ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಶೇ 76 ರಷ್ಟು ಜನ ಸ್ವತಂತ್ರರಲ್ಲ: ನಟರಾಜ ಬೂದಾಳು

Published 22 ಏಪ್ರಿಲ್ 2024, 8:00 IST
Last Updated 22 ಏಪ್ರಿಲ್ 2024, 8:00 IST
ಅಕ್ಷರ ಗಾತ್ರ

ತುಮಕೂರು: ಶೇ 6 ರಷ್ಟು ಜನಸಂಖ್ಯೆ ಇರುವ ಸಮುದಾಯದ ನಾಯಕರು ಇಡೀ ಭಾರತವನ್ನು ತಮ್ಮ ಅಡಿಯಾಳಾಗಿಸಿಕೊಂಡಿದ್ದಾರೆ. ಸಾವಿರಾರು ವರ್ಷಗಳಿಂದ ನಮ್ಮ ಮೇಲೆ ನಿರಂತರವಾಗಿ ಯಜಮಾನಿಕೆ ಸಾಧಿಸಿಕೊಂಡು ಬರುತ್ತಿದ್ದಾರೆ ಎಂದು ಸಾಹಿತಿ ಎಸ್‌.ನಟರಾಜ ಬೂದಾಳು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಜಾತ್ಯತೀತ ಯುವ ವೇದಿಕೆಯಿಂದ ಹಮ್ಮಿಕೊಂಡಿದ್ದ ಅತಿ ಹಿಂದುಳಿದ ಜಾತಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.

ದೇಶದ ಶೇ 76 ರಷ್ಟು ಜನ ಇಂದಿಗೂ ಸ್ವತಂತ್ರರಲ್ಲ. ನಮಗೊಂದು ಸಂವಿಧಾನ, ಸರ್ಕಾರ ಇದ್ದರೂ ನಾವು ಧಾರ್ಮಿಕ, ಸಾಂಸ್ಕೃತಿಕವಾಗಿ ಸ್ವಾತಂತ್ರ್ಯರಾಗಲು ಸಾಧ್ಯವಾಗಿಲ್ಲ. ನಮ್ಮ ಮಕ್ಕಳು ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಏನು ತಿನ್ನಬೇಕು ಎಂಬುವುದನ್ನು ಸಹ ಮೇಲ್ವರ್ಗದವರು ನಿರ್ಧರಿಸುತ್ತಿದ್ದಾರೆ ಎಂದರು.

ರಾಜ್ಯದ ಜನರನ್ನು ಮಾಂಸ ತಿನ್ನುವವರು, ತಿನ್ನದೇ ಇರುವವರು ಎಂದು ಇಬ್ಭಾಗ ಮಾಡಿದ್ದಾರೆ. ಮಾಂಸ ತಿನ್ನದ ಜಾತಿಗಳು ಇಡಿಯಾಗಿ ಒಂದು ಕಡೆಯಿವೆ. ಮಾಂಸ ತಿನ್ನುವ ಜನರನ್ನು ತುಂಡು ತುಂಡು ಮಾಡಿ ಅವರಿಗೆ ಬೇಕಾದ ಹಾಗೆ ಒಂದೊಂದು ಕಡೆ ವರ್ಗಾಯಿಸುತ್ತಿದ್ದಾರೆ. ಜನರನ್ನು ಕೇವಲ ಅನ್ನದ ಮೂಲಕ ವಿಭಜಿಸಿದ್ದಾರೆ ಎಂದು ಹೇಳಿದರು.

ಈ ಚುನಾವಣೆ ನಮ್ಮ ಬದುಕು, ಜೀವನ ವಿಧಾನ, ಅಸ್ಮಿತೆ ಉಳಿಸಿಕೊಳ್ಳಲು ಮಾಡುತ್ತಿರುವ ಕೊನೆಯ ಪ್ರಯತ್ನ. ನಾವು ಬೆಳೆದು ಕೊಟ್ಟ ಅನ್ನವನ್ನು ನಮ್ಮ ಜತೆ ತಿನ್ನಲ್ಲ ಎಂಬುವವರಿಗೆ ಮತ ಹಾಕಲು ಮುಂದಾಗಿದ್ದೇವೆ. ಬೆಳೆದು ಕೊಟ್ಟವರು ದೊಡ್ಡವರು, ಬೇಯಿಸಿ ಕೊಟ್ಟವರಲ್ಲ. ನಮ್ಮ ಜತೆ ಸಾಲಾಗಿ ಕುಳಿತುಕೊಳ್ಳಲ್ಲ ಎನ್ನುವವರ ಜತೆ ನಾವೇಕೆ ಹೋಗಬೇಕು ಎಂಬ ವಿವೇಕ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಲೇಖಕ ಕೆ.ಪಿ.ನಟರಾಜ್, ‘ಮತಗಟ್ಟೆಗೆ ಹೋಗುವ ಮುನ್ನ ಬಿಜೆಪಿ ಸರ್ಕಾರದ 10 ವರ್ಷದಲ್ಲಿ ನಡೆದ ಎಲ್ಲ ಬೆಳವಣಿಗೆಗಳು ನೆನಪಾಗಬೇಕು. ಭವಿಷ್ಯದ ಆತಂಕಗಳನ್ನು ಎದುರುಗಡೆ ತಂದುಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ಹೊಂದಿದ ಮುದ್ದಹನುಮೇಗೌಡರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಜಾತ್ಯತೀತ ಯುವ ವೇದಿಕೆಯ ಗೌರವಾಧ್ಯಕ್ಷ ಎಚ್.ಮಾರುತಿಪ್ರಸಾದ್, ‘ಪ್ರಧಾನಿ ಮೋದಿ ರಾಜ್ಯದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೋರಾಟ ರೂಪಿಸಬೇಕು. ಇಲ್ಲದಿದ್ದರೆ ಮುಂದೆ ಬಾಯಿ ಬಿಡದಂತಹ ಸ್ಥಿತಿಗೆ ಬರುತ್ತೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಗೋಂದಳಿ ಸಮಾಜ ಅಧ್ಯಕ್ಷ ಕೆ.ಎಂ.ಜಯರಾಮಯ್ಯ, ಲೇಖಕ ಜಿ.ವಿ.ಆನಂದಮೂರ್ತಿ, ಜಾತ್ಯತೀತ ಯುವ ವೇದಿಕೆಯ ಅಧ್ಯಕ್ಷ ಡ್ಯಾಗೇರಹಳ್ಳಿ ವಿರೂಪಾಕ್ಷ, ಕುಂದೂರು ಮುರಳಿ, ಮೂರ್ತಿ, ಮುಖಂಡರಾದ ರಫಿಕ್‌ ಅಹ್ಮದ್‌, ಇಕ್ಬಾಲ್‌ ಅಹ್ಮದ್‌, ಎಂ.ಸಿ.ವೇಣುಗೋಪಾಲ್‌, ಎನ್‌.ಗೋವಿಂದರಾಜು, ಕುಂದೂರು ತಿಮ್ಮಯ್ಯ, ಡಾ.ಬಸವರಾಜು, ಜಿ.ಕೆ.ನಾಗಣ್ಣ, ಎನ್‌.ಜಿ.ರಾಮಚಂದ್ರಪ್ಪ, ಜಿ.ಚಂದ್ರಶೇಖರಗೌಡ ಮೊದಲಾದವರು ಪಾ‌ಲ್ಗೊಂಡಿದ್ದರು.

ಸತ್ಯ ಅಸತ್ಯದ ಹೋರಾಟ: ರಾಜಣ್ಣ

‘ಶ್ರೀರಾಮ ಹಿಂದುತ್ವವನ್ನು ಬಿಜೆಪಿಯವರು ಜಹಾಗೀರ್‌ ತೆಗೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಮತ ಗಳಿಕೆಗಾಗಿ ಜನರ ಭಾವನೆಗೆ ಧಕ್ಕೆ ತರುತ್ತಿದ್ದಾರೆ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆ ಸತ್ಯ ಅಸತ್ಯ ಮಧ್ಯದ ಹೋರಾಟ. ಈ ಬಾರಿ ಬಿಜೆಪಿಗೆ ಬಹುಮತ ಬಂದರೆ ಮೋದಿ ಸರ್ವಾಧಿಕಾರಿ ಆಗುತ್ತಾರೆ ಎಂಬುವುದರಲ್ಲಿ ಯಾವುದೇ ಅನುಮಾನ ಇಲ್ಲ. ಬಿಜೆಪಿಯವರ ಸುಳ್ಳಿನ ಮಾತುಗಳಿಗೆ ಜನ ಮರುಳಾಗಬಾರದು. ಎಲ್ಲ ಸಮುದಾಯದವರು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT