ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಭದ್ರಾ ಜಲಾಶಯ: 68 ವರ್ಷಗಳಲ್ಲೇ ಕನಿಷ್ಠ ಜಲ ಸಂಗ್ರಹ!

ದಾಖಲೆ ಬರೆದ ನೀರಿನ ಪ್ರಮಾಣ
Published 5 ಮೇ 2024, 6:31 IST
Last Updated 5 ಮೇ 2024, 6:31 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯ ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ನೀರು ಸಂಗ್ರಹದ ದಾಖಲೆ ಬರೆದಿದೆ. ಮೇ 4 ರಂದು ಜಲಾಶಯದಲ್ಲಿ 116.5 ಅಡಿ ನೀರು ಇತ್ತು. 2003ರಲ್ಲಿ 118 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಅದೇ ಇಲ್ಲಿಯವರೆಗಿನ ಕನಿಷ್ಠ ಸಂಗ್ರಹವೆನಿಸಿತ್ತು. ಕಳೆದ ವರ್ಷ ಇದೇ ದಿನ (ಮೇ 4) ಜಲಾಶಯದಲ್ಲಿ 145.7 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

ಭದ್ರಾ ಜಲಾಶಯದಲ್ಲಿ ಈಗ 8.5 ಟಿಎಂಸಿ ಅಡಿ ಡೆಡ್‌ಸ್ಟೋರೇಜ್‌ ಸೇರಿ ಒಟ್ಟು 13.8 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ‘ಇಷ್ಟು ಬೇಗ ನೀರು ಖಾಲಿ ಆಗಿರುವುದು ಹಾಗೂ ಅತ್ಯಂತ ಕಡಿಮೆ ಸಂಗ್ರಹ ಇರುವುದು ಜಲಾಶಯದ 68 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು’ ಎಂದು ಭದ್ರಾ ಜಲಾಶಯ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್‌.ರವಿಕುಮಾರ್ ಹೇಳುತ್ತಾರೆ.

‘ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ 128 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಮಳೆ ಈ ಬಾರಿ (2023ರ ಜೂನ್‌ನಿಂದ) ಸುರಿದಿದೆ. ಹೀಗಾಗಿ ಜಲಾಶಯಕ್ಕೆ ಬರೀ 20 ಟಿಎಂಸಿ ಅಡಿ ಮಾತ್ರ ನೀರು ಹರಿದು ಬಂದಿದೆ. 2022ರಲ್ಲಿ ಮಳೆ ಚೆನ್ನಾಗಿ ಸುರಿದಿದ್ದರಿಂದ ಜಲಾಶಯಕ್ಕೆ ಹರಿದು ಬಂದಿದ್ದ ನೀರಿನಲ್ಲಿ 39 ಟಿಎಂಸಿ ಅಡಿ ಸಂಗ್ರಹಿಸಿ ಇಟ್ಟುಕೊಂಡಿದ್ದೆವು. ಅದೇ ನೀರು ಇಲ್ಲಿಯವರೆಗಿನ ಬಳಕೆಗೆ ನೆರವಾಗಿದೆ’ ಎನ್ನುತ್ತಾರೆ.

ಗೇಟ್ ತೆರೆದಿಟ್ಟಿದ್ದೇವೆ: ‘ಜಲಾಶಯದಲ್ಲಿ ನಿಗದಿತ ಮಟ್ಟದಲ್ಲಿ ನೀರಿನ ಸಂಗ್ರಹ ಇಲ್ಲದ ಕಾರಣ ಬಲದಂಡೆ ಕಾಲುವೆಯ ಗೇಟ್ ಸಂಪೂರ್ಣ ತೆರೆದಿಟ್ಟಿದ್ದೇವೆ. ನಾಲೆಗೆ ಈ ಮೊದಲು 2,650 ಕ್ಯುಸೆಕ್ ನೀರು ಹರಿಸುತ್ತಿದ್ದೆವು. ಕಳೆದ ಮೂರು ದಿನಗಳಿಂದ 2,000 ಕ್ಯುಸೆಕ್‌ನಷ್ಟು ಮಾತ್ರ ಹರಿಸಲು ಸಾಧ್ಯವಾಗುತ್ತಿದೆ. ಇನ್ನು ಮೂರು ದಿನ (ಸೋಮವಾರ ಮಧ್ಯರಾತ್ರಿವರೆಗೆ) ನಾಲೆಗೆ ನೀರು ಹರಿಸಿ ನಿಲ್ಲಿಸಲಾಗುವುದು’ ಎಂದು ರವಿಕುಮಾರ್ ತಿಳಿಸಿದರು.

ಭದ್ರೆಯ ಹಿನ್ನೀರು ವನ್ಯಜೀವಿಗಳಿಗೂ ಆಸರೆ: ಭದ್ರಾ ಜಲಾಶಯದಲ್ಲಿ ಈಗ ಸಂಗ್ರಹವಿರುವ ಡೆಡ್‌ಸ್ಟೋರೆಜ್ ಹೊರತಾದ ನೀರಿನಲ್ಲಿ 2 ಟಿಎಂಸಿ ಅಡಿಯಷ್ಟು ಭದ್ರಾವತಿ ನಗರ, ಹೊಳೆಹೊನ್ನೂರು ಪಟ್ಟಣ ಹಾಗೂ ಸುತ್ತಲಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮುಂದಿನ 2 ತಿಂಗಳ ಕಾಲ ಪೂರೈಸಬೇಕಿದೆ.

ಬಿಸಿಲು ಹೆಚ್ಚಿರುವುದರಿಂದ ಜಲಾಶಯದಲ್ಲಿನ ನೀರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗುತ್ತಿದೆ. ಜೊತೆಗೆ ಹಿನ್ನೀರ ಪ್ರದೇಶದ ಸುತ್ತಲೂ ಇರುವ ಅಭಯಾರಣ್ಯದಲ್ಲಿ ಪ್ರಾಣಿಗಳಿಗೆ ಕುಡಿಯಲು ನೀರು ಇಲ್ಲವಾಗಿದೆ. ಅವು ಕೂಡ ಜಲಾಶಯದ ಹಿನ್ನೀರನ್ನೇ ಕುಡಿಯಲು ನೆಚ್ಚಿಕೊಂಡಿವೆ. ಇಲ್ಲಿ ನೀರು ಖಾಲಿಯಾದರೆ ಅವು ಸುತ್ತಲಿನ ಹಳ್ಳಿಗಳಿಗೆ ನುಗ್ಗುವ ಆತಂಕವಿದೆ ಎಂದು ರವಿಕುಮಾರ್ ಹೇಳುತ್ತಾರೆ.

ಮಾರಿದಿಬ್ಬ ಬಳಿಯ ಭದ್ರಾ ಜಲಾಶಯದ ಹಿನ್ನೀರ ಪ್ರದೇಶದಲ್ಲಿ ಮರಿಯೊಂದಿಗೆ ಬೀಡುಬಿಟ್ಟಿರುವ ಅನಾರೋಗ್ಯಪೀಡಿತ ಕಾಡಾನೆ
ಮಾರಿದಿಬ್ಬ ಬಳಿಯ ಭದ್ರಾ ಜಲಾಶಯದ ಹಿನ್ನೀರ ಪ್ರದೇಶದಲ್ಲಿ ಮರಿಯೊಂದಿಗೆ ಬೀಡುಬಿಟ್ಟಿರುವ ಅನಾರೋಗ್ಯಪೀಡಿತ ಕಾಡಾನೆ

ಕಾಡಾನೆ ಜೀವ ಉಳಿಸಲು ಹರಸಾಹಸ..

ಶಿವಮೊಗ್ಗ: ಭದ್ರಾ ಜಲಾಶಯದ ಹಿನ್ನೀರಿನ ಮಾರಿದಿಬ್ಬದ ಬಳಿ ಕಳೆದ ನಾಲ್ಕೈದು ದಿನಗಳಿಂದ ಕಾಡಾನೆಯೊಂದು ಮರಿಯೊಂದಿಗೆ ಬೀಡುಬಿಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅದಕ್ಕೆ ಮುಂದಕ್ಕೆ ನಡೆಯಲು ಆಗುತ್ತಿಲ್ಲ. ಬಿಸಿಲ ಬೇಗೆ ಆಹಾರವಿಲ್ಲದೇ ಆನೆ ಕೃಶವಾಗಿದೆ. ಮೂಳೆ ಕಾಣುತ್ತಿದೆ. ಅದರ ಜೀವ ಉಳಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಮರಿ ಪಕ್ಕದಲ್ಲಿ ಇರುವುದರಿಂದ ಆನೆ ತನ್ನ ಬಳಿಗೆ ಯಾರನ್ನೂ ಬಿಟ್ಟುಕೊಳ್ಳುತ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಔಷಧಿ ಬೆರೆಸಿದ ಹುಲ್ಲು ಹಣ್ಣನ್ನು ಸಮೀಪದಲ್ಲಿ ಇಟ್ಟು ಬರುತ್ತಿದ್ದಾರೆ. ಅದನ್ನು ತಾಯಿ ತಿನ್ನುತ್ತಿಲ್ಲ. ಮರಿ ತಿನ್ನುತ್ತಿದೆ. ಕಾಡಾನೆ ಆಗಿರುವುದರಿಂದ ಅದಕ್ಕೆ ಚಿಕಿತ್ಸೆ ನೀಡುವುದು ಅರಣ್ಯ ಇಲಾಖೆಗೆ ಸವಾಲಾಗಿ ಮಾರ್ಪಟ್ಟಿದೆ. ‘ಆನೆ ನಿತ್ರಾಣ ಸ್ಥಿತಿಯಲ್ಲಿದೆ. ಅರೆವಳಿಕೆ ಮದ್ದು ಕೊಟ್ಟರೆ ಸಾವಿಗೀಡಾಗಬಹುದು. ಹೀಗಾಗಿ ಆಹಾರದ ಮೂಲಕವೇ ಔಷಧಿ ನೀಡಲು ಪ್ರಯತ್ನಿಸುತ್ತಿದ್ದೇವೆ. 24 ಗಂಟೆಗಳ ನಿಗಾ ಇಟ್ಟಿದ್ದೇವೆ. ವೈದ್ಯರು ಹಾಗೂ ಅರಣ್ಯ ಸಿಬ್ಬಂದಿ ತಂಡ ಅಲ್ಲಿಯೇ ಬೀಡು ಬಿಟ್ಟಿದೆ’ ಎಂದು ಭದ್ರಾ ಹುಲಿ ಯೋಜನೆಯ ನಿರ್ದೇಶಕ ಯಶಪಾಲ್ ಕ್ಷೀರಸಾಗರ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಮೊಗ್ಗ ನಗರಕ್ಕೆ ಸದ್ಯ ನೀರಿನ ತೊಂದರೆ ಇಲ್ಲ

ಗಾಜನೂರಿನ ತುಂಗಾ ಜಲಾಶಯದಲ್ಲಿ 1 ಟಿಎಂಸಿ ಅಡಿ ನೀರು ಸಂಗ್ರಹವಿದ್ದು ಶಿವಮೊಗ್ಗ ನಗರದ ಜನರು ಇನ್ನೂ ಎರಡು ತಿಂಗಳು ಕುಡಿಯುವ ನೀರಿನ ವಿಚಾರದಲ್ಲಿ ನಿಶ್ಚಿಂತರಾಗಿರಬಹುದು. ‘ತುಂಗಾ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 0.75 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು. ಮುಂಜಾಗ್ರತಾ ಕ್ರಮವಾಗಿ ಈ ವರ್ಷ ತುಂಗಾದಲ್ಲಿ ನೀರು ಜಾಸ್ತಿ ಸಂಗ್ರಹಿಸಿಟ್ಟುಕೊಂಡಿದ್ದೆವು. ಅದು ಈಗ ನೆರವಾಗಿದೆ’ ಎಂದು ತುಂಗಾ ಜಲಾಶಯ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಾನಾಯ್ಕ ಹೇಳುತ್ತಾರೆ. ‘ಜಲಾಶಯದಲ್ಲಿ ಈಗ ಸಂಗ್ರಹ ಇರುವ ನೀರಿನ್ನು ತುಂಗಾ ಎಡದಂಡೆ ಹಾಗೂ ಬಲದಂಡೆ ನಾಲೆ ವ್ಯಾಪ್ತಿಯ ತೋಟಗಳಿಗೆ ಬಿಡಲಾಗುತ್ತಿದೆ. ಮೇ 4ರಿಂದ ನೀರು ಬಿಟ್ಟಿದ್ದು ಐದು ದಿನ ನಾಲೆಗಳಿಗೆ ನೀರು ಹರಿಸಿದರೆ 0.10 ಟಿಎಂಸಿ ಅಡಿ ಮಾತ್ರ ಖಾಲಿಯಾಗಲಿದೆ. ಉಳಿದ ನೀರು ಶಿವಮೊಗ್ಗ ನಗರದ ಜನರ ಬಾಯಾರಿಕೆ ನೀಗಿಸಲಿದೆ’ ಎಂದು ತಿಳಿಸಿದರು.

ಮಳೆ ಬಂದು ಡ್ಯಾಂ ತುಂಬಿದರೆ ಮಾತ್ರ ಇನ್ನು ಮುಂದೆ ಕೃಷಿಗೆ ನೀರು ಕೊಡಲು ಸಾಧ್ಯವಾಗುತ್ತದೆ. ಅದಕ್ಕೆ ದೇವರು ಮಾತ್ರ ಕರುಣೆ ತೋರಿಸಬೇಕು.
-ಎನ್.ರವಿಕುಮಾರ್‌ ಭದ್ರಾ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT