ತುಮಕೂರು: ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಅಂತರ ಕಾಲೇಜು ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿ.ವಿ ಕಲಾ ಕಾಲೇಜಿನ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ವಿವಿಧ ಕಾಲೇಜುಗಳ ಒಟ್ಟು 8 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಕಲಾ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳು ಮುಖಾಮುಖಿಯಾದವು. 21 ರನ್‍ಗಳ ಅಂತರದಿಂದ ಪ್ರಥಮ ದರ್ಜೆ ಕಾಲೇಜಿನ ತಂಡ ಸೋಲು ಕಂಡಿತು.
ಪಂದ್ಯಾವಳಿಯ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್ ಆಗಿ ಕಲಾ ಕಾಲೇಜಿನ ಗಣೇಶ್ ರಾಂಪುರ್, ಶ್ರೇಷ್ಠ ಬೌಲರ್ ಆಗಿ ಜೀವನ್ ಜೈನ್ ಹಾಗೂ ಆಲ್‍ರೌಂಡರ್ ಆಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್.ಮಹೇಶ ಪ್ರಶಸ್ತಿ ಪಡೆದರು.
ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಆರ್.ಸುದೀಪ್‌ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎನ್.ಮನೋಜ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.