ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ರಸ್ತೆ ಮೇಲೆ ಹಳ್ಳ, ಸವಾರರ ಗೋಳಾಟ

ಮಳೆ ಬಂದರೆ ಅರಳೀಕೆರೆ– ಮಾದಿಹಳ್ಳಿ ಮಧ್ಯೆ ಸಂಪರ್ಕ ಕಡಿತ
Last Updated 19 ಸೆಪ್ಟೆಂಬರ್ 2020, 2:29 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಅರಳೀಕೆರೆ– ಮಾದಿಹಳ್ಳಿ ಮಧ್ಯೆಯ ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು, ವಾಹನ ಸವಾರರು ಮತ್ತು ಗ್ರಾಮಸ್ಥರು ಪರದಾಡುವಂತಾಗಿದೆ.

ಅರಳೀಕೆರೆ ಪಕ್ಕದಲ್ಲಿ ಹರಿಯುವ ಹಳ್ಳವು ಹುಲಿಕೆರೆಯಿಂದ ಪ್ರಾರಂಭವಾಗಿ ಪುರ, ಮೂಲಕ ಶಿಂಷಾ ನದಿ ಪಾತ್ರಕ್ಕೆ ಸೇರುತ್ತದೆ. ಪ್ರತಿ ವರ್ಷ ಮಳೆ ಮತ್ತು ಹೇಮಾವತಿ ನಾಲಾ ನೀರಿಗೆ ಈ ಹಳ‍್ಳವು ತುಂಬಿ ರಭಸವಾಗಿ ಹರಿಯುತ್ತದೆ. ಆ ವೇಳೆ ವಾಹನ ಹಾಗೂ ಜನ ಸಂಚಾರ ಸಂಪೂರ್ಣ ಸ್ಥಗಿತವಾಗುತ್ತದೆ.

ಕಳೆದ ಮುಂಗಾರು ಮಳೆಯಲ್ಲಿ ಹಳ‍್ಳದ ನೀರು ಬಂದು ಈ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್‍ ನೀರಿನಲ್ಲಿ ಸಿಲುಕಿಕೊಂಡಿತ್ತು. ಎರಡು ದಿನಗಳ ಕಾಲ ಈ ಭಾಗದ ರಸ್ತೆಯಲ್ಲಿ ಜನಸಂಚಾರ ಅಸ್ತವ್ಯಸ್ತವಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು.

15 ವರ್ಷಗಳ ಹಿಂದೆ ಅರಳೀಕೆರೆ– ಮಾದಿಹಳ್ಳಿ ಮಧ್ಯದ ಹಳ್ಳದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದರು. ಅಂದಿನಿಂದ ಇಲ್ಲಿ ಓಡಾಡಲು ಜನರು ಭಯಪಡುತ್ತಾರೆ. ಮಳೆಗಾಲದಲ್ಲಿ ಅರಳೀಕೆರೆ ಗ್ರಾಮಸ್ಥರು ತಮ್ಮ ತೋಟ, ಹೊಲ ಗದ್ದೆಗಳಿಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೆ ಅರಳೀಕೆರೆಯಿಂದ ಮಾದಿಹಳ್ಳಿ ಪ್ರೌಢಶಾಲೆಗೆ ಇದೇ ಹಳ್ಳ ದಾಟಿ ವಿದ್ಯಾರ್ಥಿಗಳು ಹೋಗಬೇಕು. ಒಂದು ವೇಳೆ ಮಳೆ ಬಿದ್ದು ಹಳ್ಳದ ನೀರು ಹರಿದರಂತೂ ಮಕ್ಕಳ ಪಜೀತಿ ಹೇಳತೀರದು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ಇನ್ನು ಹಳ್ಳದ ಇಕ್ಕೆಲಗಳಲ್ಲಿ ಗಿಡಗಂಟಿಗಳು ದಟ್ಟವಾಗಿ ಬೆಳೆದು ಹಳ್ಳದ ನೀರಿನೊಳಗೆ ವಾಹನಗಳು ಮತ್ತು ಬೈಕ್‍ಗಳು ಹೋಗುವಾಗ ಸವಾರರಿಗೆ ಸೇತುವೆ ದಡ ಯಾವುದು ಎಂದು ಗೊತ್ತಾಗದೆ ಹಳ್ಳದಲ್ಲಿ ಬಿದ್ದಿರುವ ಘಟನೆಗಳು ನಡೆದಿವೆ’ ಎನ್ನುತ್ತಾರೆ ಗ್ರಾಮದ ರವಿಕುಮಾರ್.

‘ತುರುವೇಕೆರೆಯಿಂದ ಹೋಗುವ ಹಾಗೂ ಕಲ್ಲೂರು ಕ್ರಾಸ್‌ನಿಂದ ವಾಹನಗಳು ಬರುವಾಗ ಈ ಹಳ‍್ಳವು ಇಳಿಜಾರಿನಿಂದ ಕೂಡಿರುವುದರಿಂದ ವಾಹನಗಳು ವೇಗವಾಗಿ ಚಲಿಸುತ್ತವೆ. ಆಗ ಹಳ್ಳದ ನೀರು ಕಡಿಮೆ ಇದೆಯೋ, ಜಾಸ್ತಿ ಇದೆಯೋ ಎಂದು ಗೊತ್ತಾಗದೆ ಅನಾಹುತಗಳು ಸಂಭವಿಸುತ್ತಿವೆ’ ಎಂದು ಶಿವಲಿಂಗಪ್ಪ ತಿಳಿಸಿದರು.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಈ ರಸ್ತೆ ಸೇರುತ್ತದೆ. ಕಳೆದ ಬಾರಿ ರಾಜ್ಯ ಹೆದ್ದಾರಿ ಯೋಜನೆಯಡಿ ಡಾಂಬರ್ ರಸ್ತೆ ನಿರ್ಮಾಣ ಮಾಡುವಾಗ ಇಲ್ಲಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ, ಅನುದಾನದ ಕೊರತೆಯಿಂದ ಕೇವಲ ಡಾಂಬರ್‌ ಹಾಕಿ ಕೈತೊಳೆದು ಕೊಳ್ಳಲಾಯಿತು ಎಂದು ಗ್ರಾಮಸ್ಥರು ಆರೋಪಿಸಿದರು.

ಈ ಬಾರಿ ಹಳ್ಳ ಹರಿಯುವ ಸ್ಥಳದಲ್ಲಿ 3 ಪೈಪ್‌ಗಳನ್ನು ಹಾಕಿ 4 ಅಡಿ ಎತ್ತರದ ಸೇತುವೆ ಮಾಡಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಸಕ್ರಿಯವಾಗಿದೆ ಎಂದು ಎಂಜಿನಿಯರ್ ಪ್ರದೀಪ್‍ ತಿಳಿಸಿದರು.

ಇದೇ ರಸ್ತೆಯಲ್ಲಿ ಮಾದಿಹಳ್ಳಿ, ಸುಂಕಲಾಪುರ, ಆನೆಮೆಳೆ, ಆಯರಹಳ್ಳಿ, ತಾಳಕೆರೆ, ಡೊಂಕಿಹಳ್ಳಿ, ಪುಟ್ಟಮಾದಿಹಳ‍್ಳಿ, ಕಲ್ಕೆರೆ, ಬೋಚಿಹಳ್ಳಿ, ಕಡಬಾ, ಕಲ್ಲೂರು, ಕಲ್ಲೂರು ಕ್ರಾಸ್‌ಗಳಿಂದ ಆಟೊ, ಶಾಲಾವಾಹನ, ಟೆಂಪೊ, ಲಾರಿ ಕೆಎಸ್ಆರ್‌ಟಿಸಿ ಬಸ್‌ಗಳು ಸೇರಿದಂತೆ ಹತ್ತಾರು ವಾಹನಗಳು ಓಡಾಡುತ್ತವೆ.

ಕಚೇರಿ ಕೆಲಸಗಳಿಗಾಗಿ, ಸಂತೆ, ವ್ಯಾಪಾರ, ಆಸ್ಪತ್ರೆ, ಕಾನ್ವೆಂಟ್, ಶಾಲಾ ಕಾಲೇಜುಗಳಿಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರೆ ಇಲಾಖೆಗಳ ನೌಕರರು, ವ್ಯಾಪಾರಸ್ಥರು, ಕೂಲಿಕಾರ್ಮಿಕರು ನಿತ್ಯ ತುರುವೇಕೆರೆ, ತುಮಕೂರು, ಬೆಂಗಳೂರು, ತಿಪಟೂರು, ಗುಬ್ಬಿ, ನಿಟ್ಟೂರು ಇನ್ನಿತರ ಕಡೆ ಸಂಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT