ಬುಧವಾರ, ಆಗಸ್ಟ್ 17, 2022
27 °C
ಡೊಂಗರಗಾಂವ ಗ್ರಾಮಸ್ಥರದ ಒತ್ತಾಯದ ಮೇರೆಗೆ ಸ್ಪರ್ಧೆ: ಸುರೇಶ ಭರಣಿ

ಕಲಬುರ್ಗಿ: ಗ್ರಾ.ಪಂ ಚುನಾವಣೆಗೆ ತಾ.ಪಂ ಸದಸ್ಯ ಸ್ಪರ್ಧೆ!

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಗ್ರಾಮ ಪಂಚಾಯಿತಿಯಿಂದ ತಾಲ್ಲೂಕು ಅಥವಾ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸುವುದು ವಾಡಿಕೆ. ಆದರೆ, ಇಲ್ಲಿನ ತಾಲ್ಲೂಕು ಪಂಚಾಯಿತಿ ಹಾಲಿ ಸದಸ್ಯರೊಬ್ಬರು ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮ ಪಂಚಾಯಿತಿಗೆ ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ.

ಎರಡು ಬಾರಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿರುವ, ಡೊಂಗರಗಾಂವ ಗ್ರಾಮದ ಸುರೇಶ ಭರಣಿ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್‌ನಿಂದ ಸ್ಪರ್ಧಿಸಿದ್ದು, ಡಿ.22ರಂದು ಚುನಾವಣೆ ನಡೆಯಲಿದೆ.

ತಾಲ್ಲೂಕು ಪಂಚಾಯಿತಿ ಸದಸ್ಯರಾಗುವ ಮುನ್ನ ಸುರೇಶ ಅವರು ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕಲಬುರ್ಗಿ ತಾ.ಪಂ ಸದಸ್ಯರಾಗಿದ್ದ ಅವರು ಕಮಲಾಪುರ ಹೊಸ ತಾಲ್ಲೂಕಾಗಿ ರಚನೆಯಾದ ಬಳಿಕ ನೂತನ ತಾ.ಪಂ ಸದಸ್ಯರಾಗಿ ಮುಂದುವರಿದಿದ್ದಾರೆ.

ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿದ್ದ ಭರಣಿ ಗುಲಬರ್ಗಾ ವಿಶ್ವವಿದ್ಯಾಲಯದ ‘ಯೂನಿವರ್ಸಿಟಿ ಬ್ಲೂ’ ಆಗಿ ಆಯ್ಕೆಯಾಗಿದ್ದರು.  ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪದವಿ ಪೂರೈಸಿದ ಅವರು ನಂತರ ಎಲ್‌ಎಲ್‌ಬಿ ಪದವಿಗಾಗಿ ಓದಿ, ಅರ್ಧಕ್ಕೇ ಬಿಟ್ಟು ರಾಜಕಾರಣಕ್ಕಿಳಿದರು.

‘ಎಲ್‌ಎಲ್‌ಬಿ ಅರ್ಧಕ್ಕೆ ಬಿಟ್ಟ ಬಳಿಕ ರಾಜಕೀಯ ಸೇರಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾದೆ. ನಾಲ್ಕು ಬಾರಿ ಚುನಾಯಿತನಾದ ಬಳಿಕ ತಾಲ್ಲೂಕು ಪಂಚಾಯಿತಿಗೂ ಆಯ್ಕೆಯಾದೆ. 10 ವರ್ಷಗಳಿಂದ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದರಿಂದ ಗ್ರಾಮ ಪಂಚಾಯಿತಿಗೆ ಮರಳಬೇಕು ಎಂಬುದು ಗ್ರಾಮಸ್ಥರ ಆಶಯ. ಅದಕ್ಕಾಗಿ ತಾಲ್ಲೂಕು ಪಂಚಾಯಿತಿ ಸದಸ್ಯತ್ವ ಅವಧಿ ಇದ್ದರೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ’ ಎಂದು ಸುಭಾಷ್ ಭರಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸುರೇಶ ಅವರು ಜೆಡಿಎಸ್‌ ಜೊತೆ ಗುರುತಿಸಿಕೊಂಡಿದ್ದಾರೆ. ಅವರ ಪುತ್ರ ಮಾರ್ಷಲ್ ಭರಣಿ ಕೂಡಾ ಒಂದು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಅತಿಥಿ ಉಪನ್ಯಾಸಕ ಚುನಾವಣಾ ಕಣಕ್ಕೆ

ಮಹಾಗಾಂವ ಕ್ರಾಸ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ವಿಠಲರಾವ್ ಶಾಮರಾವ ಗೊಣಗಿಕರ್ ಮುಕರಂಬಾ ಅವರು ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮ ಪಂಚಾಯಿತಿ ಪರಿಶಿಷ್ಟ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್‌.ಸಿ.ಹಿರೇಮಠ ಅಧ್ಯಯನ ಪೀಠದಿಂದ ‘ಡಾ.ಚನ್ನಣ್ಣ ವಾಲೀಕಾರ ಸಮಗ್ರ ಕಾವ್ಯ ಒಂದು ಅಧ್ಯಯನ’ ಕುರಿತು ಪಿಎಚ್‌.ಡಿ ಪದವಿ ಪಡೆದಿರುವ ವಿಠಲರಾವ್ ಅವರು ಕಳೆದ ಬಾರಿಯೂ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

‘ನಮ್ಮ ಗ್ರಾಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ಪರ್ಧಿಸಿದ್ದೇನೆ. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಇದ್ದು, ಇವುಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ವಿಠಲರಾವ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು