ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ಮಲ್ಲಪಲ್ಲು ಕೆರೆಗೆ ಗ್ರಾಮಸ್ಥರಿಂದಲೇ ಕಾಯಕಲ್ಪ

Published 23 ಮಾರ್ಚ್ 2024, 6:24 IST
Last Updated 23 ಮಾರ್ಚ್ 2024, 6:24 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಕೆರೆಕೊಪ್ಪ ಗ್ರಾಮಸ್ಥರು ಕಳೆಗುಂದಿದ್ದ ಮಲ್ಲಪಲ್ಲು ಕೆರೆಗೆ ಸಾರಾ ಸಂಸ್ಥೆ ಸಹಯೋಗದಲ್ಲಿ ಕಾಯಕಲ್ಪ ನೀಡುವ ಮೂಲಕ ಜಲಮೂಲದ ಪುನಶ್ಚೇತನಕ್ಕೆ ಶ್ರಮಿಸಿದ್ದಾರೆ.

ಈ ಹಿಂದೆ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲೂ ಕೆರೆಗಳನ್ನು ಕಾಣಬಹುದಾಗಿತ್ತು. ಆದರೆ, ಕೆರೆಗಳ ಸಮರ್ಪಕ ನಿರ್ವಹಣೆ ಕೊರತೆ, ಒತ್ತುವರಿ ಕಾರಣಗಳಿಂದಾಗಿ ಕೆರೆಗಳು ಕಾಣೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ತಮ್ಮ ಊರಿನ ಕೆರೆಯನ್ನು ಕಾಪಾಡಿಕೊಳ್ಳಬೇಕು ಎಂಬ ಜಾಗೃತಿ ಕೆರೆಕೊಪ್ಪ ಗ್ರಾಮಸ್ಥರಲ್ಲಿ ಮೂಡಿದ್ದು, ಸಾರಾ ಸಂಸ್ಥೆ ಪ್ರೋತ್ಸಾಹ ನೀಡಿದೆ.

ಮಲ್ಲಪಲ್ಲು ಕೆರೆ ಒಂದೂವರೆ ಎಕರೆ ವಿಸ್ತೀರ್ಣ ಹೊಂದಿದ್ದು, ಹಲವು ವರ್ಷಗಳಿಂದ ಅದರ ಅಚ್ಚುಕಟ್ಟುದಾರರಿಗೆ ಕೃಷಿಗೆ ಅಗತ್ಯವಾದ ನೀರನ್ನು ಒದಗಿಸುತ್ತಿತ್ತು. ಆದರೆ, ಕೆರೆಯ ಉಸ್ತುವಾರಿ ಸಮಪರ್ಕವಾಗಿ ಆಗದ ಕಾರಣ ಈಚಿನ ವರ್ಷಗಳಲ್ಲಿ ಸುತ್ತಲೂ ಮಟ್ಟಿ ಬೆಳೆದು ಕೆರೆ ಎಲ್ಲಿದೆ ಎಂಬುದೇ ಕಾಣದಂತಾಗಿತ್ತು. ಹೇಗಾದರೂ ಮಾಡಿ ಈ ಕೆರೆಯನ್ನು ಉಳಿಸಿಕೊಳ್ಳಬೇಕು ಎಂಬ ಸಂಕಲ್ಪ ಮಾಡಿಕೊಂಡ ಗ್ರಾಮಸ್ಥರು, ಮಾರ್ಚ್ 6ರಿಂದ ಕೆರೆ ಅಭಿವೃದ್ಧಿ ಸಮಿತಿ ರಚಿಸಿಕೊಂಡು, ಅಭಿವೃದ್ಧಿ ಕಾಮಗಾರಿ ಮೂಲಕ ಕೆರೆಯ ಅಸ್ತಿತ್ವ ಉಳಿಸಿಕೊಂಡಿದ್ದಾರೆ.

ಕಾಮಗಾರಿ ಆರಂಭಿಸಿದ 15 ದಿನಗಳಲ್ಲಿ ಮುಚ್ಚಿಹೋಗಿದ್ದ ಮಲ್ಲಪಲ್ಲು ಕೆರೆ ತನ್ನ ಮೂಲ ಸ್ವರೂಪ ಮರಳಿ ಪಡೆದಿದೆ. ಮುಂದಿನ ಮಳೆಗಾಲದ ಹೊತ್ತಿಗೆ ಕೆರೆಯಲ್ಲಿ ನೀರು ತುಂಬಿ ನಂತರವೂ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಕೆರೆ ಗಳಿಸಿಕೊಂಡಿದೆ. ಸುತ್ತಮತ್ತಲಿನ ನೂರಾರು ಎಕರೆ ಕೃಷಿಭೂಮಿಗೆ ನೀರುಣಿಸುವ ನಿರೀಕ್ಷೆ ಮೂಡಿದೆ.

ಸರ್ಕಾರದ ಮಾನದಂಡಗಳ ಪ್ರಕಾರ ಕೆರೆ ಅಭಿವೃದ್ಧಿ ಕೈಗೊಳ್ಳಲು ₹ 12 ಲಕ್ಷ , ಸಾರಾ ಸಂಸ್ಥೆಯ ಪ್ರಕಾರ ₹ 7 ಲಕ್ಷ ಖರ್ಚಿನ ಅಂದಾಜು ಮಾಡಲಾಗಿತ್ತು. ಆದರೀಗ ಗ್ರಾಮಸ್ಥರೇ ಶ್ರಮದಾನ ಹಾಕಿದ ಕಾರಣ ₹ 5 ಲಕ್ಷ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಸಾಧ್ಯವಾಗಿದೆ.

‘ಕಳೆದ ವರ್ಷ ಕಲ್ಕೊಪ್ಪ ಗ್ರಾಮಕ್ಕೆ ಹೋಗಿದ್ದಾಗ ಸಾರಾ ಸಂಸ್ಥೆಯ ಯೇಸುಪ್ರಕಾಶ್ ಕೆರೆ ಅಭಿವೃದ್ಧಿ ಕಾಯಕದಲ್ಲಿ ನಿರತರಾಗಿದ್ದರು. ಅವರೊಂದಿಗೆ ನಮ್ಮೂರಿನ ಕೆರೆಯನ್ನೂ ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಯಿತು. ಈಗ ಅದು ಫಲ ಕೊಟ್ಟಿದ್ದು ಕೆರೆಯ ಅಚ್ಚುಕಟ್ಟುದಾರರಿಗೆ ಅಭಿವೃದ್ಧಿ ಕಾಮಗಾರಿಯ ಪ್ರಯೋಜನ ದೊರಕಲಿದೆ’ ಎಂದು ಕೆರೆಕೊಪ್ಪ ಕೆರೆ ಸಮಿತಿ ಅಧ್ಯಕ್ಷ ರಾಧಾಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿಗೆ ಮುನ್ನ ಕೆರೆಯಲ್ಲಿ ಎಷ್ಟು ಹೂಳು ತುಂಬಿದೆ ಎಂಬದನ್ನು ಅಂದಾಜು ಮಾಡಲಾಗುತ್ತದೆ. ನಂತರ ಕೆರೆ ದಂಡೆಯ ಗಟ್ಟಿತನವನ್ನು ಪರಿಶೀಲಿಸಲಾಗುತ್ತದೆ. ಹಿಟ್ಯಾಚಿ ಬಳಸಿ ಹೂಳನ್ನು ತೆರವುಗೊಳಿಸಿ ಟಿಪ್ಪರ್ ಮೂಲಕ ಬೇರೆಡೆ ಸಾಗಿಸಿ ಕೆರೆ ದಂಡೆಯನ್ನು ಗಟ್ಟಿಗೊಳಿಸುವ ಮೂಲಕ ನೀರು ಇಂಗುವಂತೆ ಕಾಮಗಾರಿ ನಿರ್ವಹಿಸಲಾಗುತ್ತದೆ’ ಎಂದು ಸಾರಾ ಸಂಸ್ಥೆಯ ಸಂಚಾಲಕ ಧನುಷ್‌ಕುಮಾರ್ ತಿಳಿಸಿದರು.

ಮಲೆನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಸಾಂಪ್ರದಾಯಿಕ ಬೆಳೆಗಳ ವಿಸ್ತರಣೆ, ಬಗರ್ ಹುಕುಂ ಸಾಗುವಳಿ ಮೊದಲಾದ ಕಾರಣಗಳಿಗಾಗಿ ಅರಣ್ಯ ನಾಶದ ಪ್ರಮಾಣವೂ ಹೆಚ್ಚುತ್ತಿದೆ. ಕೆಲವೇ ವರ್ಷಗಳ ಹಿಂದೆ ಕೇವಲ ಮಳೆಯ ನೀರು ಹಾಗೂ ಸಹಜವಾಗಿ ದೊರಕುವ ಅಬ್ಬಿ ಮತ್ತು ಕೆರೆಗಳ ನೀರಿನಿಂದಲೇ ಕೃಷಿ ಕಾರ್ಯವನ್ನು ನೆಮ್ಮದಿಯಿಂದ ಕೈಗೊಳ್ಳುತ್ತಿದ್ದ ಮಲೆನಾಡಿಗರಿಗೆ ಈಚಿನ ವರ್ಷಗಳಲ್ಲಿ ನೀರಿನ ಕೊರತೆ ಕಾಡುತ್ತಿದ್ದು, ಜಲಮೂಲಗಳನ್ನು ಸಂರಕ್ಷಿಸಿಕೊಳ್ಳುವುದು ಇಂದಿನ ಆದ್ಯತೆಯಾಗಿದೆ ಎಂದು ಹೇಳಿದರು.

ಸಾಗರ ತಾಲ್ಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸಾರಾ ಸಂಸ್ಥೆಯು ಗ್ರಾಮಸ್ಥರ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಮಲ್ಲಪಲ್ಲು ಕೆರೆಯ ನೋಟ
ಸಾಗರ ತಾಲ್ಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸಾರಾ ಸಂಸ್ಥೆಯು ಗ್ರಾಮಸ್ಥರ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಮಲ್ಲಪಲ್ಲು ಕೆರೆಯ ನೋಟ
ಸರ್ಕಾರದಿಂದಲೇ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಿದರೂ ಹೆಚ್ಚಿನ ಕಡೆ ಹಣ ಖರ್ಚಾಗುತ್ತದೆಯೇ ವಿನಾ ಸಮರ್ಪಕವಾಗಿ ಕೆಲಸ ಆಗುವುವುದಿಲ್ಲ. ನಮ್ಮ ಸಂಸ್ಥೆ ಗ್ರಾಮಸ್ಥರ ಸಹಕಾರದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ಹಣ ಪೋಲಾಗುವುದಿಲ್ಲ. ಕೆಲಸದಲ್ಲಿ ಪಾರದರ್ಶಕತೆ ಇರುತ್ತದೆ.
-ಧನುಷ್‌ಕುಮಾರ್ ಸಂಚಾಲಕ ಸಾರಾ ಸಂಸ್ಥೆ

ಕೆರೆಗಳ ಕಾಯಕಲ್ಪಕ್ಕೆ ಪ್ರೇರಕ ಶಕ್ತಿ

ಯೇಸುಪ್ರಕಾಶ್ ಸಾರಾ ಸಂಸ್ಥೆಯು ಸಾಗರ ಹಾಗೂ ಹೊಸನಗರ ತಾಲ್ಲೂಕಿನ ಸುಮಾರು 14ಕ್ಕೂ ಹೆಚ್ಚು ಕೆರೆಗಳಿಗೆ ಕಾಯಕಲ್ಪ ಒದಗಿಸುವ ಕಾರ್ಯದಲ್ಲಿ ತೊಡಗಿದೆ. ಇದಕ್ಕೆ ಪ್ರೇರಕ ಶಕ್ತಿಯಾಗಿರುವವರು ಪುರಪ್ಪೆಮನೆ ಗ್ರಾಮದ ಯೇಸುಪ್ರಕಾಶ್. ರಂಗಭೂಮಿ ಚಲನಚಿತ್ರ ಸಾಮಾಜಿಕ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯೇಸುಪ್ರಕಾಶ್ ಅವರಲ್ಲಿರುವ ಪರಿಸರ ಕಾಳಜಿ ಸಾರಾ ಸಂಸ್ಥೆಯ ಈ ಕಾಯಕಕ್ಕೆ ಪ್ರೇರಣೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT