ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಗಳಲ್ಲಿ ₨ 10 ಕೋಟಿ ಮರಳು ವಶ

ಸಂವಾದದಲ್ಲಿ ಮರಳು ಮಾಫಿಯಾ ವಿರುದ್ಧ ಕ್ರಮಗಳನ್ನು ತೆರೆದಿಟ್ಟ ಎಸ್‌ಪಿ ಅಭಿನವ್ ಖರೆ
Last Updated 9 ಫೆಬ್ರುವರಿ 2019, 15:00 IST
ಅಕ್ಷರ ಗಾತ್ರ

ಶಿವಮೊಗ್ಗ:ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ₨ 10 ಕೋಟಿ ಮೌಲ್ಯದ 7,276 ಲೋಡ್ ಮರಳು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್ ಅಶೋಕ್ ಖರೆ ವಿವರ ನೀಡಿದರು.

ಪ್ರೆಸ್‌ಟ್ರಸ್ಟ್‌ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ರಮ ಮರಳು ಸಾಗಣೆ ಆರೋಪದ ಮೇಲೆ 535 ಪ್ರಕರಣ ದಾಖಲಿಸಲಾಗಿದೆ. 494 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 605 ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷದ ಜನವರಿಯಲ್ಲೇ ₨ 11.54 ಕೋಟಿ ಮೌಲ್ಯದ 305 ಲೋಡ್‌ ಮರಳು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಎರಡು ವರ್ಷಗಳ ಅವಧಿಯಲ್ಲಿ ಮಟ್ಕಾ ವಿರುದ್ಧ ಕಠಿಣ ಕ್ರಮ ಕೈಗೊಂಡು 993 ಪ್ರಕರಣ, 400 ಜೂಜಾಟದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಮಟ್ಕಾ, ಜೂಜಾಟ ತಡೆಯಲು ಇಲಾಖೆ ಹಲವು ಅಗತ್ಯ ಕ್ರಮ ಕೈಗೊಂಡಿದೆ. ಒಸಿ ಬರೆಯುವವರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ನ್ಯಾಯಾಲಯಕ್ಕೆ ₨ 200 ರಿಂದ ₨ 300 ದಂಡ ಕಟ್ಟಿದರೆ ಬಿಡುಗಡೆಯಾಗುತ್ತಾರೆ. ಹಾಗಾಗಿ, ಇದರ ನಿಯಂತ್ರಣ ಸುಲಭವಾಗಿಲ್ಲ. ಆದರೂ ಸುಮಾರು 12ಕ್ಕೂ ಹೆಚ್ಚು ಒಸಿ ಬಿಡ್ಡರ್‌ಗಳನ್ನು ಗಡಿಪಾರು ಮಾಡಲಾಗಿದೆ. ಬಂಧಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ತನ್ನ ಶಕ್ತಿಮೀರಿ ಶ್ರಮಿಸುತ್ತಿದೆ.ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿಯೇ ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಈ ಎಲ್ಲ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಕೊರತೆ ಮಧ್ಯೆಯೂ ಕಡಿವಾಣ ಹಾಕಲಾಗಿದೆ. ನಿರಂತರ ನಿಗಾ ವಹಿಸಲಾಗಿದೆ. ಮರಳು ದಂಧೆಯಲ್ಲಿ ರೌಡಿಗಳು ಭಾಗಿಯಾಗಿದ್ದಾರೆ. ಮರಳು ಮಾಫಿಯಾ ನಿಯಂತ್ರಿಸಲು ಮುಂದಾದ ಸಮಯದಲ್ಲಿ ಪೊಲೀಸರ ವಿರುದ್ಧವೇ ಅಪಪ್ರಚಾರ ನಡೆಸುತ್ತಿದ್ದಾರೆ. ಇತರೆ ಇಲಾಖೆಗಳಿಗೆ ಹೊಣೆಗಾರಿಕೆ ಇದ್ದರೂ, ಪೊಲೀಸರನ್ನೇ ಗುರಿ ಮಾಡುವ ಮನೋಸ್ಥಿತಿ ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ತೀರ್ಥಹಳ್ಳಿಯಲ್ಲೇ 56 ಮರಳು ದೊರಕುವ ಸ್ಥಳಗಳಿವೆ. ಹೊರಗೆ ಹೋಗಲು 15ಕ್ಕೂ ಹೆಚ್ಚು ರಸ್ತೆಗಳಿವೆ. ಈ ಎಲ್ಲ ರಸ್ತೆಗಳನ್ನು ಹಗಲಿರುಳು ಕಾಯಲು ಎಷ್ಟು ಜನ ಸಿಬ್ಬಂದಿ ಬೇಕು? ಕೇವಲ ಪೊಲೀಸ್ ಇಲಾಖೆ ಅಕ್ರಮ ಮರಳುಗಾರಿಕೆ ತಡೆಯಲು ಆಗುವುದಿಲ್ಲ. ಬೇರೆ ಬೇರೆ ಇಲಾಖೆಗಳು ಕೂಡ ಹೊಣೆ ನಿಭಾಯಿಸಬೇಕು. ಸಾರ್ವಜನಿಕರ ಸಹಕಾರವೂ ಮುಖ್ಯ ಎಂದರು.

ಜಿಲ್ಲೆಯಲ್ಲಿ3 ದಶಕಗಳಿಂದ ರೌಡಿಸಂ ಬೇರೂರಿದೆ. ಅದು ಮಾರ್ಕೆಟ್‌ ಗಿರಿ, ಗೋವಿಂದನ ಕೊಲೆಯ ಸಾಗಿದೆ. ಈ ಎಲ್ಲ ಕೊಲೆಗಳೂ ದ್ವೇಷಕ್ಕಾಗಿ ಆಗಿವೆ. ಒಂದು ರೀತಿಯ ಕುಟುಂಬ ಕಲಹ. ರೌಡಿಗಳ ನಿಯಂತ್ರಣಕ್ಕೆ ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ. ಕೋಕಾ ಕಾಯ್ದೆ ಅಡಿಯಲ್ಲಿ ಸುಮಾರು 38 ಆರೋಪಿಗಳನ್ನು ಬಂಧಿಸಲಾಗಿದೆ. 1,400ಕ್ಕೂ ಹೆಚ್ಚು ರೌಡಿಗಳ ಪಟ್ಟಿ ತಯಾರಿಸಲಾಗಿದೆ. ಹಲವರು ಜೈಲಿನಲ್ಲಿದ್ದಾರೆ. ಕೆಲವರು ಬಿಡುಗಡೆಯಾಗಿದ್ದಾರೆ. ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಒಟ್ಟಾರೆ ರೌಡಿಸಂ ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ಶ್ರಮ ಹಾಕಿದ್ದಾರೆ ಎಂದು ವಿವರ ನೀಡಿದರು.

ಟ್ರಸ್ಟ್‌ ಖಜಾಂಚಿ ಜೇಸುದಾಸ್ ಪ್ರಸ್ತಾವಿಕ ಮಾತನಾಡಿ, ಅಕ್ರಮ ಕ್ಲಬ್‌ಗಳು ಅಪರಾಧ ಚಟುವಟಿಕೆಗಳಿಗೆ ಹಣಕಾಸು ಪೂರೈಸುತ್ತಿವೆ. ಜನಪ್ರತಿನಿಧಿಗಳು, ಪತ್ರಕರ್ತರೂ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಅಪರಾಧಿಗಳಜತೆ ಸ್ನೇಹ ಪೊಲೀಸರಿಗೆ ಅಪಾಯಕಾರಿ ಎಂದು ಎಚ್ಚರಿಸಿದರು.

ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ.ವಿ.ಸಿದ್ದಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT