ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ₹5.26 ಲಕ್ಷ ಖರ್ಚು

Last Updated 14 ಮಾರ್ಚ್ 2023, 6:19 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಕಳೆದ ತಿಂಗಳು ನಡೆದ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 5.26 ಲಕ್ಷ ಖರ್ಚಾಗಿದೆ ಎಂದು ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳು ಲೆಕ್ಕ ಒಪ್ಪಿಸಿದ್ದಾರೆ.

‘ಸಾಹಿತ್ಯ ಜೋಳಿಗೆ, ವಿವಿಧ ಇಲಾಖೆಗಳು, ದಾನಿಗಳಿಂದ ₹2.93 ಲಕ್ಷ ಸಂಗ್ರಹವಾಗಿತ್ತು. ಖೋತಾ ಆಗಿರುವ ₹2.32 ಲಕ್ಷದಲ್ಲಿ ₹1.14 ಲಕ್ಷ ಮೊತ್ತವು ಕೇಂದ್ರ ಸಾಹಿತ್ಯ ಪರಿಷತ್‌ ಸೇರಿದಂತೆ ಮತ್ತಿತರ ಮೂಲಗಳಿಂದ ಬರುವ ನಿರೀಕ್ಷೆ ಇದೆ. ಇನ್ನುಳಿದ ಮೊತ್ತವನ್ನು ನಾವೇ ಭರಿಸಬೇಕಿದೆ’ ಎಂದು ಪರಿಷತ್‌ ಅಧ್ಯಕ್ಷ ಎಂ.ಎಸ್‌. ರವಿಕಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪ್ರಾಯೋಗಿಕವಾಗಿ ಸಾಹಿತ್ಯ ಜೋಳಿಗೆ ಕಾರ್ಯಕ್ರಮ ಮಾಡಿದ್ದೆವು. ಇದರ ಮೂಲಕ ₹ 40 ಸಾವಿರ ಸಂಗ್ರಹವಾಗಿದೆ. ರಾಜಕಾರಣಿಗಳು ಸೇರಿದ ಯಾವ ವ್ಯಕ್ತಿಯ ಮೇಲೆ ಹಣಕ್ಕಾಗಿ ಒತ್ತಡ ಹಾಕದೆ ಸಮ್ಮೇಳನ ಮಾಡಿದ್ದೇವೆ ಎಂದರು.

ಸ್ಮರಣ ಸಂಚಿಕೆಗೆ ಜಾಹೀರಾತು ರೂಪದಲ್ಲಿ ಬರಬಹುದಾದ ಮೊತ್ತವನ್ನು ಪರಿಷತ್ತಿನ ಚಟುವಟಿಕೆ, ಪುಸ್ತಕಗಳ ಪ್ರಕಟಣೆಗೆ ಬಳಸಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಮ್ಮೇಳನದ ಅಧ್ಯಕ್ಷ ಡಾ.ತಿಮ್ಮನಹಳ್ಳಿ ವೇಣುಗೋಪಾಲ್‌ ಮಾತನಾಡಿ, ‘ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಿರುವುದು ಸಂತೋಷ ತಂದಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸುತ್ತೇನೆ’ ಎಂದು
ತಿಳಿಸಿದರು.

ಸಮ್ಮೇಳನ ಸೌಜನ್ಯದ ಒಳಗೆ ಸುಸಂಸ್ಕೃತ ರೀತಿಯಲ್ಲಿ ರೂಪುಗೊಳ್ಳಬೇಕು. ನಂತರ ಖರ್ಚಿನ ವಿವರವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಹೇಳಿದ್ದೆ. ಅದರಂತೆ ಪರಿಷತ್ತಿನ ಪದಾಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಂಘದ ವೇದಿಕೆ ಅಧ್ಯಕ್ಷ ಸಿ.ಬಿ. ರೇಣುಕಸ್ವಾಮಿ ಮಾತನಾಡಿ, ಚಿಕ್ಕನಾಯಕನಹಳ್ಳಿಯಲ್ಲಿ ಯಾವುದೇ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಖೋತಾ ಬಜೆಟ್‌ನಲ್ಲೇ ನಡೆದಿವೆ. ಮುಂಬರುವ ದಿನಗಳಲ್ಲಿ ಸಂಗ್ರಹವಾಗುವ ಮೊತ್ತಕ್ಕೆ ಸರಿಯಾಗಿ ಕಾರ್ಯಕ್ರಮ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ಪರಿಷತ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT