ಶನಿವಾರ, ಫೆಬ್ರವರಿ 4, 2023
17 °C
ಸಮಸ್ಯೆ ಮಧ್ಯೆ ಹುಡೋಡಿ ಗ್ರಾಮಸ್ಥರ ಕಂದೀಲು ಬೆಳಕಿನ ಜೀವನ

ನಾಡಿಗೆ ‘ಬೆಳಕು’ ನೀಡಿದ ಜನರ ‘ಕತ್ತಲ’ ಬದುಕು

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ನಾಡಿಗೆ ಬೆಳಕು ಕೊಟ್ಟ ಹೊಸನಗರ ತಾಲ್ಲೂಕಿನ ಕೆಲವಷ್ಟು ಗ್ರಾಮಗಳು ಇಂದೂ ಕತ್ತಲಿನಲ್ಲಿವೆ. ಮುಳುಗಡೆ ಶಾಪ ಇಲ್ಲಿನ ಜನರ ನೆಮ್ಮದಿ ಕಸಿದುಕೊಂಡಿದೆ. ‘ಬೆಳಕು’ ಧಾರೆ ಎರೆದ ಜನರು ಕಂದೀಲು ಬೆಳಕಿನಲ್ಲಿ ದಿನದೂಡುತ್ತಿದ್ದಾರೆ. 

ಮುಳುಗಡೆ ಹಿನ್ನೀರಿನಿಂದ ಸುತ್ತುವರಿದ ತಾಲ್ಲೂಕಿನ ನಗರ ಹೋಬಳಿಯ ಹುಡೋಡಿ ಗ್ರಾಮಸ್ಥರು ‘ಕತ್ತಲು’ ಬದುಕು ಸಾಗಿಸುತ್ತಿದ್ದಾರೆ.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಹುಡೋಡಿ ಗ್ರಾಮ ಮೂಲಸೌಕರ್ಯದಿಂದ ವಂಚಿತವಾಗಿದೆ. ಕಡಿದಾದ ದಾರಿ, ದಟ್ಟ ಕಾನನ, ಕಾಡುಪ್ರಾಣಿಗಳ ಉಪಟಳ, ವಿದ್ಯುತ್ ಸಂಪರ್ಕ ದೂರದ ಮಾತು.

10 ಮನೆಗಳನ್ನು ಹೊಂದಿರುವ ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮ ಯಾವ ಯೋಜನೆಯೂ ತಲುಪದ ನೃತದೃಷ್ಟ ಊರು.  

ಭೂ ಹಕ್ಕು ಮರೀಚಿಕೆ:

ಸಾವೇಹಕ್ಲು ಡ್ಯಾಂ ನಿರ್ಮಾಣದ ನಂತರದಲ್ಲಿ ನೀರು ನಿಲ್ಲುವವರೆಗೆ ಹುಡೋಡಿ ಪ್ರದೇಶವನ್ನು ಕೆಪಿಸಿ ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿತು. ಪಹಣಿಯಲ್ಲಿ ಕೆಪಿಸಿ ಎಂದು ಬರುತ್ತಿರುವ ಕಾರಣ ಈ ಭಾಗದ ಜನರಿಗೆ ಭೂಮಿ ಹಕ್ಕು ಸಿಕ್ಕಿಲ್ಲ.

ತಲಾತಲಾಂತರದಿಂದಲೂ ಇದು ಕಂದಾಯ ಭೂಮಿಯಾಗಿತ್ತು. ಮುಳುಗಡೆಯಲ್ಲಿ ಅಲ್ಪಸ್ವಲ್ಪ ಉಳಿದ ಜಮೀನು, ಮನೆಯಲ್ಲಿಯೇ ಕೆಲವರು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅರ್ಜಿ ಕೊಟ್ಟರೂ ಭೂಮಿಯ ಹಕ್ಕು ಮಾತ್ರ ಸಿಕ್ಕಿಲ್ಲ ಎಂದು ಬೇಸರಿಸಿದರು ಗ್ರಾಮದ ಶ್ರೀನಿವಾಸ್ ನಾಯ್ಕ್.

ನಡೆದೇ ಸಾಗಬೇಕು:

ಹುಡೋಡಿಗೆ ಹೋಗಬೇಕಾದರೆ ಮತ್ತೊಂದು ಗ್ರಾಮ ಪಂಚಾಯಿತಿಯನ್ನು ಹಾದು ಹೋಗಬೇಕು. ಅದು ಬರೋಬ್ಬರಿ 22 ಕಿಮೀ ದೂರ. ಅದರಲ್ಲೂ 7 ಕಿ.ಮೀ. ನಡೆದೇ ಸಾಗಬೇಕು. ಜನರು ಪಂಚಾಯಿತಿ ಕೆಲಸಕ್ಕೆ ಬರಬೇಕೆಂದರೆ ಒಂದು ದಿನ ಮೀಸಲಿಡಬೇಕು. ಖೈರಗುಂದ ಜಲಾಶಯದವರೆಗೆ ರಸ್ತೆ ಏನೋ ಇದೆ. ಅಲ್ಲಿಂದ ಮುಂದೆ ಇರುವ ಕಾಡು ರಸ್ತೆಯಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಹೋಗಿ ಬರುವುದೇ ಸವಾಲು. 

10 ಕೆ.ಜಿ. ಪಡಿತರ ಅಕ್ಕಿ ತರಲು 22 ಕಿ.ಮೀ. ದೂರದ ಕರಿಮನೆಗೆ ಹೋಗಬೇಕು. ಕೊರೊನಾ ಬಳಿಕ ಯಾವ ನ್ಯಾಯಬೆಲೆ ಅಂಗಡಿಯಲ್ಲಾದರೂ ರೇಷನ್ ಪಡೆಯುವ ಅವಕಾಶ ನೀಡಿದ್ದರಿಂದ ಖೈರಗುಂದದ ನ್ಯಾಯಬೆಲೆ ಅಂಗಡಿಯಲ್ಲಿ ಕೆಲವರು ಪಡಿತರ ಪಡೆಯುತ್ತಾರೆ. ಆದರೆ ಖೈರಗುಂದ ಡ್ಯಾಂವರೆಗೆ ನಡೆದು ಹೋಗಿ ಆಟೊಗೆ ಹೋಗಬೇಕು. ಆಟೊಗೆ ₹ 400 ಕೊಡಬೇಕು. ಮತ್ತೆ ಅಕ್ಕಿ ಹೊತ್ತು 4 ಕಿ.ಮೀ. ನಡೆಯಬೇಕು ಎಂಬುದು ಗ್ರಾಮಸ್ಥರ ಅಳಲು.

ಕಾಡೋತ್ಪತ್ತಿಗೆ ಬಿತ್ತು ಕಲ್ಲು:

ಗ್ರಾಮಸ್ಥರು ಬುಟ್ಟಿ ತಯಾರಿಕೆ, ಕಾಳು ಮೆಣಸು, ರಾಮಪತ್ರೆ, ಮುರುಗನಹುಳಿ, ಕಾಡುಜೇನು ಸೇರಿ ಕಾಡೋತ್ಪತ್ತಿಯಿಂದ ಬದುಕು ಕಟ್ಟಿಕೊಂಡಿದ್ದರು. ಆದರೆ ಕೆಲವು ವರ್ಷಗಳಿಂದ ನಿರ್ಬಂಧ ಹೇರಲಾಗಿದೆ. ಶಾಲಾ, ಕಾಲೇಜಿಗೆ ಹೋಗುವ ಮಕ್ಕಳು ದೂರದೂರಿನ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಶಿಕ್ಷಣ ಪಡೆಯುವಂತಾಗಿದೆ.

ಬಾಡಿಗೆ ಮನೆಯಲ್ಲಿ ವಾಸ:

ಹುಡೋಡಿಯಲ್ಲಿ ಕೃಷಿ ಅವಲಂಬಿತ 35 ಎಕರೆ ಭೂಮಿಯಿದ್ದು, ಕೆಲವರು ಅಡಿಕೆ ತೋಟ, ಜಮೀನು ಮಾಡಿಕೊಂಡಿದ್ದಾರೆ. ಪ್ರತಿಯೊಂದನ್ನು ತಲೆಮೇಲೆ ಹೊತ್ತು ತರಬೇಕಾಗಿದೆ. ಹೀಗಾಗಿ ಮೂರು ಕುಟುಂಬಗಳು ಸಮೀಪದ ಹುಲಿಕಲ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿವೆ. ಜಮೀನು ಕೆಲಸಗಳಿಗೆ ಬಂದು ಹೋಗುತ್ತಿದ್ದರೂ ಕಾಡು ಪ್ರಾಣಿಗಳ ಕಾಟಕ್ಕೆ ಬೆಳೆಯನ್ನು ಕಳೆದುಕೊಳ್ಳಬೇಕಾದ ಅತಂತ್ರ ಸ್ಥಿತಿ ಇದೆ.

ಆರೋಗ್ಯ ಕೈಕೊಟ್ಟರೆ ಕಂಬಳಿ ಡೋಲಿ..

ಯಾರಿಗಾದರೂ ಆರೋಗ್ಯ ತಪ್ಪಿದರೆ ಕಂಬಳಿ ಡೋಲಿಯೇ ಗತಿ. ಗ್ರಾಮದ ಶ್ರೀನಿವಾಸ್ ನಾಯ್ಕ್ ಎಂಬುವವರಿಗೆ ಮೂರು ಬಾರಿ ಹಾವು ಕಡಿದಿತ್ತು. ರಾತ್ರಿ ವೇಳೆ ಎರಡು ಬಾರಿ ಕಂಬಳಿಯಲ್ಲಿ ತುಂಬಿಕೊಂಡು 7 ಕಿ.ಮೀ. ಹೊತ್ತು ಸಾಗಿಸಲಾಗಿತ್ತು. ಆರೋಗ್ಯ ಹದಗೆಟ್ಟಾಗ ಇಂದಿಗೂ ಕಂಬಳಿ ಡೋಲಿಯೇ ಗತಿ. ಆಸ್ಪತ್ರೆಗೆ ಮಾಸ್ತಿಕಟ್ಟೆ ಇಲ್ಲವೇ ನಗರಕ್ಕೆ 25 ಕಿ.ಮೀ. ಸುತ್ತಿಕೊಂಡು ಹೋಗಬೇಕು ಎಂದು ಅಳಲು ತೋಡಿಕೊಂಡರು ರಮೇಶ.

ಅಂದು ನಕ್ಸಲ್ ಜಾಡು: 

ಅಂದು ಹುಡೋಡಿ ಕಬ್ಬಿನ ಹಿತ್ಲು ಸುತ್ತಲಿನ ಪ್ರದೇಶ ನಕ್ಸಲ್‌ ಪೀಡಿತ ಪ್ರದೇಶವಾಗಿತ್ತು. ನಕ್ಸಲ್ ಪ್ಯಾಕೇಜ್‌ನಿಂದ ಜಿಲ್ಲಾ ಪಂಚಾಯಿತಿಯಿಂದ ಕುಡಿಯುವ ನೀರಿನ ಬಾವಿ ನಿರ್ಮಿಸಲಾಗಿತ್ತು. ರಸ್ತೆ ಕಾಮಗಾರಿಗೆ ಹಣ ಬಂದಿದ್ದರೂ ವಿನಿಯೋಗಕ್ಕೆ ವನ್ಯಜೀವಿ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.

ಹುಡೋಡಿ ಗ್ರಾಮದ ಅಭಿವೃದ್ಧಿಗೆ ಕರಿಮನೆ ಪಂಚಾಯಿತಿ ಮನಸ್ಸು ಮಾಡುತ್ತಿದೆ. ಆದರೆ ಅಭಯಾರಣ್ಯ ಕಾಯ್ದೆ ಅಡ್ಡ ಬರುತ್ತಿದೆ ಎಂದರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ವೈ. ಸುರೇಶ್.

ಅಭಯಾರಣ್ಯ ವಿಸ್ತರಣೆ ತಂದ ಕುತ್ತು

ಬಾಣಲಿಯಿಂದ ಬೆಂಕಿಗೆ ಬಿದ್ದಂತೆ ಹುಡೋಡಿ ಜನರ ಬದುಕಿಗೆ ಅಭಯಾರಣ್ಯ ವಿಸ್ತರಣೆ ಕೊಳ್ಳಿ ಇಟ್ಟಂತಾಗಿದೆ. 2012ರಲ್ಲಿ ಮೂಕಾಂಬಿಕಾ ಅಭಯಾರಣ್ಯ ವಿಸ್ತರಣೆ ಮಾಡಲಾಗಿದ್ದು, ಕೆಪಿಸಿ, ಕಂದಾಯ ಭೂಮಿ ಎಂದು ನೋಡದೇ ಗಡಿ ಗುರುತು ಮಾಡಿರುವುದು ಹುಡೋಡಿ ಜನರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರಸ್ತೆಗೆ ಮಣ್ಣು ಹಾಕುವ ಹಾಗಿಲ್ಲ. ಹಳ್ಳಕೊಳ್ಳ ರಿಪೇರಿ ಮಾಡಿಕೊಳ್ಳುವಂತಿಲ್ಲ. ಬೇಲಿ ಹಾಕುವಂತಿಲ್ಲ.ದರಗು ತರುವಂತಿಲ್ಲ. ಕುಸಿದ ಮನೆಯನ್ನು ರಿಪೇರಿ ಕೂಡ ಮಾಡುವಂತಿಲ್ಲ. ಇದಕ್ಕೆ ಅಭಯಾರಣ್ಯ ನಿಯಮ ಅಡ್ಡಿಬರುತ್ತಿದೆ ಎಂದು ಬೇಸರಿಸಿದರು ಗ್ರಾಮಸ್ಥರು.

ಮುಳುಗಡೆಯೇ ಶಾಪವಾಯಿತು

ಚಕ್ರಾ, ಸಾವೆಹಕ್ಲು ಸೇರಿ ವಾರಾಹಿ ಯೋಜನೆ ಕಾರ್ಯಗತವಾಗುವ ಮುನ್ನ ಶಿವಮೊಗ್ಗ, ಸಾಗರದಿಂದ ಉಡುಪಿ ಕುಂದಾಪುರಕ್ಕೆ ಪ್ರತಿಯೊಂದು ಬಸ್‌ಗಳು ಹುಲಿಕಲ್, ಖೈರಗುಂದ, ಹುಡೋಡಿ, ಗಣಪೇಮನೆ, ಕಾಡಕೋಳಿ, ಕಟ್ಟಿನಕೈ, ನಿಲ್ಸಕಲ್ ಮೂಲಕ ಸಂಪರ್ಕ ಸಾಧಿಸುತ್ತಿದ್ದವು. ಆಗ ಹುಡೋಡಿ ಗ್ರಾಮಸ್ಥರು ಕರಿಮನೆ ಪಂಚಾಯಿತಿಗೆ ಬರಲು ಇದ್ದ ದೂರ ಕೇವಲ 3 ಕಿ.ಮೀ., ಆದರೆ ಡ್ಯಾಂ ನಿರ್ಮಾಣಗೊಂಡ ಬಳಿಕ 3 ಕಿ.ಮೀ. ಬದಲಿಗೆ 22 ಕಿಮೀ ದೂರ ಕ್ರಮಿಸಬೇಕಾದ ಅನಿವಾರ್ಯ ಇದೆ. ಆದರೆ ಹುಡೋಡಿಯಿಂದ ಹುಲಿಕಲ್‌ಗೆ ಬರಲು ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲ.

* ಇಲ್ಲಿಯ ಗ್ರಾಮಸ್ಥರು ಅರಣ್ಯ ಹಕ್ಕು ಸಮಿತಿಗೆ ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪಹಣಿಯಲ್ಲಿ ಕೆಪಿಸಿ ನಮೂದಾಗಿರುವ ಕಾರಣ ಹಕ್ಕುಪತ್ರ ನೀಡಲು ಬರುವುದಿಲ್ಲ. ಇದು ಕೆಪಿಸಿ ಮತ್ತು ಅರಣ್ಯ ಇಲಾಖೆಗೆ ಸಂಬಂಧಪಟ್ಟ ವಿಚಾರ. ಹುಡೋಡಿಯನ್ನು ಕೆಪಿಸಿ ವ್ಯಾಪ್ತಿಯಿಂದ ಬಿಟ್ಟುಕೊಡಬೇಕು.

-ಎಸ್.ಎಂ .ಹರೀಶ್, ಕಾರ್ಯದರ್ಶಿ, ಅರಣ್ಯ ಹಕ್ಕು ಸಮಿತಿ

* ಹುಡೋಡಿ ಸಮಸ್ಯೆ ಅರಿವಿದೆ. ಪಂಚಾಯಿತಿಯಿಂದ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಅಭಯಾರಣ್ಯ ಕಾಯ್ದೆ, ಪಹಣಿಯಲ್ಲಿನ ದೋಷ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಈಗಾಗಲೇ ಅರಣ್ಯ ಇಲಾಖೆ, ಅರಣ್ಯ ಹಕ್ಕು ಸಮಿತಿ, ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಲಾಗಿದೆ.

-ರಮೇಶ ಹಲಸಿನಹಳ್ಳಿ, ಅಧ್ಯಕ್ಷ, ಕರಿಮನೆ ಗ್ರಾ.ಪಂ.

* ನನಗೆ ಮೂರು ಬಾರಿ ಹಾವು ಕಚ್ಚಿತ್ತು. ಕಂಬಳಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅದೃಷ್ಟವಶಾತ್ ಬದುಕುಳಿದೆ. ಆದರೆ ಇದು ದಿನನಿತ್ಯದ ಪಾಡಾಗಿದೆ. ನಾವು ಯಾರಿಗೂ ಬೇಡದವರಾಗಿದ್ದೇವೆ.

-ಶ್ರೀನಿವಾಸ್ ನಾಯ್ಕ್, ಗ್ರಾಮಸ್ಥ

* ಈ ಹಿಂದೆ ನಕ್ಸಲ್ ಪ್ಯಾಕೇಜ್ ಬಂದಾಗ ಕೂಡ ಅಡ್ಡಿಯಾಗಿದ್ದು ವನ್ಯಜೀವಿ ಮತ್ತು ಅರಣ್ಯ ಇಲಾಖೆ. ಈಗಲೂ ಕೂಡ ಅಭಿವೃದ್ಧಿಗಾಗಿ ಶಾಸಕರ ಗಮನಕ್ಕೆ ತರಲಾಗಿದೆ. ಅವರು ಭರವಸೆ ನೀಡಿದ್ದಾರೆ. ಆದರೆ ವನ್ಯಜೀವಿ ಇಲಾಖೆ ಮತ್ತು ಅರಣ್ಯ ಇಲಾಖೆ ಧೋರಣೆ ತಡೆಯಾಗಿದೆ.

-ಎನ್.ವೈ. ಸುರೇಶ್, ಮಾಜಿ ಅಧ್ಯಕ್ಷ, ಗ್ರಾ.ಪಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು