ಬುಧವಾರ, ಸೆಪ್ಟೆಂಬರ್ 23, 2020
20 °C
ಗ್ರಾಮೀಣ ಪೊಲೀಸ್ ಠಾಣೆ ಮುಂಭಾಗ ನಾಲ್ಕಾರು ಮರಗಳಿಗೂ ಬೆಂಕಿ

ಹೆದ್ದಾರಿ ವಿಸ್ತರಣೆಗೆ ಅರಳೀಮರ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿ ವಿಸ್ತರಣೆ ಕಾರ್ಯವು ನಗರದಲ್ಲಿ ಭರದಿಂದ ನಡೆದಿದೆ. ಜೊತೆಗೆ ಒಂದೊಂದೇ ಮರಗಳು ಧರೆಗೆ ಉರುಳುತ್ತಿದ್ದು, ನೆರಳು ಮಾಯವಾಗುತ್ತಿದೆ.

ಕಂದಾಯ ಭವನದ ಆವರಣದಲ್ಲಿ ಇದ್ದ ಮರಗಳನ್ನು ಮಂಗಳವಾರ ಕಡಿದಿದ್ದು, ಅಲ್ಲಿನ ಅರಳೀಮರಕ್ಕೂ ಕೊಡಲಿ ಪೆಟ್ಟು ನೀಡಲು ಸಂಜೆ ಸಿದ್ಧತೆ ನಡೆದಿತ್ತು.

ಕಂದಾಯ ಭವನವು ದಶಕದ ಕಾಲ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಾಗಿ ಬಳಕೆಯಾಗಿದ್ದ ಸಂದರ್ಭ ಇದೇ ಅರಳೀಮರವು ಅದೆಷ್ಟೋ ಮಂದಿಗೆ ನೆರಳು ನೀಡಿ ಸಲಹಿತ್ತು. ಸರ್ಕಾರಿ ಕಚೇರಿಗಳಿಗೆ ಬಂದ ಹಿರಿಯರು, ಮಕ್ಕಳು, ಮಹಿಳೆಯರು ಇದೇ ಮರದ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು. ಮರದ ಸುತ್ತ ಕಟ್ಟೆ ಕಟ್ಟಿದ್ದು, ಅಲ್ಲಿ ಅದೆಷ್ಟೋ ಮಂದಿ ಬುತ್ತಿ ಬಿಚ್ಚಿ ಮನೆಯೂಟದ ಸವಿ ಉಣ್ಣುತ್ತ ದಣಿವು ತೀರಿಸಿಕೊಂಡಿದ್ದೂ ಉಂಟು.

ಪ್ರತಿಭಟನೆಯ ಕೇಂದ್ರ: ಸಾಕಷ್ಟು ಪ್ರತಿಭಟನಾಕಾರರಿಗೆ ಇದೇ ಮರವು ನೆರಳಾಗಿತ್ತು. ರೈತ ಸಂಘ, ಅಂಗನವಾಡಿ ಕಾರ್ಯಕರ್ತರು, ದಲಿತ ಪರ ಸಂಘಟನೆಗಳು... ಹೀಗೆ ಅದೆಷ್ಟೋ ಸಂಘ–ಸಂಘಟನೆಗಳ ಹೋರಾಟಗಳು ಇದೇ ಮರದ ನೆರಳಿನಲ್ಲಿ ನಡೆದಿದ್ದವು.

ಇಷ್ಟು ಮಾತ್ರವಲ್ಲ. ಇದೇ ಮರದ ಮತ್ತೊಂದು ಬದಿಗೆ ಬಸ್‌ ನಿಲುಗಡೆ ತಾಣವೂ ಇತ್ತು. ಬೆಂಗಳೂರು ಕಡೆಗೆ ಹೋಗುವ ನೂರಾರು ಪ್ರಯಾಣಿಕರು ಅದರ ನೆರಳಿನಲ್ಲಿ ನಿಲ್ಲುತ್ತಿದ್ದರು. ಇನ್ನೂ ಅದೆಷ್ಟೋ ಪಕ್ಷಿಗಳಿಗೆ ನೆಲೆಯನ್ನೂ ನೀಡಿತ್ತು. ಈಗ ಅದೇ ಮರವನ್ನು ಕೆಳಕ್ಕೆ ಉರುಳಿಸಲು ಸಿದ್ಧತೆ ನಡೆದಿತ್ತು.

ಇದರಂತೆಯೇ ಇನ್ನೂ ನೂರಾರು ಬೃಹತ್‌ ಮರಗಳನ್ನು ಹೆದ್ದಾರಿ ವಿಸ್ತರಣೆ ಸಲುವಾಗಿ ಕತ್ತರಿಸಲಾಗುತ್ತಿದೆ. ಹೀಗಾಗಿ ರಸ್ತೆ ಬದಿಯಲ್ಲಿ ನೆರಳು ಮಾಯವಾಗಿ, ಡಾಂಬರು ನೆಲ ಕಾಲು ಸುಡತೊಡಗಿದೆ.

‘ರಸ್ತೆ ಸಲುವಾಗಿ ಮರ ಕಡಿಯುವುದು ಅನಿವಾರ್ಯವಾಗಿದ್ದರೆ ಸರಿ. ಆದರೆ ನಗರದೊಳಗೆ ಅಷ್ಟೇ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಅಗತ್ಯವಿದೆ. ಆ ಕೆಲಸವನ್ನು ಲೋಕೋಪಯೋಗಿ ಇಲಾಖೆಯಾಗಲಿ, ಅರಣ್ಯ ಇಲಾಖೆಯಾಗಲಿ ಮಾಡುತ್ತಿಲ್ಲ’ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಮರಗಳಿಗೆ ಬೆಂಕಿ!
ಕಂದಾಯ ಭವನಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮೀಣ ಮತ್ತು ಮಹಿಳಾ ಪೊಲೀಸ್ ಠಾಣೆಗಳ ಆವರಣದ ಕಾಂಪೌಂಡ್ ಅನ್ನು ಹೆದ್ದಾರಿ ವಿಸ್ತರಣೆ ಸಲುವಾಗಿ ಕೆಡವಲಾಗಿದೆ. ಇದರ ಪಕ್ಕದಲ್ಲಿಯೇ ಇದ್ದ ನಾಲ್ಕಾರು ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಬುಡ ಸುಟ್ಟುಕೊಂಡ ಮರಗಳು ಜೀವ ಕಳೆದುಕೊಳ್ಳುತ್ತಿವೆ.

ನ್ಯಾಯಾಧೀಶರ ವಸತಿಗೃಹಗಳ ಪಕ್ಕ, ಪೊಲೀಸ್ ಠಾಣೆಗಳ ಮುಂಭಾಗವೇ ಹೀಗೆ ಮರಕ್ಕೆ ಬೆಂಕಿ ಬಿದ್ದಿದ್ದರೂ ಯಾರು ಕ್ರಮ ಕೈಗೊಂಡಿಲ್ಲ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.