮೂಲಸೌಲಭ್ಯಗಳನ್ನು ಪರಿಶೀಲಿಸಲಾಗಿದೆ. ಹಿಂದಿನ ಕೊರತೆಗಳು ನಿವಾರಣೆಯಾಗಿವೇ ಎಂದು ಇನ್ನೊಮ್ಮೆ ಭೇಟಿ ನೀಡಿ ಖಾತ್ರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ವ್ಯವಸ್ಥೆ:

ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಪ್ರಸ್ತುತ ತ್ರೈಮಾಸಿಕದಲ್ಲಿ ಕೌಟುಂಬಿಕ ದೌರ್ಜನ್ಯ 7, ಅತ್ಯಾಚಾರ 15, ಲೈಂಗಿಕ ಕಿರುಕುಳ 9 ಸೇರಿ ಒಟ್ಟು 58 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 56 ಮಂದಿಗೆ ಕಾನೂನು, ವೈದ್ಯಕೀಯ, ಪೊಲೀಸ್ ನೆರವು ನೀಡಲಾಗಿದ್ದು, 19 ಪ್ರಕರಣಗಳಲ್ಲಿ ಆಶ್ರಯ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿರುವ ಸಖಿ ಕೇಂದ್ರದಲ್ಲಿ ದಿನದ 24 ಗಂಟೆ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಮೂರು ತಿಂಗಳ ಅವಧಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ 26 ಪ್ರಕರಣಗಳು ದಾಖಲಾಗಿವೆ. 2012ರ ಮಾರ್ಚ್‍ನಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 684 ಪ್ರಕರಣಗಳು ವರದಿಯಾಗಿವೆ. 270 ಪ್ರಕರಣಗಳು ಖುಲಾಸೆಗೊಂಡು 26 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಇನ್ನೂ 344 ಪ್ರಕರಣಗಳು ತನಿಖೆ ಮತ್ತು ವಿಚಾರಣೆಗೆ ಬಾಕಿಯಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಜೆ.ಜೆ.ಸುರೇಶ್ ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಂಕ್ರಪ್ಪ ಡೊನ್ನರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT