ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಸಂಕಟಗಳನ್ನು ಸವಾಲಾಗಿ ಸ್ವೀಕರಿಸಿದ ಛಲಗಾತಿ ಪದ್ಮಶ್ರೀ

Published 8 ಮಾರ್ಚ್ 2024, 6:55 IST
Last Updated 8 ಮಾರ್ಚ್ 2024, 6:55 IST
ಅಕ್ಷರ ಗಾತ್ರ

ಸಾಗರ: ಅನಿರೀಕ್ಷಿತವಾಗಿ ಎದುರಾಗುವ ಆಘಾತಗಳಿಂದ ತತ್ತರಿಸಿ, ಬದುಕು ಮುಗಿದೇ ಹೋಯಿತು ಎಂದು ಭಾವಿಸುವವರು ಹಲವರಿದ್ದಾರೆ. ಹೀಗೆ ಎದುರಾಗುವ ಸಂಕಟಗಳನ್ನು ಸವಾಲಾಗಿ ಸ್ವೀಕರಿಸಿ ಕ್ರಿಯಾಶೀಲವಾಗಿ ಬದುಕನ್ನು ಕಟ್ಟಿಕೊಳ್ಳುವವರೂ ನಮ್ಮ ನಡುವೆ ಇದ್ದಾರೆ. ಇಂತಹವರ ಸಾಲಿನಲ್ಲಿ ಸಾಗರ ತಾಲ್ಲೂಕಿನ ಹೆಗ್ಗೋಡಿನ ಚರಕ ಸಂಸ್ಥೆಯ ಉದ್ಯೋಗಿ ಪದ್ಮಶ್ರೀ ನಿಲ್ಲುತ್ತಾರೆ.

ಮೂಲತಃ ಬೆಳೆಯೂರು ಗ್ರಾಮದವರಾದ ಪದ್ಮಶ್ರೀ, ಪಿಯುಸಿ ವ್ಯಾಸಂಗದ ನಂತರ ಶಿವಮೊಗ್ಗದಲ್ಲಿ ಅಪರೆಲ್ ಡಿಸೈನಿಂಗ್ ಆ್ಯಂಡ್‌ ಫ್ಯಾಬ್ರಿಕೇಷನ್ ಟೆಕ್ನಾಲಜಿಯಲ್ಲಿ ಮೂರು ವರ್ಷದ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. ಕೆಲಕಾಲ ಬೆಂಗಳೂರಿನಲ್ಲಿ ಉದ್ಯೋಗ ಕೈಗೊಂಡು ತುಮಕೂರಿನ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ಭಾಗದ ಹೆಸರಾಂತ ಗಾಯಕ ಸುಭಾಷ್ ಹಾರೆಗೊಪ್ಪ ಅವರನ್ನು ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಗಂಡು ಮಗುವೂ ಜನಿಸಿತ್ತು. ಸುಭಾಷ್‌ ಅವರು ಅಕಾಲಿಕವಾಗಿ ನಿಧನರಾಗಿದ್ದರಿಂದ ಪದ್ಮಶ್ರೀ ಅವರು ಆಘಾತಕ್ಕೆ ಒಳಗಾಗಿದ್ದರು. ಇದರಿಂದ ಚೇತರಿಸಿಕೊಂಡು ಸಾಮಾಜಿಕವಾಗಿ ಬದುಕು ಕಟ್ಟಿಕೊಳ್ಳಲು ತೀರ್ಮಾನಿಸಿದರು. ಚರಕ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡು ತಮಗಿಂತಲೂ ಹೆಚ್ಚು ಕಷ್ಟದಲ್ಲಿರುವ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಿದರು.

ಚರಕ ಸಂಸ್ಥೆಯ ಕೈಮಗ್ಗ ಉತ್ಪನ್ನಗಳ ವಿನ್ಯಾಸ, ಮಾರಾಟ ಸೇರಿ ವಿವಿಧ ವಿಭಾಗಗಳ ಜವಾಬ್ದಾರಿ ನಿಭಾಯಿಸುತ್ತಲೇ ಪ್ರಸ್ತುತ ಚರಕದ ಡಿಸೈನ್ ಸೆಂಟರ್ ನಿರ್ದೇಶಕರಾಗಿದ್ದಾರೆ. ದೆಹಲಿ, ಕೋಲ್ಕತ್ತ ಮೊದಲಾದ ನಗರಗಳಿಗೆ ಚರಕದ ಮಹಿಳೆಯರೊಂದಿಗೆ ಕೈಮಗ್ಗ ನೇಕಾರಿಕೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಈ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದ್ದಾರೆ. ಚರಕ ಉತ್ಸವದ ಅಂಗವಾಗಿ ಪ್ರದರ್ಶಿಸುವ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಮಲೆನಾಡು ಭಾಗದ ಮಹಿಳೆಯರೇ ಕಟ್ಟಿರುವ ತಾಳಮದ್ದಲೆ ತಂಡದಲ್ಲಿ ಅರ್ಥ ಹೇಳುವ ಪಾತ್ರವನ್ನೂ ಪದ್ಮಶ್ರೀ ನಿರ್ವಹಿಸುತ್ತಿದ್ದಾರೆ. ಪುರಾಣದ ಪಾತ್ರಗಳನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸುವ ಕೆಲಸವನ್ನು ತಾಳಮದ್ದಲೆ ತಂಡ ಮಾಡುತ್ತಿದೆ. ಚರಕ ಸಂಸ್ಥೆಯ ಆಶಯಗಳನ್ನೆ ಹೊತ್ತಿರುವ ಸಾಗರದ ಜೀವನ್ಮುಖಿ ಸಂಸ್ಥೆಯಲ್ಲೂ ಪದ್ಮಶ್ರೀ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕುಟುಂಬ, ಉದ್ಯೋಗ ಎರಡರ ನಡುವೆ ಸಮನ್ವತೆ ಸಾಧಿಸಿದ್ದಾರೆ.

‘ಪತಿ ಸುಭಾಷ್ ಮರಣದ ನಂತರ ಮತ್ತೆ ಮದುವೆಯಾಗುವಂತೆ ಹಲವು ಪ್ರಸ್ತಾಪಗಳು ಬಂದಿದ್ದವು. ಅವರ ತಂದೆ ತಾಯಿಗೆ ನಾನೇ ಮಗಳು ಹಾಗೂ ಸೊಸೆ. ಮಗನ ಭವಿಷ್ಯವೇ ಮುಖ್ಯವಾಗಿರುವುದರಿಂದ ಮರು ಮದುವೆಯ ಯೋಚನೆ ಇಲ್ಲದೆ ಬದುಕು ಸಾಗುತ್ತಿದೆ’ ಎನ್ನುತ್ತಾರೆ ಪದ್ಮಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT