ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.28ಕ್ಕೆ ’ರೈತ ಮಹಿಳಾ ಜನಾಂದೋಲನ ಯಾತ್ರೆ’

ಮಹಿಳೆಯರ ಭೂಮಿ ಹಕ್ಕಿಗಾಗಿ ದೇಶವ್ಯಾಪಿ ಜಾಗೃತಿ ಆಂದೋಲನ
Last Updated 25 ಆಗಸ್ಟ್ 2018, 12:10 IST
ಅಕ್ಷರ ಗಾತ್ರ

ತುಮಕೂರು: ರೈತ ಮಹಿಳೆಯರ ಹಕ್ಕುಗಳಿಗಾಗಿ ಮತ್ತು ಮಹಿಳೆಯರ ಭೂಮಿ ಹಕ್ಕುಗಳಿಗೆ ಆಗ್ರಹಿಸಿ ಕೇರಳದ ತಿರುವನಂತಪುರದಿಂದ ಆರಂಭಗೊಂಡಿರುವ ‘ರೈತ ಮಹಿಳಾ ಜನಾಂದೋಲನ ಯಾತ್ರೆ’ ಆ.28ಕ್ಕೆ ತುಮಕೂರಿಗೆ ಬರಲಿದೆ ಎಂದು ಭೂಮಿ ವಸತಿ ವಂಚಿತರ ಹೋರಾಟ ಸಮಿತಿ ಸಂಚಾಲಕ ಸಿ.ಯತಿರಾಜ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಏಕತಾಪರಿಷತ್, ಏಕತಾ ಮಹಿಳಾ ಮಂಚ್ ಮಾಕಾಂ ಸಂಘಟನೆಗಳು ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಆ.16ರಿಂದ ದೇಶದ ಐದು ಕಡೆಯಿಂದ ಯಾತ್ರೆ ಆರಂಭವಾಗಿದೆ. ಭೂಮಿ ಪ್ರಶ್ನೆಯನ್ನು ದೇಶದ ಅಭಿವೃದ್ಧಿಯ ಪ್ರಶ್ನೆಯನ್ನಾಗಿಸಲು ಆಂದೋಲನವನ್ನು ಸಂಘಟಿಸಲಾಗಿದೆ’ ಎಂದು ಹೇಳಿದರು.

'ಈ ಯಾತ್ರೆಯು ಆ.26ರಂದು ಬೆಂಗಳೂರು ತಲುಪಲಿದೆ. ಹುಣಸೂರು, ತುಮಕೂರು, ಚಳ್ಳಕೆರೆ, ಕೊಟ್ಟೂರು ಮೂಲಕ ಆ.30ರಂದು ರಾಯಚೂರು ತಲುಪಲಿದೆ. ಬಳಿಕ ತೆಲಂಗಾಣ, ಛತೀಸ್‌ಗಡ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ತಾನದ ಮೂಲಕ ಹರಿಯಾಣದ ಪಾಲ್‌ ತಲುಪಲಿದೆ' ಎಂದು ವಿವರಿಸಿದರು.

ಭೂಶಕ್ತಿ ಕೇಂದ್ರದ ಸಂಚಾಲಕಿ ಜ್ಯೋತಿರಾಜ್ ಮಾತನಾಡಿ,‘ಭೂಮಿ ಆಯೋಗ ರಚನೆ ಮಾಡಬೇಕು, ಮಹಿಳೆಯರ ಹೆಸರಿನಲ್ಲಿ ಭೂಮಂಜೂರಾತಿ ನೀಡಬೇಕು, ಮಹಿಳೆಯರಿಗೆ ಭೂಮಿ ಜಂಟಿ ಒಡೆತನ ನೀಡಬೇಕು, ಮಹಿಳಾ ಪ್ರಾತಿನಿಧ್ಯವುಳ್ಳ ಭೂ ಸುಧಾರಣಾ ಕಾರ್ಯಪಡೆ ರಚಿಸಬೇಕು, ಕರ್ನಾಟಕ ಭೂ ಸುಧಾರಣಾ ನೀತಿಯನ್ನು ಮಹಿಳಾ ದೃಷ್ಟಿಕೋನದಿಂದ ಮರುವಿಮರ್ಶೆಗೊಳಪಡಿಸಬೇಕು, ಅರಣ್ಯ ಹಕ್ಕು ಜಾರಿಯಲ್ಲಿ ಮಹಿಳಾ ಪ್ರಾತಿನಿಧ್ಯ ಇರಬೇಕು ಎಂಬುದು ಆಂದೋಲನದ ಪ್ರಮುಖ ಬೇಡಿಕೆಗಳಾಗಿವೆ’ ಎಂದು ವಿವರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ (ಕೋಡಿಹಳ್ಳಿ ಬಣ) ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಿವರತ್ನ ಮಾತನಾಡಿ,‘ಇಲ್ಲಿಯವರೆಗೂ ಮಹಿಳೆಯರನ್ನು ರೈತರು ಎಂದು ಪರಿಗಣಿಸಿಲ್ಲ. ಸ್ಥಿರಾಸ್ತಿ ವಿಚಾರದಲ್ಲಿ ಇಲ್ಲಿಯವರೆಗೂ ಮಹಿಳೆಯರನ್ನು ರೈತರು ಎಂದು ಪರಿಗಣಿಸಿಲ್ಲ’ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ‘ರೈತರಿಗೆ ಆದಾಯ ಖಾತರಿ ಆಯೋಗ ರಚಿಸಬೇಕು. ರೈತರ ಆದಾಯ ದುಪ್ಪಟ್ಟುಗೊಳಿಸುವ ದಿಸೆಯಲ್ಲಿ ಪ್ರಯತ್ನಿಸಬೇಕು. ದೇಶದ ಕೃಷಿ ಚಟುವಟಿಕೆಯಲ್ಲಿ ಮಹಿಳೆಯರ ಪಾಲು ಶೇ 60ಕ್ಕಿಂತ ಹೆಚ್ಚಾಗಿದೆ. ಅವರ ಹಕ್ಕೊತ್ತಾಯಗಳನ್ನು ಈಡೇರಿಸದೇ ಇದ್ದರೆ ಭವಿಷ್ಯದಲ್ಲಿ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಹೇಳಿದರು.

ಪಿಯುಸಿಎಲ್ ಸಂಘಟನೆ ಅಧ್ಯಕ್ಷ ಕೆ.ದೊರೈರಾಜ್ ಮಾತನಾಡಿ, ‘ಈ ಆಂದೋಲನಕ್ಕೆ ಪಿಯುಸಿಎಲ್ ಸಂಘಟನೆ ಬೆಂಬಲಿಸುತ್ತದೆ. ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸಲಿದೆ’ ಎಂದು ಹೇಳಿದರು.

ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕ ಕೆ.ನರಸಿಂಹಮೂರ್ತಿ, ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸಿ. ಅಜ್ಜಪ್ಪ ಮಾತನಾಡಿದರು. ಸಮರ್ಥ ಫೌಂಡೇಷನ್‌ನ ರಾಣಿ ಚಂದ್ರಶೇಖರ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT