ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆಯೊಂದಿಗೆ ಸಾಮಾಜಿಕ ಕಳಕಳಿ ಮೆರೆದ ನಟ ಯೇಸು ಪ್ರಕಾಶ್

Published : 1 ಏಪ್ರಿಲ್ 2024, 6:15 IST
Last Updated : 1 ಏಪ್ರಿಲ್ 2024, 6:15 IST
ಫಾಲೋ ಮಾಡಿ
Comments

ಸಾಗರ: ರಂಗಭೂಮಿ, ಕಿರುತೆರೆ, ಚಲನಚಿತ್ರ, ಯಕ್ಷಗಾನ, ಪರಿಸರ, ಸಾಮಾಜಿಕ ಹೋರಾಟ, ರಾಜಕೀಯ, ಶೈಕ್ಷಣಿಕ ಜಾಗೃತಿ.. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಲವಲವಿಕೆಯಿಂದ ಓಡಾಡುತ್ತಿದ್ದ ಸಾಮಾಜಿಕ ಕಳಕಳಿಯ ಕಲಾವಿದ ಯೇಸು ಪ್ರಕಾಶ್ ನಿಧನದ ಸುದ್ದಿ ಈ ಭಾಗದ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ಅತೀವ ನೋವು ತಂದಿದೆ.

ಬಾಲ್ಯದಲ್ಲಿಯೇ ರಂಗಭೂಮಿ, ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಯೇಸು ಪ್ರಕಾಶ್ ಅವರು ಕುಗ್ವೆಯ ರಂಗಸಂಕುಲ, ನೀನಾಸಂ ಬಳಗ, ನಾಡಚಾವಡಿ, ಕೆ.ವಿ.ಸುಬ್ಬಣ್ಣ ರಂಗಸಮೂಹ, ಹಾಲ್ದೀಪ ಚಂಡೆಬಳಗ ಮೊದಲಾದ ಸಂಸ್ಥೆಗಳ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ದ್ದರು.

ಕೆ.ವಿ.ಸುಬ್ಬಣ್ಣ, ಪ್ರಸನ್ನ, ಚಂದ್ರಶೇಖರ ಕಂಬಾರ, ಅತುಲ್ ತಿವಾರಿ, ಚಿದಂಬರರಾವ್ ಜಂಬೆ, ಕೆ.ವಿ.ಅಕ್ಷರ, ವೆಂಕಟರಮಣ ಐತಾಳ, ಪ್ರಕಾಶ್ ಬೆಳವಾಡಿ, ರಘುನಂದನ, ಕೆ.ಜಿ.ಕೃಷ್ಣಮೂರ್ತಿ ಮತ್ತಿತರ ನಿರ್ದೇಶಕರ ನಾಟಕಗಳಿಗೆ ಬಣ್ಣ ಹಚ್ಚಿದ್ದು ಯೇಸು ಪ್ರಕಾಶ್ ಹೆಗ್ಗಳಿಕೆ.

ಎಸ್.ನಾರಾಯಣ್ ನಿರ್ದೇಶನದ ‘ವೀರೂ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಯೇಸು ‘ಸಂತ’, ‘ಮಾದೇಶ’, ‘ಗುಣವಂತ’, ‘ಯಾರೇ ಕೂಗಾಡಲಿ’, ‘ಸುಗ್ರೀವ’, ‘ಸಾರಥಿ’, ‘ರಾಜಾಹುಲಿ’, ‘ಸಂತೆಯಲ್ಲಿ ನಿಂತ ಕಬೀರ’, ‘ಕಲ್ಪನಾ-2’ ಸೇರಿ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಬಟ್ಟೆಮಲ್ಲಪ್ಪ ಗ್ರಾಮದ ಸಾರಾ ಸಂಸ್ಥೆಯ ಮೂಲಕ ಜಲಸಾಕ್ಷರತೆ, ಇಂಗುಗುಂಡಿ ನಿರ್ಮಾಣ, ಹಸರೀಕರಣ, ಕೆರೆಗಳ ಪುನಶ್ಚೇತನದಂತಹ ಪರಿಸರ ಸಂಬಂಧಿ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಗರ-ಹೊಸನಗರ ಭಾಗದ 25ಕ್ಕೂ ಹೆಚ್ಚು ಕೆರೆಗಳ ಪುನಶ್ಚೇತನ ಕಾಮಗಾರಿಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದರು.

ಹರಿದ್ರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ, ಅಗತ್ಯ ಬಿದ್ದಾಗ ಬೀದಿಗಿಳಿದು ಹೋರಾಟ ನಡೆಸಿದ್ದರು. ಶರಾವತಿ ಹಿನ್ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಯ ಪ್ರಸ್ತಾಪ ಬಂದಾಗ ಅದರ ವಿರುದ್ಧ ಇಲ್ಲಿ ನಡೆದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಹೆಣ್ಣುಮಕ್ಕಳು ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂಬ ತುಡಿತ ಅವರಲ್ಲಿತ್ತು. ಅವರ ಪ್ರೋತ್ಸಾಹದಿಂದಾಗಿಯೇ ಪತ್ನಿ ಶೈಲಜಾ, ಪುತ್ರಿ ಮಧುನಿಷಾ ಕೂಡ ನಾಟಕ ಹಾಗೂ ಯಕ್ಷಗಾನಕ್ಕೆ ಬಣ್ಣ ಹಚ್ಚಿದ್ದರು.

ಊರವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅಪರೂಪದ ಕಲಾವಿದ ಯೇಸು ಪ್ರಕಾಶ್ ಅವರ ಅಕಾಲಿಕ ನಿಧನ ಮಲೆನಾಡಿನ ಪರಿಸರಕ್ಕೆ ತುಂಬಲಾರದ ನಷ್ಟವಾಗಿದೆ.

ಅಂತ್ಯಕ್ರಿಯೆ

ಶನಿವಾರ ನಿಧನರಾದ ಯೇಸು ಪ್ರಕಾಶ್ ಅವರ ಅಂತ್ಯಕ್ರಿಯೆ ಭಾನುವಾರ ನಗರದ ಕಂಬಳಿಕೊಪ್ಪ ಬಡಾವಣೆಯಲ್ಲಿರುವ ಸಿ.ಎಸ್.ಐ ಚರ್ಚ್‌ನ ಸಮಾಧಿ ಸ್ಥಳದಲ್ಲಿ ನಡೆಯಿತು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಆನಂದಪುರಂನ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮೂಲೆಗದ್ದೆ ಮಠದ ಸ್ವಾಮೀಜಿ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT