ಮಂಗಳವಾರ, ಮೇ 11, 2021
28 °C
ಬೆಳೆ ದರ್ಶಕ್ ಆ್ಯಪ್, ಭೂಮಿ ತಂತ್ರಾಂಶ ತಂದ ಪಜೀತಿ; ಪದೇ ಪದೇ ಬದಲಾವಣೆಯಾಗುವ ಮಾಹಿತಿ

ಆರ್‌ಟಿಸಿ ದಾಖಲೆಗಾಗಿ ಕಚೇರಿಗೆ ಅಲೆದಾಟ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಕೈ ಬರಹದ ಬದಲಾಗಿ ಗಣಕೀಕೃತ ಆರ್‌ಟಿಸಿ ವಿತರಣೆ ಆರಂಭವಾಗಿ 20 ವರ್ಷಗಳು ಸಂದಿವೆ. ಅಂದಿನಿಂದ ಇಂದಿನವರೆಗೆ ಆರ್‌ಟಿಸಿ ದಾಖಲೆಯಲ್ಲಿನ ದೋಷವನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಬೆಳೆ ಕಾಲಂ, ವಿಸ್ತೀರ್ಣ, ಹೆಸರು ತಪ್ಪಾಗಿ ಆರ್‌ಟಿಸಿ ದಾಖಲೆಯಲ್ಲಿ ಮುದ್ರಣವಾಗುತ್ತಿದ್ದು, ಸಮಸ್ಯೆ ಬಗೆಹರಿದಿಲ್ಲ.

ರೈತರಿಗೆ ದೋಷ ರಹಿತ ಆರ್‌ಟಿಸಿ ನೀಡುವುದಕ್ಕೆ ಕಂದಾಯ ಇಲಾಖೆಗೆ ಇದುವರೆಗೆ ಸಾಧ್ಯವಾಗಿಲ್ಲ. ತಪ್ಪು ಮಾಹಿತಿಯ ಆರ್‌ಟಿಸಿ ಸರಿಪಡಿಸುವುದು ಪ್ರತಿ ವರ್ಷ ರೈತರಿಗೆ ಸವಾಲಿನ ಕೆಲಸವಾಗಿದೆ ಎಂಬುದು ಈ ಭಾಗದ ರೈತರ ಅಳಲು.

ಸರ್ಕಾರ ಹೊಸದಾಗಿ ಆರಂಭಿಸಿರುವ ಬೆಳೆ ದರ್ಶಕ್ ಆ್ಯಪ್ ಆರ್‌ಟಿಸಿ ಹಾಗೂ ಭೂಮಿ ತಂತ್ರಾಂಶಕ್ಕೆ ಲಿಂಕ್ ಆಗುತ್ತಿಲ್ಲ. ಬೆಳೆ ಸಮೀಕ್ಷೆ ನಂತರ ಆರ್‌ಟಿಸಿ ದಾಖಲೆ ಬೆಳೆ ಕಾಲಂನಲ್ಲಿ ತಪ್ಪಾಗಿ ದಾಖಲಾಗುತ್ತಿದ್ದು, ಸಮಸ್ಯೆ ಹೆಚ್ಚಿದೆ. 

ರೈತರು ಪ್ರತಿ ವರ್ಷ ಬೆಳೆ ಸಾಲ ಪಡೆಯಲು ಬೆಳೆ ದಾಖಲೆ ಸಲ್ಲಿಕೆ ಅನಿವಾರ್ಯವಾಗಿದೆ. ಬೆಳೆ ಸಮೀಕ್ಷೆ ಉದ್ದೇಶದಿಂದ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು ಮೂರ್ನಾಲ್ಕು ತಿಂಗಳು ಕಷ್ಟಪಟ್ಟು ಮಾಡಿದ ಕೆಲಸ ಕೂಡ ಪ್ರಯೋಜನಕ್ಕೆ
ಇಲ್ಲದಂತಾಗಿದೆ.

ಮಹತ್ವಾಕಾಂಕ್ಷೆಯ ಭೂಮಿ ತಂತ್ರಾಂಶ ರೈತರಿಗೆ ಬಹಳಷ್ಟು ಅನುಕೂಲ ಕಲ್ಪಿಸಿದ್ದರೂ ಅನೇಕ ಸಮಸ್ಯೆಗಳಿಗೂ ಕಾರಣವಾಗಿದೆ. ನವೆಂಬರ್ ತಿಂಗಳಿನಲ್ಲಿ ನಡೆದ ಬೆಳೆ ಸಮೀಕ್ಷೆ ಅನ್ವಯ ಆರ್‌ಟಿಸಿ ದಾಖಲೆಯಲ್ಲಿ ಮಾಹಿತಿ ಮುದ್ರಣಗೊಂಡಿಲ್ಲ. ಬೆಳೆ ಸಮೀಕ್ಷೆ ಆ್ಯಪ್, ಭೂಮಿ ತಂತ್ರಾಂಶದ ನಡುವೆ ಸಂಪರ್ಕ ಇಲ್ಲದಿರುವುದು ಆರ್‌ಟಿಸಿ ದೋಷಕ್ಕೆ ಕಾರಣವಾಗಿದೆ. ಮುಖ್ಯ ಬೆಳೆ, ಮಿಶ್ರ ಬೆಳೆ ಕಾಲಂನಲ್ಲಿ ಬೆಳೆ ಹೆಸರು ಅದಲು ಬದಲಾಗಿದೆ. ಆರ್‌ಟಿಸಿಯಲ್ಲಿ ಬೆಳೆ ನಮೂದುಗೊಳ್ಳದ ಕಾರಣ ರೈತರು ಕೈ ಬರಹದ ಬೆಳೆ ದೃಢೀಕರಣ ಪಡೆಯಬೇಕಾದ ಸಂದರ್ಭ ಎದುರಾಗಿದೆ ಎಂದು ದೂರುತ್ತಾರೆ ಮಲೆನಾಡು ಸಂಘರ್ಷ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಹೊಸಕೊಪ್ಪ ಸುಂದರೇಶ್.

ನಿಯಮದ ಅನ್ವಯ ಬೆಳೆ ದೃಢೀಕರಣ ದಾಖಲೆ ವಿತರಣೆಗೆ ನಾಡಕಚೇರಿ ಉಪ ತಹಶೀಲ್ದಾರ್ ಕ್ರಮಕೈಗೊಳ್ಳಬೇಕು. ಗ್ರಾಮ ಲೆಕ್ಕಾಧಿಕಾರಿಗಳ ವರದಿ ಪಡೆಯದೇ ಬೆಳೆ ದೃಢೀಕರಣ ಪತ್ರ ನೀಡುವುದು ನಿಯಮ ಬಾಹಿರ. ಉಪ ತಹಶೀಲ್ದಾರ್ ಲೋಪದ ಹೊಣೆ ಹೊರಬೇಕಿದೆ ಎಂದು ಅಟಲ್ ಜನಸ್ನೇಹಿ ಕೇಂದ್ರ ನಿರ್ದೇಶನಾಲಯದ ನಿರ್ದೇಶಕರು 2015 ಮಾರ್ಚ್ 23ರಂದು ಆದೇಶ ಹೊರಡಿಸಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಕಂಪ್ಯೂಟರ್ ಆರ್‌ಟಿಸಿಯಲ್ಲಿ ಬೆಳೆ ಕಾಲಂ, ವಿಸ್ತೀರ್ಣ, ಹೆಸರು, ಹಕ್ಕು ಸೇರಿ ಇತರೆ ಅಂಶಗಳು ಬದಲಾಗುತ್ತಿದೆ. ಪ್ರತಿ ಆರ್‌ಟಿಸಿಯಲ್ಲಿನ ಲೋಪ ಸರಿಪಡಿಸಲು ರೈತರು ನೂರಾರು ಬಾರಿ ಕಚೇರಿಗೆ ಅಲೆಯಬೇಕಾಗಿದೆ. ದೋಷ ಸರಿಪಡಿಸಲಾದ ಆರ್‌ಟಿಸಿಯಲ್ಲಿ 15 ದಿನದಲ್ಲೇ ಮತ್ತೆ ಬದಲಾವಣೆಯಾಗಿರುವ ಪ್ರಕರಣಗಳು ಲೆಕ್ಕವಿಲ್ಲದಷ್ಟಿವೆ ಎಂದು ದೂರುತ್ತಾರೆ
ರೈತ ತಿಮ್ಮಪ್ಪಗೌಡ.

ಭೂಮಿ ತಂತ್ರಾಂಶದಲ್ಲಿ ಬೆಳೆ ಮಾಹಿತಿ ಸರಿಯಾಗಿ ನಮೂದಾಗುತ್ತಿಲ್ಲ. ಬೆಳೆ ದರ್ಶಕ್ ಆ್ಯಪ್ ಬಳಸುವ ಅವಕಾಶವನ್ನು ಈ ವರ್ಷ ರೈತರಿಗೆ ನೀಡಲಾಗಿತ್ತು. ಆ್ಯಪ್ ಮೂಲಕ ಬೆಳೆಯನ್ನು ಆರ್‌ಟಿಸಿಗೆ ಅಪ್‌ಲೋಡ್ ಮಾಡಬಹುದಾಗಿತ್ತು. ಬೆಳೆ ದರ್ಶಕ್ನಲ್ಲಿ ಕಾಣಿಸುವ ಬೆಳೆ ಮಾಹಿತಿ ಆರ್‌ಟಿಸಿ ದಾಖಲೆಯಲ್ಲಿ ಕಾಣಿಸದೇ ಇರುವುದು ರೈತರನ್ನು ಕಂಗಾಲಾಗಿಸಿದೆ. ಬೆಳೆ ದರ್ಶಕ್ ಆ್ಯಪ್ ಹಾಗೂ ಭೂಮಿ ತಂತ್ರಾಂಶ ಸಂಪರ್ಕ ಆಗದಿರುವುದು ರೈತರಲ್ಲಿ ಗೊಂದಲ ಮೂಡಿಸಿದೆ ಎಂದು ದೂರುತ್ತಾರೆ ರೈತ ಟೀಕಪ್ಪ ಗೌಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು