ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪಾಠ

ಬಾರುಕೋಲು ಚಳವಳಿಗೆ ತೆರಳುತ್ತಿದ್ದ ರೈತರಿಗೆ ತಡೆ; ರೈತರ ಮುಖಂಡರ ಆಕ್ರೋಶ
Last Updated 10 ಡಿಸೆಂಬರ್ 2020, 5:20 IST
ಅಕ್ಷರ ಗಾತ್ರ

ತುಮಕೂರು: ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಬುಧವಾರ ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಬಾರುಕೋಲು ಚಳವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಜಿಲ್ಲೆಯ ರೈತ ಸಂಘದ ಕಾರ್ಯಕರ್ತರನ್ನು ನಗರದ ಹೊರವಲಯದ ಜಾಸ್‍ಟೋಲ್‍ಗೇಟ್ ಮತ್ತು ನೆಲಮಂಗಲ ಟೋಲ್‌ ಬಳಿ ಪೊಲೀಸರು ತಡೆದರು.

‘ನಮ್ಮನ್ನು ಬಂಧಿಸಿ, ಇಲ್ಲವೆ ಬಿಡಿ’ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನಕಾರರ ಆಗ್ರಹಕ್ಕೆ ಮಣಿದು ಪೊಲೀಸರು ಅವರನ್ನು ಬೆಂಗಳೂರಿಗೆ ತೆರಳಿದರು ಅವಕಾಶ ಮಾಡಿಕೊಟ್ಟರು.

ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರು ಹೋಬಳಿಯ ರೈತ ಸಂಘಟನೆಗಳ ಕಾರ್ಯಕರ್ತರು ಚಳವಳಿಯಲ್ಲಿ ಪಾಲ್ಗೊಳ್ಳಲು ವಾಹನದಲ್ಲಿ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘಟನೆಯ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಪೊರೇಟ್‌ ಕಂಪನಿಗಳ ಪರವಾಗಿವೆ. 15 ದಿನಗಳಿಂದ ದೇಶದಾದ್ಯಂತ ರೈತರು ಚಳವಳಿ ನಡೆಸುತ್ತಿದ್ದರೂ ಪ್ರಧಾನಿ‌ ನರೇಂದ್ರ ಮೋದಿ ರೈತರ ಅಹವಾಲು ಆಲಿಸುವ ಸೌಜನ್ಯ ತೋರಿಲ್ಲ. ಅವರಿಗೆ ಪಾಠ ಕಲಿಸುವ ಸಲುವಾಗಿ ಬಾರುಕೋಲು ಚಳವಳಿ ನಡೆಸಲಾಗುತ್ತಿದೆ ಎಂದರು.

ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರೈತರು ತಕ್ಕಪಾಠ ಕಲಿಸುತ್ತಾರೆ. ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ತಲೆಯಾಡಿಸಿ ಚಕಾರ ಎತ್ತದ ರಾಜ್ಯದ ಶಾಸಕರು, ಸಂಸದರಿಗೆ ರೈತರ ಧಿಕ್ಕಾರ. ಇವರೆಲ್ಲಾ ರೈತರನ್ನು ಕಡೆಗಣಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಪಾಠ ಕಲಿಸಲಾಗುವುದು ಎಂದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿದರು. ಸೀಗೇಬಾಗಿ ಲೋಕೇಶ್, ಕನ್ನಪ್ಪ, ದಾಸಪ್ಪ, ಬಸವಪ್ಪ, ಚೇತನ್, ಚಂದ್ರಪ್ಪ, ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT