ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ

ಕಿರಣ್ ಕುಮಾರ್
Published 22 ಮಾರ್ಚ್ 2024, 7:08 IST
Last Updated 22 ಮಾರ್ಚ್ 2024, 7:08 IST
ಅಕ್ಷರ ಗಾತ್ರ

ಭದ್ರಾವತಿ: ಎಲ್ಲೆಡೆ ಬರಗಾಲ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಭದ್ರಾವತಿ ಜನರು ಮಾತ್ರ ಕೊಂಚ ನೆಮ್ಮದಿಯಲ್ಲಿದ್ದರು. ಸರ್. ಎಂ. ವಿಶ್ವೇಶ್ವರಯ್ಯ ಅವರು ನಿರ್ಮಿಸಿರುವ ಭದ್ರಾ ಜಲಾಶಯದ ನೀರಿನಿಂದಾಗಿ ಭದ್ರಾವತಿಯ ಜನರಿಗೆ ನೀರಿನ ಸಮಸ್ಯೆ ಇಲ್ಲ. ಆದರೆ, ಇದು ಕೇವಲ ನಗರ ಜನರಿಗೆ ಮಾತ್ರ ಸೀಮಿತವಾಗಿದೆ.

ನಗರದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪಂಪ್ ಹೌಸ್‌ ಮೂಲಕ ಸಾಕಷ್ಟು ನೀರನ್ನು ಪ್ರತಿದಿನ ಸರಬರಾಜು ಮಾಡಲಾಗುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 2 ರಿಂದ 3 ದಿನಕ್ಕೊಮ್ಮೆ 45 ನಿಮಿಷ ಮಾತ್ರ ಕುಡಿಯುವ ನೀರು ಬಿಡಲಾಗುತ್ತಿದೆ.

4 ರಿಂದ 5 ಕಿ.ಮೀ. ನಡೆದು ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯವಾಗಿ ಬಲದಂಡೆಯಲ್ಲಿ ನೀರು ಹರಿಯದೆ ಕೊರತೆ ಅನುಭವಿಸುತ್ತಿದ್ದು, ಅರದೋಟ್ಲು, ತಳ್ಳಿಕಟ್ಟೆ, ದಾಸರ ಕಳ್ಳಹಳ್ಳಿ, ಅಗಸನಹಳ್ಳಿ, ಎಮ್ಮೆ ಹಟ್ಟಿ, ಜಂಬರಕಟ್ಟೆ, ಕೆರೆ ಬೀರನಹಳ್ಳಿ, ಗಣನಾಯಕನಹಳ್ಳಿ, ಸಿದ್ಲಿಪುರ ಈ ಭಾಗದಲ್ಲಿ ನೀರಿನ ಕೊರತೆ ಹೆಚ್ಚಾಗಿದೆ.

‘ಈ ಭಾಗಗಳಲ್ಲಿ ಕೊಳವೆಬಾವಿಗಳು ಶೇಕಡ 40ರಷ್ಟು ಬತ್ತಿವೆ. ಕಾಲುವೆಗಳಲ್ಲಿ ನೀರಿಲ್ಲ, ಕೆರೆಗಳು ಮುಚ್ಚಿಕೊಂಡಿದ್ದು, ಹೂಳೆತ್ತುವ ಕಾರ್ಯ ನಡೆಸಬೇಕಿದೆ. ಮುಖ್ಯವಾಗಿ ಕೆರೆಗಳನ್ನು ನಿರ್ವಹಣೆ ಮಾಡಿ ನೀರು ತುಂಬಿದರೆ ಸುತ್ತಮುತ್ತಲಿನ ಪ್ರದೇಶದಲ್ಲಿನ ಕೊಳವೆಬಾವಿಗಳಲ್ಲಿ ನೀರು ನಿಲ್ಲುವ ಸಂಭವವಿದೆ’ ಎಂದು ರೈತ ಸಂಘದ ರಾಜ್ಯ ವಲಯ ಕಾರ್ಯದರ್ಶಿ ವೀರೇಶ್ ತಿಳಿಸಿದರು.

‘ಕಳ್ಳಿಹಾಳ್ ಗ್ರಾಮ ಪಂಚಾಯಿತಿಯ ಡಿ.ಬಿ.ಹಳ್ಳಿ ಗ್ರಾಮದಲ್ಲಿ 140 ಮನೆಗಳಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಚಂದನಕೆರೆ ಗಡಿಭಾಗದಿಂದ ಕಲ್ಲಿಹಾಳು ಗ್ರಾಮದ ಮೂಲಕ ಡಿ.ಬಿ.ಹಳ್ಳಿಗೆ ₹ 15 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಸುಮಾರು 4 ಕಿ.ಮೀ. ದೂರದಿಂದ ನೀರು ಎಳೆಯಬೇಕಿದೆ. ಅದಕ್ಕೆ ಇರುವುದು ಒಂದೇ ಮೋಟರ್. ಈ ಭಾಗದಲ್ಲಿ ಒಂದು ಬೋರ್‌ವೆಲ್‌ ಕೊರೆಸುವುದು ಅವಶ್ಯವಾಗಿದೆ’ ಎಂದು ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಅರುಣ್ ಕುಮಾರ್ ತಿಳಿಸಿದರು.

‘800 ರಿಂದ 1,000 ಅಡಿ ಬೋರ್ ಕೊರೆದರೂ, ನೀರು ಕಾಣದಂತಾಗಿದೆ. ಕೆಲವೊಂದು ಬೋರ್‌ಗಳಲ್ಲಿ ನೀರು ಬಂದರೂ, ಅದು ಕೇವಲ 1ರಿಂದ 2 ಇಂಚು ಮಾತ್ರ. ಅದೇ ನೀರನ್ನು ಗ್ರಾಮಸ್ಥರಿಗೆ, ಪಶು ಪ್ರಾಣಿಗಳಿಗೆ ಕೆಲ ರೈತರು ಒದಗಿಸುತ್ತಿದ್ದಾರೆ’ ಎಂದು ಗ್ರಾಮದ ರೈತ ಮಂಜೇಶ್ ತಿಳಿಸಿದರು.

‘ಭದ್ರಾ ಜಲಾಶಯದಿಂದ ಸಾಕಾಗುವಷ್ಟು ನೀರು ಪಂಪ್‌ಹೌಸ್‌ಗೆ ಸಿಗುತ್ತಿದೆ. ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಎಲ್ಲೂ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ 92 ಕೊಳವೆಬಾವಿ, 342 ಕೈಪಂಪ್‌ಗಳಿವೆ, 36 ಬೃಹತ್ ನೀರಿನ ಟ್ಯಾಂಕ್‌ಗಳಿಂದ 35 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ನಗರಸಭೆಯ ಆಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ತಿಳಿಸಿದರು.

ತಾಲ್ಲೂಕು ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಅಂತರ್ಜಲ ಕುಸಿದಿದೆ. ಹಲವು ಗ್ರಾಮಗಳ ಜಾನುವಾರುಗಳಿಗೆ ಪಂಚಾಯಿತಿಯಿಂದ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಜಲಾಶಯದಿಂದ ನೀರು ಹರಿಯುತ್ತಿರುವುದರಿಂದ ಸದ್ಯ ಕೃಷಿಗೆ ತೊಂದರೆ ಇಲ್ಲ.

15 ಲಕ್ಷದ ವೆಚ್ಚದಲ್ಲಿ ಚಂದನ ಕೆರೆ ಗಡಿ ಭಾಗದಿಂದ ಕಲ್ಲಿಹಾಳ್ ಗ್ರಾಮದ ಮೂಲಕ ಡಿ.ಬಿ. ಹಳ್ಳಿಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುತ್ತಿರುವುದು
15 ಲಕ್ಷದ ವೆಚ್ಚದಲ್ಲಿ ಚಂದನ ಕೆರೆ ಗಡಿ ಭಾಗದಿಂದ ಕಲ್ಲಿಹಾಳ್ ಗ್ರಾಮದ ಮೂಲಕ ಡಿ.ಬಿ. ಹಳ್ಳಿಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT