ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಸಾವಿರ ಚಾಲಕ, ನಿರ್ವಾಹಕರ ನೇಮಕ: ರಾಮಲಿಂಗಾ ರೆಡ್ಡಿ

Published 23 ಆಗಸ್ಟ್ 2023, 16:14 IST
Last Updated 23 ಆಗಸ್ಟ್ 2023, 16:14 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ 13 ಸಾವಿರ ಚಾಲಕ, ನಿರ್ವಾಹಕರ ಹುದ್ದೆಗಳಿಗೆ ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಮಾಡಲು ಸರ್ಕಾರದಿಂದ ಒಪ್ಪಿಗೆ ಸಿಕ್ಕಿದ್ದು, ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. 2016ರಲ್ಲಿ ನಾನು ಸಾರಿಗೆ ಸಚಿವರಾಗಿದ್ದ ಸಮಯದಲ್ಲಿ ಚಾಲಕ, ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅಲ್ಲಿಂದ ಈವರೆಗೆ ನೇಮಕ ನಡೆದಿರಲಿಲ್ಲ. ಏಳು ವರ್ಷಗಳ ನಂತರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಹೊಸದಾಗಿ 5 ಸಾವಿರ ಬಸ್‌ಗಳ ಖರೀದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿ, ₹500 ಕೋಟಿ ಅನುದಾನ ಒದಗಿಸಿದ್ದಾರೆ. ಶೀಘ್ರವೇ ಬಸ್‌ಗಳ ಖರೀದಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಕೇಂದ್ರ ಸರ್ಕಾರದ ಆದೇಶದಂತೆ 15 ವರ್ಷ ಪೂರ್ಣಗೊಂಡ ಸರ್ಕಾರಿ ವಾಹನ ಸೇರಿದಂತೆ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲವಾಗಿದೆ. ಹಾಗಾಗಿ ಹೊಸದಾಗಿ ಬಸ್‌ಗಳ ಖರೀದಿ ಅನಿವಾರ್ಯವಾಗಿದೆ ಎಂದು ವಿವರಿಸಿದರು.

ಉತ್ತರ ಕರ್ನಾಟಕದ ಭಾಗಕ್ಕೆ ಎಲ್ಲಾ ಬಸ್‌ಗಳು ನಗರದ ಮೂಲಕವೇ ಸಂಚರಿಸಬೇಕಿದ್ದು, ಬೇಡಿಕೆ, ಅಗತ್ಯಕ್ಕೆ ಅನುಗುಣವಾಗಿ ₹111.46 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕೆಲಸ ನಿಧಾನವಾಗಿದ್ದು, ಶೇ 78ರಷ್ಟು ಕಾಮಗಾರಿ ಮುಗಿದಿದ್ದು, ಮುಂದಿನ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಒಟ್ಟು 65 ಬಸ್‌ಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಆರ್‌.ರಾಜೇಂದ್ರ, ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT