ಶನಿವಾರ, ಜನವರಿ 28, 2023
15 °C
ಭದ್ರಾವತಿ: ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತದ ನಿರ್ಧಾರ

ಭದ್ರಾವತಿ: ವಿಐಎಸ್ಎಲ್ ಉಳಿವಿಗೆ ಪಕ್ಷಾತೀತ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ವಿಐಎಸ್ಎಲ್ ಉಳಿಸಲು ಭದ್ರಾವತಿ ನಾಗರಿಕರೆಲ್ಲರೂ ಒಂದಾಗಿ ಪಕ್ಷ, ಜಾತಿ, ಧರ್ಮ ಭೇದ ಮರೆತು ಸಂಘಟಿತರಾಗಿ ಹೋರಾಡಬೇಕು ಎಂದು ಬುಧವಾರ ನಗರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ವಿಐಎಸ್‍ಎಲ್ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ವಿಐಎಸ್‍ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘ ನ್ಯೂಟೌನ್ ಶಾರದಾ ಮಂದಿರದಲ್ಲಿ ಕರೆದಿದ್ದ ಸರ್ವ ಪಕ್ಷ, ಸಂಘ–ಸಂಸ್ಥೆಗಳ ಸಭೆಯಲ್ಲಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಶ್ರೀಹರ್ಷ ಮಾತನಾಡಿ, ‘ವಿಐಎಸ್ಎಲ್ ಉಳಿವಿಗಾಗಿ ಭದ್ರಾವತಿ ವಕೀಲರ ಸಂಘವು ಈಗಾಗಲೇ ಹೋರಾಟ ಆರಂಭಿಸಿದ್ದು, ಕಾರ್ಖಾನೆಯಲ್ಲಿ ನಿರಂತರ ಉತ್ಪಾದನೆ ಆಗಬೇಕು ಹಾಗೂ ಕಾರ್ಖಾನೆಯ ಕಾಮಿಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಯನ್ನು ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಕಳುಹಿಸಿದ್ದೇವೆ. ಗುತ್ತಿಗೆ ಕಾರ್ಮಿಕರು ಕೈಗೊಳ್ಳುವ ಹೋರಾಟವನ್ನು ನಮ್ಮ ಸಂಘ ಬೆಂಬಲಿಸುತ್ತದೆ’ ಎಂದರು.

‘ವಿಐಎಸ್ಎಲ್ ಉಳಿವು ಭದ್ರಾವತಿ ಉಳಿವು ಆಗಿದೆ. ಹೀಗಾಗಿ ಎಲ್ಲರೂ ಒಂದಾಗಿ ಕೆಂದ್ರ ಸರ್ಕಾರದ ಮೇಲೆ ಕಾರ್ಖಾನೆ ಮುಚ್ಚದಂತೆ ಒತ್ತಡ ಹಾಕಬೇಕು’ ಎಂದು ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಚಂದ್ರೇಗೌಡ ಹೇಳಿದರು.

‘ಪಕ್ಷದ ವತಿಯಿಂದ ಈಗಾಗಲೇ ನಿಯೋಗ ಮಾಡಿಕೊಂಡು ದೇವೆಗೌಡರ ಬಳಿ ತೆರಳಿ ಮನವಿ ಸಲ್ಲಿಸಿದ್ದೇವೆ. ಅವರು ಕೆಂದ್ರ ಸರ್ಕಾರದೊಂದಿಗೆ ಮಾತನಾಡುವ ಭರವಸೆ ನೀಡಿದ್ದಾರೆ. ಕಾರ್ಖಾನೆ ಉಳಿವಿಗೆ ಎಲ್ಲರೂ ಒಂದಾಗಿ ಹೋರಾಡೋಣ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕರುಣಾಮೂರ್ತಿ ಹೇಳಿದರು.

‘ವಿಐಎಸ್‌ಎಲ್ ಉಳಿವಿಗೆ ಈಗಾಗಲೇ ನಮ್ಮ ಸಮಿತಿ ಉಪ್ಪಿನ ಋಣ ಹೆಸರಿನ ಪಾದಯಾತ್ರೆ ನಡೆಸುತ್ತಿದೆ’ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ರಾಜು ವಿವರಿಸಿದರು.

ಅಂಜುಮನ್‌ ಸಂಸ್ಥೆಯ ಅಮೀರ್ ಜಾನ್, ಕ್ರೈಸ್ಟ್‌ ಸಂಸ್ಥೆಯ ಚಲುವರಾಜ್, ಒಕ್ಕಲಿಗರ ಸಂಘದ ಅಧ್ಯಕ್ಷ ರವಿ, ಕುರುಬರ ಸಂಘದ ಸಂತೋಷ್ ಪ್ರಗತಿಪರ ಸಂಘಟನೆಯ ಸುರೇಶ್, ಹನುಮಮ್ಮ, ಜಾನ್ ಬೆನ್ನಿ, ನಗರಸಭಾ ಸದಸ್ಯರಾದ ಲತಾ ಚಂದ್ರಶೇಖರ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಖಂಡರು ಮಾತನಾಡಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮುಂದಿನ ತಿಂಗಳು ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡೋಣ ಎಂದು ಸಲಹೆ ನೀಡಿದರು.

ಶಾಸಕ ಬಿ.ಕೆ. ಸಂಗಮೇಶ್ ಉಪಸ್ಥಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಿಐಎಸ್‌ಎಲ್‌ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಸಿ. ಮಾಯಣ್ಣ ವಹಿಸಿದ್ದರು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪದಾಧಿಕಾರಿ ರಾಕೇಶ್‌, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮ ಪ್ರಸಾದ್ ಸಭೆಯಲ್ಲಿ
ಉಪಸ್ಥಿತರಿದ್ದರು.

ಭದ್ರಾವತಿ ಬಂದ್ ಮಾಡೋಣ
ನಗರಸಭೆ ಸದಸ್ಯ, ಶಾಸಕರ ಸಹೋದರ ಬಿ.ಕೆ. ಮೋಹನ್ ಮಾತನಾಡಿ, ‘ಹೋರಾಟ ಮಾಡಲು ಪಕ್ಷಭೇದ ಮರೆತು ನಾವೆಲ್ಲರೂ ಸಿದ್ಧರಾಗೋಣ ಅದಕ್ಕಾಗಿ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲು ವಿವಿಧ ಸಮಿತಿಗಳ ರಚನೆ ಅಗತ್ಯವಾಗಿದೆ. ರಾಜಕೀಯ ನಾಯಕರಿಲ್ಲದೆ ನಮ್ಮ ಹೊರಾಟ ಯಶಸ್ಸು ಕಾಣಲು ಸಾಧ್ಯವಿಲ್ಲವಾದ್ದರಿಂದ ಪಕ್ಷ ಭೇದ ಮರೆತು ಹೋರಾಟ ಮಾಡೋಣ. ಎರಡು-ಮೂರು ಬಾರಿ ಭದ್ರಾವತಿ ಬಂದ್‌ಗೆ ಕರೆ ಕೊಡೋಣ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು