ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಪಿಎಂಸಿ: ಶೇ 75ರಷ್ಟು ಹುದ್ದೆ ಖಾಲಿ

132 ಹುದ್ದೆಗಳಲ್ಲಿ 99 ಹುದ್ದೆಗಳು ಖಾಲಿ, ಕರ್ತವ್ಯ ನಿರತರ ಮೇಲೆ ಹೆಚ್ಚಿದ ಒತ್ತಡ
Published 7 ಡಿಸೆಂಬರ್ 2023, 15:35 IST
Last Updated 7 ಡಿಸೆಂಬರ್ 2023, 15:35 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಕಾಯಂ ಸಿಬ್ಬಂದಿಯ ಕೊರತೆ ಎದುರಾಗಿದ್ದು, ನಾಲ್ವರ ಕೆಲಸವನ್ನು ಒಬ್ಬರೇ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಗಳಲ್ಲಿ ಸೂಕ್ತ ಸಮಯಕ್ಕೆ ಕೆಲಸಗಳಾಗದೆ ರೈತರು ಪರದಾಡುವಂತಾಗಿದೆ.

ಜಿಲ್ಲೆಯ 9 ಮಾರುಕಟ್ಟೆ ಸಮಿತಿಗಳಲ್ಲಿ ಶೇ 75ರಷ್ಟು ಹುದ್ದೆಗಳು ಖಾಲಿ ಇವೆ. ಜಿಲ್ಲೆಗೆ 132 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ ಕೇವಲ 33 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 99 ಹುದ್ದೆಗಳು ಖಾಲಿಯಾಗಿವೆ. ಹೊರ ಗುತ್ತಿಗೆ ಆಧಾರದಲ್ಲಿ 73 ಜನರನ್ನು ನೇಮಿಸಿಕೊಂಡಿದ್ದು, ಅವರ ಮೇಲೆ ಕೆಲಸದ ಭಾರ ಹೆಚ್ಚಾಗಿದೆ.

ನಗರದ ಬಟವಾಡಿಯ ಎಪಿಎಂಸಿ ಮಾರುಕಟ್ಟೆ ಒಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 9 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿವೆ. ಇವುಗಳಲ್ಲಿ ಎಲ್ಲ ಕಡೆಗಳಲ್ಲಿ ಹಲವು ಹುದ್ದೆಗಳು ಬಾಕಿ ಇವೆ. ನಿಗದಿತ ಸಮಯಕ್ಕೆ ಕೆಲಸ ಮಾಡಲು ಹಾಲಿ ಹುದ್ದೆಯಲ್ಲಿ ಇರುವವರು ಹರಸಾಹಸ ಪಡುತ್ತಿದ್ದಾರೆ. ಮಾರುಕಟ್ಟೆ ವ್ಯಾಪ್ತಿಯಲ್ಲಿ ಬಾಡಿಗೆ ವಸೂಲಿ, ಉಸ್ತುವಾರಿ ನೋಡಿಕೊಳ್ಳುವ ‘ಮಾರ್ಕೆಟಿಂಗ್‌ ಆಫೀಸರ್‌’ ಹುದ್ದೆಗಳು ಹೆಚ್ಚಾಗಿ ಖಾಲಿ ಉಳಿದಿವೆ. ಇದರ ಜತೆಗೆ ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಭರ್ತಿಯಾಗಬೇಕಿದೆ. ಸಾಕಷ್ಟು ವರ್ಷಗಳಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

ಜಿಲ್ಲೆಯಲ್ಲಿ ಹೆಚ್ಚಿನ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಮಾರುಕಟ್ಟೆಗಳಲ್ಲಿ ಉತ್ಪನ್ನಗಳ ಮಾರಾಟದ ಸಮಯದಲ್ಲಿ ಏನಾದರೂ ಸಮಸ್ಯೆಯಾದರೆ ಯಾರ ಬಳಿ ಹೇಳಿ ಕೊಳ್ಳಬೇಕು ಎಂಬುವುದು ತಿಳಿಯುವುದಿಲ್ಲ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದ ನಂತರ ಶೀಘ್ರವೇ ಮಾರಾಟಕ್ಕೆ ವ್ಯವಸ್ಥೆ ಮಾಡುವ ಕೆಲಸವಾಗುತ್ತಿಲ್ಲ. ಅಧಿಕಾರಿ, ಸಿಬ್ಬಂದಿ ಇಲ್ಲದೆ ಕೆಲವೊಮ್ಮೆ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಹುಳಿಯಾರು ಭಾಗದ ರೈತ ಶಂಕರಪ್ಪ ದೂರಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಂಜೂರಾದ 10 ಹುದ್ದೆಗಳ ಪೈಕಿ ಒಂದೇ ಒಂದು ಹುದ್ದೆ ಕೂಡ ಭರ್ತಿಯಾಗಿಲ್ಲ. ಪ್ರಭಾರ ಅಧಿಕಾರಿಗಳು, ಹೊರಗುತ್ತಿಗೆ ಸಿಬ್ಬಂದಿಯ ನೆರವಿನಿಂದಲೇ ಸಮಿತಿಯ ಕಾರ್ಯಗಳು ನಡೆಯುತ್ತಿದೆ. ಈ ಬಗ್ಗೆ ಗಮನ ಹರಿಸಿ, ಕ್ರಮಕೈಗೊಳ್ಳಬೇಕಿದ್ದ ಜನಪ್ರತಿನಿಧಿಗಳು ಇದಕ್ಕೂ ನಮಗೂ ಸಂಬಂಧವೇ ಎಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಎಪಿಎಂಸಿ ಕಚೇರಿಯಲ್ಲಿ ಯಾವೊಬ್ಬ ನೌಕರನೂ ಇಲ್ಲದೆ ಎಲ್ಲವೂ ಹೊರಗುತ್ತಿಗೆ ಆಧಾರದಲ್ಲಿ ನಡೆಯುತ್ತಿರುವುದನ್ನು ಗಮನಿಸಿದರೆ ಯಾವ ಸ್ಥಿತಿಯಲ್ಲಿ ಎಂಬುದನ್ನು ನೀವೇ ಊಹಿಸಿಕೊಳ್ಳಿ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ತುಮಕೂರು ಮಾರುಕಟ್ಟೆ ಸಮಿತಿಯಲ್ಲಿಯೇ 20 ಹುದ್ದೆಗಳು ಭರ್ತಿಗಾಗಿ ಕಾಯುತ್ತಿವೆ. ಎಪಿಎಂಸಿಗಳಲ್ಲಿ ಎಲ್ಲ ಕೆಲಸಗಳು ಸಕ್ರಿಯವಾಗಿ, ಶೀಘ್ರವಾಗಿ ಪೂರ್ಣಗೊಳಿಸಲು ಅಗತ್ಯವಾಗಿ ಬೇಕಾದ ಸಿಬ್ಬಂದಿ ಇಲ್ಲದೆ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಎಲ್ಲ ಮಾರುಕಟ್ಟೆಗಳಿಗೆ ಹೊರ ಗುತ್ತಿಗೆ ಸಿಬ್ಬಂದಿಯೇ ‘ಆಧಾರ’ ಸ್ತಂಭವಾಗಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯಿಂದ ಹೊರಗೆ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆನಂತರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅತ್ತ ಕಡೆಗೆ ಯಾರೂ ಗಮನವನ್ನೇ ಹರಿಸುತ್ತಿಲ್ಲ. ವಿಧಾನಸಭೆ ಚುನಾವಣೆ ಸಮಯದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಮತ್ತೆ ಮಾರುಕಟ್ಟೆಗಳಲ್ಲೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ರೂಪಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಅಧಿಕಾರಕ್ಕೆ ಬಂದ ನಂತರವೂ ಇದೇ ಮಾತುಗಳನ್ನು ಹೇಳುತ್ತಲೇ ಬಂದಿದ್ದು, ರೈತ ಸಂಘಟನೆಗಳು ಸಹ ಈ ಬಗ್ಗೆ ಒತ್ತಾಯಿಸುತ್ತಲೇ ಬಂದಿವೆ. ಈವರೆಗೂ ಕಾಯ್ದೆಗೆ ತಿದ್ದುಪಡಿ ತಂದಿಲ್ಲ.

ಒಂದು ಕಡೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಮತ್ತೊಂದು ಕಡೆ ಸಿಬ್ಬಂದಿ ಇಲ್ಲದೆ ಮಾರುಕಟ್ಟೆಗಳನ್ನು ಮುನ್ನಡೆಸುವುದೇ ಕಷ್ಟಕರವಾಗಿದೆ. ಹೆಸರಿಗಷ್ಟೇ ಎಪಿಎಂಸಿಗಳು ಇವೆ. ರೈತರಿಗೆ ಹೆಚ್ಚಿನ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಒಂದು ರೀತಿಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಜಿಲ್ಲೆಯ ಎಲ್ಲ ಮಾರುಕಟ್ಟೆ ಸಮಿತಿಗಳಲ್ಲಿ ಕಾಯಂ ಸಿಬ್ಬಂದಿಯ ಕೊರತೆ ಇದೆ. ಸರ್ಕಾರ ಹುದ್ದೆಗಳ ಮಂಜೂರಾತಿಗೆ ಕ್ರಮ ವಹಿಸಿದೆ. ಈಗ ಕರ್ತವ್ಯದಲ್ಲಿರುವ ಸಿಬ್ಬಂದಿ ಅಗತ್ಯ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
– ಬಿ.ರಾಜಣ್ಣ ಉಪನಿರ್ದೇಶಕ ಕೃಷಿ ಮಾರಾಟ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT