–ಮೈಲಾರಿ ಲಿಂಗಪ್ಪ
ತುಮಕೂರು: ಏಪ್ರಿಲ್‌ನಿಂದ ಜೂನ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 87 ನವಜಾತ ಶಿಶುಗಳು ಮೃತಪಟ್ಟಿವೆ. ಇದೇ ಅವಧಿಯಲ್ಲಿ ತುಮಕೂರು ತಾಲ್ಲೂಕುವೊಂದರಲ್ಲೇ 53 ಶಿಶುಗಳ ಮೃತಪಟ್ಟಿವೆ. ಮಧುಗಿರಿ ಮತ್ತು ಪಾವಗಡ ಈ ಎರಡೂ ತಾಲ್ಲೂಕು ಹೊರತುಪಡಿಸಿದರೆ ಜಿಲ್ಲೆಯ ಉಳಿದ ಕಡೆಗಳಲ್ಲಿ ಮರಣ ಪ್ರಮಾಣ ನಿಯಂತ್ರಣಕ್ಕೆ ಬಂದಿಲ್ಲ.
ಇದೇ ಅವಧಿಯಲ್ಲಿ ಜಿಲ್ಲೆಯಾದ್ಯಂತ ಐವರು ತಾಯಂದಿರು ಸಾವನ್ನಪ್ಪಿದ್ದಾರೆ. ಸಿಸೇರಿಯನ್ ಹೆರಿಗೆ ಸಹ ಜಾಸ್ತಿಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಿದೆ.
ಇತ್ತೀಚೆಗೆ ಅವಧಿಪೂರ್ವದಲ್ಲಿಯೇ ಹೆರಿಗೆ ಆಗುತ್ತಿರುವುದು ಹೆಚ್ಚಾಗಿದೆ. ಇದರಿಂದ ಮಕ್ಕಳ ಮರಣ ಪ್ರಮಾಣವೂ ಅಧಿವಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಾವುಗಳು ಇದೇ ಕಾರಣಕ್ಕೆ ಸಂಭವಿಸಿವೆ.
ಕಡಿಮೆ ತೂಕ ಮತ್ತು ಹುಟ್ಟಿದ ತಕ್ಷಣ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದರಿಂದ ಹೆಚ್ಚಿನ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ. ಮಗುವಿನಲ್ಲಿ ಕಾಣಿಸಿಕೊಳ್ಳುವ ಹೃದಯ ರೋಗ ಮತ್ತು ಕಿಡ್ನಿ ಸಮಸ್ಯೆ, ಹುಟ್ಟಿನಿಂದಲೇ ಬರುವ ಕಾಯಿಲೆಗಳಿಂದ ಸಾವು ಜಾಸ್ತಿಯಾಗಿವೆ ಎಂದು ಜಿಲ್ಲಾ ಆಸ್ಪತ್ರೆ ಮೂಲಗಳು ತಿಳಿಸಿವೆ.
ಗರ್ಭಾವಸ್ಥೆ ಸಮಯದಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕೊರತೆ ಎದ್ದು ಕಾಣುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ ಮಾಡಿದರೆ ಮುಂದೆ ಜನಿಸುವ ಮಕ್ಕಳಿಗೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ ಎನ್ನುವುದು ವೈದ್ಯರ ಸಮಜಾಯಿಷಿ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗಳ ಮುಖಾಂತರ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ಆದರೆ, ಅದು ಎಲ್ಲ ಗರ್ಭಿಣಿಯರನ್ನೂ ತಲುಪುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.