ಶನಿವಾರ, ಮಾರ್ಚ್ 25, 2023
22 °C

ತುಮಕೂರು: ಈ ವರ್ಷ ಏಡ್ಸ್‌ನಿಂದ 59 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಹೆಮ್ಮಾರಿಯಾಗಿ ಕಾಡುತ್ತಿರುವ ಎಚ್‌ಐವಿ– ಏಡ್ಸ್‌ಗೆ ತುತ್ತಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದ್ದು, ಸಾವಿನ ಪ್ರಮಾಣವೂ ಗಣನೀಯವಾಗಿ ಇಳಿಮುಖವಾಗುತ್ತಲೇ ಸಾಗಿದೆ. ಈ ವರ್ಷದಲ್ಲಿ ಈವರೆಗೆ 59 ಮಂದಿ ಸಾವನ್ನಪ್ಪಿದ್ದಾರೆ.

ಕಳೆದ ಐದು ವರ್ಷಗಳ ಅಂಕಿಸಂಖ್ಯೆ ಗಮನಿಸಿದರೆ ಎಚ್‌ಐವಿ ಸೋಂಕಿಗೆ ತುತ್ತಾದವರು ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಹಿಂದಿನಷ್ಟು ತೀವ್ರತೆ ಈಗ ಇಲ್ಲವಾಗಿದ್ದರೂ ಸಾವನ್ನಪ್ಪುವುದು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಪ್ರತಿ ವರ್ಷವೂ ಸುಮಾರು 100ಕ್ಕೂ ಹೆಚ್ಚು ಮಂದಿ ಮೃತ ಪಡುತ್ತಿದ್ದಾರೆ. ಐದು ವರ್ಷಗಳ ಹಿಂದೆ ಪ್ರತಿ ವರ್ಷ 200ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದರು. ಹಿಂದಿನ ಐದು ವರ್ಷದ ಹಿಂದೆ ಪ್ರತಿ ವರ್ಷ ಸರಾಸರಿ ಒಂದು ಸಾವಿರದಷ್ಟು ಜನರಿಗೆ ಸೋಂಕು ತಗುಲಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.

ಪ್ರತಿ ವರ್ಷವೂ ಡಿಸೆಂಬರ್ 1ರಂದು ಏಡ್ಸ್ ತಡೆ ದಿನಾಚರಣೆ ಮಾಡಲಾಗುತ್ತದೆ. ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದ್ದು, ಎಚ್‌ಐವಿ ಹರಡದಂತೆ ಎಚ್ಚರಿಕೆ ವಹಿಸುತ್ತಿರುವುದು ನಿಯಂತ್ರಣಕ್ಕೆ ಸಹಕಾರಿಯಾಗಿದೆ. ‘ಏಡ್ಸ್ ಬರದಂತೆ ಜಾಗ್ರತೆ ವಹಿಸಿ. ಬಂದ ನಂತರ ಏನು ಮಾಡಲಾಗದು’ ಎಂದು ಜನರಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇ ನಿಯಂತ್ರಣಕ್ಕೆ ಸಹಕಾರಿಯಾಯಿತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಆರೋಗ್ಯ ಇಲಾಖೆ ಸಹ ಸತತವಾಗಿ ನಿಯಂತ್ರಣ, ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ 2008ರಿಂದಲೇ ಕಾರ್ಯಾರಂಭ ಮಾಡಿದೆ. ಈ ಘಟಕದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ, ಜಿಲ್ಲಾ ಮೇಲ್ವಿಚಾರಕರು, ಸಹಾಯಕರು ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 17 ಐಸಿಟಿಸಿ ಕೇಂದ್ರಗಳು, 154 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐಸಿಟಿಸಿ ಸೇವೆ ಲಭ್ಯವಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) 15 ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ.

ಜಿಲ್ಲೆಯಲ್ಲಿ 2015ರಿಂದ ಈವರೆಗೆ 5.57 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಶೇ 0.8ರಷ್ಟು ಅಂದರೆ 4198 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪರೀಕ್ಷೆಗೆ ಒಳಪಟ್ಟ 2.95 ಲಕ್ಷ ಗರ್ಭಿಣಿಯರಲ್ಲಿ 203 ಮಹಿಳೆಯರಿಗೆ ಎಚ್‌ಐವಿ ಸೋಂಕು ಇರುವುದು ಕಂಡುಬಂದಿದೆ. ಶೇ 0.07ರಷ್ಟು ಮಂದಿ ಇದಕ್ಕೆ ತುತ್ತಾಗಿದ್ದಾರೆ. ಗರ್ಭಿಣಿಯರಿಂದ ಮಕ್ಕಳಿಗೆ ಎಚ್‌ಐವಿ ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜೆ.ಕೆ.ಸನತ್ ಕುಮಾರ್ ಹೇಳುತ್ತಾರೆ.

ವರ್ಷದಿಂದ ವರ್ಷಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. 2,030ರ ವೇಳೆಗೆ ಎಚ್ಐವಿ ಸೋಂಕಿತ ಗರ್ಭಿಣಿಯರಿಂದ ಮಗುವಿಗೆ ತಗಲುವ ಸೋಂಕಿನ ಪ್ರಮಾಣವನ್ನು ಶೂನ್ಯಕ್ಕೆ ತರಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.