ಗುರುವಾರ , ಮಾರ್ಚ್ 4, 2021
30 °C
ಶಿರಾ ನಗರಸಭೆಯಲ್ಲಿ ಆಯ–ವ್ಯಯ ಮಂಡನೆ

₹ 56.50 ಲಕ್ಷ ಉಳಿತಾಯ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹ 56.50 ಲಕ್ಷ ಉಳಿತಾಯ ಬಜೆಟ್

ಶಿರಾ: 2016-17ನೇ ಸಾಲಿಗೆ ನಗರಸಭೆಯಿಂದ ₹ 56.50 ಲಕ್ಷ ಉಳಿತಾಯ ಬಜೆಟ್‌ ಅನ್ನು ಉಪಾಧ್ಯಕ್ಷ ಇಸ್ಮಾಯಿಲ್ ಬೇಗ್ ಮಂಡಿಸಿದರು.

ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಇಸ್ಮಾಯಿಲ್ ಬೇಗ್ ಒಟ್ಟಾರೆ ₹ 24.31 ಕೋಟಿ ಬಜೆಟ್ ಮಂಡಿಸಿದರು.₹ 23.74 ಕೋಟಿ ಖರ್ಚು ಅಂದಾಜಿಸಿದ್ದು, ₹ 56.50 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಕಂದಾಯದಲ್ಲಿ ಆಸ್ತಿ ತೆರಿಗೆ ಸೇರಿ ₹ 1.60 ಕೋಟಿ, ನೀರಿನ ಕರ ₹ 1.28 ಕೋಟಿ, ಕಟ್ಟಡಗಳ ಬಾಡಿಗೆ ₹ 35 ಲಕ್ಷ, ವೇತನ ಅನುದಾನ ₹ 4.5 ಕೋಟಿ ಮತ್ತಿತರೆ ಆದಾಯ ಮೂಲಗಳು ಇವೆ.ಇನ್ನು ಕಂದಾಯ ಪಾವತಿ ₹ 10.60 ಕೋಟಿ, ಬಂಡವಾಳ ಪಾವತಿ ₹ 10.45 ಕೋಟಿ ಮತ್ತಿತರ ಬಾಬ್ತು ಖರ್ಚಿನಲ್ಲಿ ಸೇರಿದೆ.

ವೇತನಕ್ಕೆ ಸಿಂಹ ಪಾಲು: ನಗರಸಭೆ ಆದಾಯದಲ್ಲಿ ಸಿಂಹ ಪಾಲು ಸಿಬ್ಬಂದಿ ವೇತನ ಹಾಗೂ ಭತ್ಯೆಗಳಿಗೆ (₹ 4 ಕೋಟಿ) ಹೋಗಲಿದೆ. ವಿದ್ಯುತ್ ಮತ್ತು ಇಂಧನಕ್ಕೆ ₹ 1.80 ಕೋಟಿ, ವಾಹನ ಖರೀದಿಗೆ ₹ 30 ಲಕ್ಷ, ರಸ್ತೆಗಳಿಗಾಗಿ ₹ 4 ಕೋಟಿ, ಚರಂಡಿ– ಸೇತುವೆಗಳಿಗೆ ₹ 1.75 ಕೋಟಿ, ಪೈಪ್‌ಲೈನ್‌ಗೆ ₹ 2.10 ಕೋಟಿ, ಬೀದಿ ದೀಪಗಳ ನಿರ್ವಹಣೆಗೆ ₹ 1 ಕೋಟಿ ಮೀಸಲಿರಿಸಲಾಗಿದೆ.ವಿರೋಧ ಪಕ್ಷದವರು ಬಜೆಟ್‌ಗೆ ಯಾವುದೇ ಚಕಾರ ಎತ್ತದೆ, 5 ನಿಮಿಷದಲ್ಲಿ ಅನುಮೋದನೆ ದೊರೆಯಿತು.

ಕಳೆದ ಬಾರಿ ರಸ್ತೆಗಳಿಗಾಗಿ ₹ 8 ಕೋಟಿ ತೆಗೆದಿರಿಸಲಾಗಿತ್ತು. ಆದರೆ ಈ ಬಾರಿ ₹ 4 ಕೋಟಿ ಮೀಸಲಿಡಲಾಗಿದೆ. ಆದರೂ ಬಜೆಟ್‌ಗೆ ಯಾವುದೇ ತಕರಾರು ವ್ಯಕ್ತವಾಗಲಿಲ್ಲ.ನಗರಸಭೆ ಪೌರಾಯುಕ್ತ ಯೋಗಾನಂದ್, ಸ್ಥಾಯಿ ಸಮಿತಿ ಸದಸ್ಯ ಶ್ರೀನಿವಾಸ್ ಗುಪ್ತ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸಗುಪ್ತ ಆಯ್ಕೆ

ಶಿರಾ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್.ಆರ್.ಶ್ರೀನಿವಾಸಗುಪ್ತ (ವಾಸು) ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ನಗರಸಭೆಯ 29ನೇ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಅವರನ್ನು ನಗರಸಭೆಯ ಆಯವ್ಯಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಭೆ ಪ್ರಾರಂಭ ಆಗುತ್ತಿದ್ದಂತೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸಗುಪ್ತ ಅವರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಅಧ್ಯಕ್ಷರು ಘೋಷಣೆ ಮಾಡಿದರು. ಏನು ನಡೆಯುತ್ತಿದೆ ಎಂಬುದು ಆರ್ಥವಾಗುವ ಮೊದಲೇ ಕಾಂಗ್ರೆಸ್ ಸದಸ್ಯರು ಬೆಂಬಲ ಸೂಚಿಸಿ, ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ಘೋಷಣೆ ಮಾಡಲಾಯಿತು.ಆ ನಂತರ ಕೆಲ ಸದಸ್ಯರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಬಜೆಟ್ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಬದಲು ಬೇರೆ ಸಭೆ ಕರೆಯಬೇಕಿತ್ತು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.