ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಜೀತ ಪದ್ಧತಿ ಮುಂದುವರಿಸಿದ ಕೇಂದ್ರ ಸರ್ಕಾರ: ಆಕ್ರೋಶ

ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಸಮ್ಮೇಳನ
Published 31 ಆಗಸ್ಟ್ 2024, 7:05 IST
Last Updated 31 ಆಗಸ್ಟ್ 2024, 7:05 IST
ಅಕ್ಷರ ಗಾತ್ರ

ತುಮಕೂರು: ‘ದುಡಿಯುವ ವರ್ಗದವರು ಜಾತಿ, ವರ್ಗ, ಧರ್ಮ ಮೀರಿ ಒಂದಾಗಬೇಕು. ತಾತ್ವಿಕ ನೆಲೆಯಲ್ಲಿ ಸಂಘಟಿತರಾಗಿ ನಮ್ಮನ್ನು ಛಿದ್ರಗೊಳಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಟ ರೂಪಿಸಬೇಕು’ ಎಂದು ಚಿಂತಕ ಕೆ.ದೊರೈರಾಜ್‌ ಸಲಹೆ ಮಾಡಿದರು.

ನಗರದಲ್ಲಿ ಶುಕ್ರವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ವತಿಯಿಂದ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಎಲ್ಲರಲ್ಲಿ ರಾಜಕೀಯ ಪ್ರಜ್ಞೆ ಇರಬೇಕು. ನಮ್ಮನ್ನು ಛಿದ್ರೀಕರಣ ಮಾಡುವ, ಕಾರ್ಮಿಕರ ವಿರುದ್ಧದ ಕಾನೂನು ಜಾರಿ ಮಾಡುವ ಬಂಡವಾಳ ಶಾಹಿ ವ್ಯಕ್ತಿ, ಪಕ್ಷ ಆಯ್ಕೆ ಮಾಡಬಾರದು. ಕಾನೂನು, ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು, ಬೌದ್ಧಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಮಾನತೆಯ ಸಮಾಜ ಕಟ್ಟಲು, ಜಾತಿ ಮೀರಿದ ತಾತ್ವಿಕ ಸಂಘಟನೆ ಕಟ್ಟಬೇಕು. ದುಡಿಯುವವರು ಎಲ್ಲರು ಸೇರಿ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಕೆಲಸದ ಅವಧಿಯನ್ನು 14 ಗಂಟೆಗೆ ಹೆಚ್ಚಿಸಿದೆ. ಹಲವಾರು ಕಾರ್ಮಿಕ, ಜೀವ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಜೀತಗಾರಿಕೆ ಪದ್ಧತಿ ಮುಂದುವರಿಸುತ್ತಿದೆ. ದುಡಿಯುವ ವರ್ಗದ ಮೇಲೆ ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಸೇವೆಗೆ ತಕ್ಕ ವೇತನ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರು ಸಮಾಜಕ್ಕೆ ತಾಯಿಯಂತೆ ಸೇವೆ ಒದಗಿಸುತ್ತಿದ್ದಾರೆ. ಅವರ ಕೆಲಸಕ್ಕೆ ಬೆಲೆ ಕಟ್ಟಲು ಆಗಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹಗಲು–ರಾತ್ರಿ ಎನ್ನದೆ ಕೆಲಸ ಮಾಡುತ್ತಾರೆ. ಅವರಿಗೆ ಕನಿಷ್ಠ ವೇತನ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಊಟ, ತಿಂಡಿಗೆ ಆಗುವಷ್ಟು ವೇತನ ಸಿಗುತ್ತಿಲ್ಲ ಎಂದು ಅಸಮಾಧಾನದ ಮಾತುಗಳನ್ನಾಡಿದರು.

ಕೋವಿಡ್‌ ಸಮಯದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡಿದರು. ಗ್ರಾಮಾಂತರ ಮಟ್ಟದಲ್ಲಿ ಜನರ ರಕ್ಷಣೆಗೆ ಮುಂದಾದರು. ಸರ್ಕಾರ ಕನಿಷ್ಠ ರಕ್ಷಣಾತ್ಮಕ ಕ್ರಮ ಕೈಗೊಳ್ಳಲಿಲ್ಲ. ಕೋವಿಡ್ ಸಮಯದಲ್ಲಿ ಮೃತಪಟ್ಟವರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಸರ್ಕಾರಕ್ಕೆ ಕನಿಷ್ಠ ಮಾನವೀಯತೆ ಇದೆಯೇ? ಎಂದು ಪ್ರಶ್ನಿಸಿದರು.

ಎಐಎಂಎಸ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ, ‘ರಾಷ್ಟ್ರದಲ್ಲಿ ಮಹಿಳೆಯರು, ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಅಪರಾಧ ಬ್ಯೂರೋದ ಅಂಕಿ–ಅಂಶದ ಪ್ರಕಾರ ಪ್ರತಿ 11 ನಿಮಿಷಕ್ಕೆ ಒಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದೆ. ಇದು ಆತಂಕಕಾರಿ ವಿಚಾರ. ಸರ್ಕಾರ ತನ್ನ ಲಾಭಕ್ಕಾಗಿ ಸುಲಭವಾಗಿ ಅಶ್ಲೀಲತೆಯನ್ನು ಹರಿಬಿಡುತ್ತಿದೆ. ಇದನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.

ಎಐಯುಟಿಯುಸಿಯ ಮಂಜುಳಾ ಗೋನವಾರ ಇತರರು ಹಾಜರಿದ್ದರು.

₹18 ಸಾವಿರ ಸಂಬಳ ಕೊಡಿ
‘ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ₹18 ಸಾವಿರ ಸಂಬಳ ನಿಗದಿ ಪಡಿಸಬೇಕು. ಸಾಮಾಜಿಕ ಭದ್ರತೆ ಒದಗಿಸಬೇಕು’ ಎಂದು ಎಐಯುಟಿಯುಸಿ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಒತ್ತಾಯಿಸಿದರು. ಕಳೆದ ಹದಿನೈದು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಶೋಷಣೆ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಎಲ್ಲರು ಸಂಘಟಿತರಾಗಬೇಕು. ಜನರ ಆರೋಗ್ಯದ ಕುರಿತು ಅರಿವು ಮೂಡಿಸುವವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದು ಬಹಳ ನೋವಿನ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಮುಖ ಹಕ್ಕೊತ್ತಾಯಗಳು...

* ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು

* ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು

* ಸಾರ್ವಜನಿಕರ ಆರೋಗ್ಯ ಬಲಪಡಿಸಲು ಅಗತ್ಯ ಇರುವ ಬಜೆಟ್‌ ಒದಗಿಸಬೇಕು

* ಆಶಾ ಕಾರ್ಯಕರ್ತೆಯರಿಂದ ಹೆಚ್ಚುವರಿ ಕೆಲಸ ಮಾಡಿಸಬಾರದು

* ನಿವೃತ್ತರಾದವರಿಗೆ ಇಡಿಗಂಟು ನೀಡಬೇಕು

* ಹೊಸದಾಗಿ ಮೊಬೈಲ್‌, ಡಾಟಾ ಒದಗಿಸಬೇಕು

* ಮಾಸಿಕ ವೇತನ, ಪ್ರಯಾಣ ಭತ್ಯೆ ಹೆಚ್ಚಿಸಬೇಕು

* ಆಶಾ ಸುಗಮಕಾರರನ್ನು ನೇಮಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT