ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರ ಹಬ್ಬದಂತೆ ನಡೆದ ಗೃಹಪ್ರವೇಶ

ಮಧುಗಿರಿ: ಅಂಧ ಕಲಾವಿದೆಯರ ಮನೆ ಗೃಹಪ್ರವೇಶ ನೆರವೇರಿಸಿದ ನಟ ಜಗ್ಗೇಶ್‌
Last Updated 13 ಮಾರ್ಚ್ 2020, 11:24 IST
ಅಕ್ಷರ ಗಾತ್ರ

ಮಧುಗಿರಿ: ಊರಿನ ತುಂಬೆಲ್ಲಾ ಸಡಗರ, ಅಂಧ ಕಲಾವಿದೆಯರ ಮೊಗದಲ್ಲಿ ಸೂರು ಸಿಕ್ಕ ತೃಪ್ತಿ. ನಟ ಜಗ್ಗೇಶ್‌, ಪರಿಮಳ ದಂಪತಿಗೆ ಧನ್ಯತಾ ಭಾವ. ಗಾಯಕಿಯರ ಕೈ ಹಿಡಿದು ಹೊಸ ಮನೆಗೆ ಕಾಲಿಟ್ಟ ಜಗ್ಗೇಶ್‌
ಅವರನ್ನು ನೋಡಲು ಸೇರಿದ್ದ ಜನರ ಸಂಭ್ರಮ...

ಅಂಧ ಕಲಾವಿದೆಯರಾದ ರತ್ನಮ್ಮ– ಮಂಜಮ್ಮ ಸಹೋದರಿಯರಿಗಾಗಿ ಕಸಬಾ ವ್ಯಾಪ್ತಿಯ ಡಿ.ವಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಜಗ್ಗೇಶ್‌ ಅಭಿಮಾನಿಗಳ ಸಂಘ ಹಾಗೂ ಕೊರಟಗೆರೆ ಫ್ರೆಂಡ್ಸ್‌ ಗ್ರೂಪ್‌ನಿಂದ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಗುರುವಾರ ಊರಿನ ಹಬ್ಬದಂತೆ ನಡೆಯಿತು.

ನೆಲೆಸಲು ಸೂರಿಲ್ಲದೆ ತಾಲ್ಲೂಕಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡುತ್ತಾ ಜೀವನ ಸಾಗಿಸುತ್ತಿದ್ದ ಅಂಧ ಕಲಾವಿದೆಯರಿಗೆ ‘ಝೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರ ನೋವಿಗೆ ಮಿಡಿದ ನಟ ಜಗ್ಗೇಶ್‌ ಮನೆ ನಿರ್ಮಿಸಿಕೊಟ್ಟಿದ್ದಾರೆ.

ಅಂಧ ಕಲಾವಿದೆಯರನ್ನು ಅಪ್ಪಿಕೊಂಡೇ ನೂತನ ಮನೆ ಪ್ರವೇಶಿಸಿದ ಜಗ್ಗೇಶ್‌, ಮನೆಯ ಒಳಾಂಗಣ ಕಂಡು ಸಂತಸಗೊಂಡರು. ಪತ್ನಿ ಪರಿಮಳ ಅವರಿಗೆ ತೋರಿಸಿ ‘ಮನೆ ಎಷ್ಟು ಸುಂದರವಾಗಿದೆ’ ಎಂದು ಸಂಭ್ರಮಿಸಿದರು.

ಕಲಾವಿದೆಯರಾದ ರತ್ನಮ್ಮ– ಮಂಜಮ್ಮ ಹಾಡಿನ ಮೂಲಕವೇ ಜಗ್ಗೇಶ್‌ ಅವರಿಗೆ ಅಭಿನಂದಿಸಿದರು. ಇವರ ಹಾಡು ಸೇರಿದ್ದ ಜನರನ್ನು ರಂಜಿಸಿತು.

ಜಗ್ಗೇಶ್ ಮಾತನಾಡಿ, ‘ಇವರ ಹಾಡುಗಳಿಗೆ ಮನಸೋತಿದ್ದೇನೆ. ಅವರ ಗಂಟಲಿನಲ್ಲಿರುವ ಸರಸ್ವತಿಯನ್ನು ಹುಡುಕಿಕೊಂಡು ಮಧುಗಿರಿಗೆ ಬಂದಿದ್ದೇನೆ. ಈ ಕಲಾವಿದೆಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾರೆ’ ಎಂದರು.

ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ರಾಘವೇಂದ್ರ ಮಠದ ರಾಘವೇಂದ್ರ ಸ್ವಾಮೀಜಿ, ಪರಿಮಳ ಜಗ್ಗೇಶ್ ಮಾತನಾಡಿದರು. ಪುರಸಭೆ ಸದಸ್ಯ ಎಂ.ಎಲ್.ಗಂಗರಾಜು, ಗ್ರಾ.ಪಂ ಉಪಾಧ್ಯಕ್ಷ ಪ್ರಭು, ತಹಶೀಲ್ದಾರ್ ಡಾ.ವಿಶ್ವನಾಥ, ಜಗ್ಗೇಶ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಲ್.ಮಲ್ಲಯ್ಯ, ಕೆ.ಬಿ.ಶಿವಕುಮಾರ್, ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ಕೆ.ಎನ್.ರವಿಕುಮಾರ್, ಮುಖಂಡರಾದ ಟಿ.ರಾಮಣ್ಣ, ಎಂ.ಶ್ರೀಧರ್, ತಿಮ್ಮಣ್ಣ ಇದ್ದರು.

**

ಜಗ್ಗೇಶ್‌ ನೋಡಲು ಜನಸಂದಣಿ

ಗೃಹ ಪ್ರವೇಶಕ್ಕೆ ಚಿತ್ರ ನಟ ಜಗ್ಗೇಶ್ ಬರುವ ವಿಷಯ ತಿಳಿದ, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಮನೆಯ ಮುಂಭಾಗ ಜಮಾಯಿಸಿದ್ದರು. ಜನರ ನಿಯಂತ್ರಣಕ್ಕೆ ಪೊಲೀಸರು ಹರ ಸಾಹಸಪಟ್ಟರು. ಸುತ್ತ ಮುತ್ತಲಿನ ಮನೆಯ ಮಹಡಿಯ ಮೇಲೆ ನಿಂತ ನೂರಾರು ಜನರು ಜಗ್ಗೇಶ್ ಕಾರ್ಯಕ್ಕೆ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT