ಭಾನುವಾರ, ಸೆಪ್ಟೆಂಬರ್ 19, 2021
31 °C

ಬಾಕಿ ವೇತನಕ್ಕೆ ಅಕ್ಷರ ದಾಸೋಹ ಸಿಬ್ಬಂದಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ತಡೆಹಿಡಿದಿರುವ ಜೂನ್, ಜುಲೈ ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಅಲಹಾಬಾದ್ ಹೈಕೋರ್ಟ್ 2020ರ ಡಿಸೆಂಬರ್ 15ರಂದು ನೀಡಿದ ಕನಿಷ್ಠ ವೇತನಕ್ಕೆ ಸಂಬಂಧಿಸಿದ ತೀರ್ಪನ್ನು ದೇಶದಾದ್ಯಂತ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ರಾಜ್ಯ ಸಲಹೆಗಾರ ಎನ್.ಶಿವಣ್ಣ, ‘2004ರಲ್ಲಿ ಸರ್ಕಾರ ಜಾರಿಗೆ ತಂದ ಅಕ್ಷರದಾಸೋಹ ಬಿಸಿಯೂಟ ಕಾರ್ಯಕ್ರಮ ಪ್ರಸ್ತುತ ದೇಶದಾದ್ಯಂತ ಜಾರಿಯಲ್ಲಿದೆ. ನಿರಂತರ ಹೋರಾಟದ ಫಲವಾಗಿ ಮುಖ್ಯ ಅಡುಗೆಯವರಿಗೆ ತಿಂಗಳಿಗೆ ₹2,700, ಸಹಾಯಕರಿಗೆ ₹2,600 ನೀಡಲಾಗುತ್ತಿದೆ. ಈಗಿನ ಬೆಲೆ ಏರಿಕೆಯಿಂದಾಗಿ ಇಷ್ಟು ಕನಿಷ್ಠ ಹಣದಲ್ಲಿ ಬದುಕುವುದು ಕಷ್ಟಕರವಾಗಿದೆ. ಹಾಗಾಗಿ ಕೋರ್ಟ್ ತೀರ್ಪು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಬಿಸಿಯೂಟ ತಯಾರಕರಿಗೂ ಕೋವಿಡ್ ಪರಿಹಾರ ನೀಡಬೇಕು. ವಯಸ್ಸಿನ ನೆಪ ಮಾಡಿಕೊಂಡು 60 ವರ್ಷ ದಾಟಿದ ಅಡುಗೆ ಕೆಲಸಗಾರರನ್ನು ನಿವೃತ್ತಿ ಉಪದನವಿಲ್ಲದೆ ಕೆಲಸದಿಂದ ಕೈಬಿಡಬಾರದು. ಜತೆಗೆ ಬಿಸಿಯೂಟ ತಯಾರಕರ ಮೇಲ್ವಿಚಾರಣೆಯನ್ನು ಎಸ್‌ಡಿಎಂಸಿಯಿಂದ ಶಾಲೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕಂಬೇಗೌಡ, ‘ಬಿಸಿಯೂಟ ತಯಾರಕರನ್ನು ಕಾಯಂಗೊಳಿಸಿ, ಶಾಸನಬದ್ಧ ಹಕ್ಕು ನೀಡಬೇಕು. ಎಲ್ಐಸಿ ಆಧಾರಿತ ನಿವೃತ್ತಿ ವೇತನ, ಪ್ರತಿ ತಿಂಗಳು 5ನೇ ತಾರೀಖಿಗೆ ವೇತನ ಬಿಡುಗಡೆ ಮಾಡಬೇಕು’ ಆಗ್ರಹಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿಲ್ಲಾ ಸಂಚಾಲಕ ಕಾಂತರಾಜು, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ವನಜಾಕ್ಷಮ್ಮ, ಸಾವಿತ್ರಮ್ಮ, ಉಮಾದೇವಿ, ನಾಗರತ್ನಮ್ಮ, ಪದ್ಮ ಇತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.