ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು ಜಿಲ್ಲೆಯಲ್ಲಿ 98 ನಕಲಿ ವೈದ್ಯರು ಪತ್ತೆ

ಅನುಮತಿ ಪಡೆಯದ ಕ್ಲಿನಿಕ್‌ ಬಂದ್‌, ವೈದ್ಯರ ವಿರುದ್ಧ ಪ್ರಕರಣ ದಾಖಲು
Published 21 ಮೇ 2024, 14:21 IST
Last Updated 21 ಮೇ 2024, 14:21 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಎಲ್ಲೆಡೆ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ‘ನಕಲಿ’ಗಳಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದೆ.

ಜಿಲ್ಲೆಯಾದ್ಯಂತ ಈವರೆಗೆ 98 ಜನ ನಕಲಿ ವೈದ್ಯರನ್ನು ಗುರುತಿಸಿ, ಅವರ ವಿರುದ್ಧ ಕ್ರಮಕೈಗೊಳಲಾಗಿದೆ. ಅರ್ಹತೆ ಇಲ್ಲದವರು, ವೈದ್ಯಕೀಯ ಶಿಕ್ಷಣ ಪಡೆಯದವರು, ಆರೋಗ್ಯ ಇಲಾಖೆಯ ಅನುಮತಿ ಪಡೆಯದೇ ಕ್ಲಿನಿಕ್ ನಡೆಸುತ್ತಿರುವುದು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ನಕಲಿ ವೈದ್ಯರನ್ನು ಪತ್ತೆ ಹಚ್ಚುವ ಕೆಲಸ ನಿರಂತರವಾಗಿ ಸಾಗುತ್ತಿದೆ.

ಗಡಿ ಭಾಗದ ತಾಲ್ಲೂಕುಗಳಲ್ಲಿ ನಕಲಿ ವೈದ್ಯರಿಗೆ ಕಡಿವಾಣ ಬೀಳದಾಗಿದ್ದು, ಶಿರಾ, ಪಾವಗಡ, ಮಧುಗಿರಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ವೈದ್ಯರು ಇರುವುದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಿಂದ ತಿಳಿದು ಬರುತ್ತದೆ. ಪಾವಗಡ ತಾಲ್ಲೂಕಿನಲ್ಲಿ ಅತಿಹೆಚ್ಚಿನ ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದ್ದು, ಈ ಭಾಗದಲ್ಲಿ 34 ನಕಲಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಕ್ಲಿನಿಕ್‌ಗಳನ್ನು ಮುಚ್ಚಿಸಿ, ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿಯಾಗಿ ತುಮಕೂರು ತಾಲ್ಲೂಕಿನಲ್ಲಿ 14 ಮಂದಿ ಮೇಲೆ ಪ್ರಕರಣ ದಾಖಲಾಗಿದೆ.

ಕೆಲವು ಭಾಗಗಳಲ್ಲಿ ನಕಲಿ ವೈದ್ಯರು ಪ್ರಭಾವಿ ಮುಖಂಡರು, ರಾಜಕಾರಣಿಗಳ ಹೆಸರು ಹೇಳಿಕೊಂಡು ಕ್ಲಿನಿಕ್ ಮುಂದುವರಿಸುತ್ತಿದ್ದಾರೆ. ಇಂತಹ ಕ್ಲಿನಿಕ್‌ಗಳನ್ನು ಮುಚ್ಚಿಸಿ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ನಕಲಿ ವೈದ್ಯರು ನೀಡುವ ಔಷಧಿಗಳಿಂದ ಅಡ್ಡ ಪರಿಣಾಮ ಉಂಟಾಗಿ ಸಾರ್ವಜನಿಕರು ಆರೋಗ್ಯದ ಸಮಸ್ಯೆ ಅನುಭವಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಪಾವಗಡದಲ್ಲಿ ‘ನಕಲಿ ವೈದ್ಯರು ನೀಡಿದ ಚಿಕಿತ್ಸೆಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು. ಇಂತಹ ಘಟನೆಗಳು ಜಿಲ್ಲೆಯ ಹಲವು ಭಾಗಗಳಲ್ಲಿ ಆಗಾಗ ವರದಿಯಾಗುತ್ತಲೇ ಇವೆ.

‘ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ನಕಲಿಗಳ ವಿರುದ್ಧ ಸೂಕ್ತ ಕ್ರಮ ಆಗುವುದಿಲ್ಲ. ಕ್ಲಿನಿಕ್ ಮುಚ್ಚಿದರೆ ಮತ್ತೊಂದು ಕಡೆಯಲ್ಲಿ ಹೊಸದಾಗಿ ಕ್ಲಿನಿಕ್ ತೆರೆಯುತ್ತಾರೆ. ಇದೊಂದು ದಂಧೆಯಾಗಿ ಬದಲಾಗಿದೆ. ಒಮ್ಮೆ ಪ್ರಕರಣ ದಾಖಲಾದವರಿಗೆ ಮತ್ತೆ ಕ್ಲಿನಿಕ್‌ ಶುರು ಮಾಡಲು ಅವಕಾಶ ನೀಡಬಾರದು. ಆಗ ಮಾತ್ರ ಜನರಿಗೆ ನಿಜವಾದ ಆರೋಗ್ಯ ಸೇವೆ ಸಿಗುತ್ತದೆ’ ಎಂದು ಪಾವಗಡದ ಆಂಜನೇಯ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಪತ್ತೆಯಾದ ನಕಲಿ ವೈದ್ಯರು

ತಾಲ್ಲೂಕು;ನಕಲಿ ವೈದ್ಯರು

ಪಾವಗಡ;34

ಶಿರಾ;21

ತುಮಕೂರು;14

ಮಧುಗಿರಿ;11

ಚಿಕ್ಕನಾಯಕನಹಳ್ಳಿ;8

ಕೊರಟಗೆರೆ;4

ತುರುವೇಕೆರೆ;2

ತಿಪಟೂರು;2

ಗುಬ್ಬಿ;2

ಒಟ್ಟು;98

ನಕಲಿ ವೈದ್ಯರ ಪತ್ತೆಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರ ದೂರನ್ನು ಪರಿಗಣಿಸಲಾಗುತ್ತಿದೆ
ಡಾ.ಡಿ.ಎನ್‌.ಮಂಜುನಾಥ್‌ ಡಿಎಚ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT