ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ನೀರಿನ ಬರ ಕಾಡದಿರಲಿ: ಲತಾ ರವಿಕುಮಾರ್‌

ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು, ಸಿಇಒ ಸೂಚನೆ
Last Updated 12 ಫೆಬ್ರುವರಿ 2020, 9:38 IST
ಅಕ್ಷರ ಗಾತ್ರ

ತುಮಕೂರು: ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ‘ಮಾಸಿಕ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಕುಡಿಯುವ ನೀರು ಪೂರೈಕೆಯ ವಿಚಾರವೇ ಪ್ರಮುಖವಾಗಿ ಪ್ರಸ್ತಾಪವಾಯಿತು.

ಸಭೆ ಆರಂಭದಲ್ಲಿಯೇ ಬೇಸಿಗೆಯ ಧಗೆ ಈಗಾಗಲೇ ಬಹುತೇಕ ಶುರುವಾಗಿದೆ. ಕುಡಿಯುವ ನೀರಿನ ಸರಬರಾಜಿನ ವಿಚಾರದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜೆ.ಸಿ.ನವ್ಯಾ ಬಾಬು, ಅಕ್ಕಮಹಾದೇವಿ ಸೂಚಿಸಿದರು. ಆಗ ಸದಸ್ಯರು ಸಹ ಈ ಬಗ್ಗೆ ಧ್ವನಿ ಎತ್ತಿದರು.

ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸಿ, ಅಗತ್ಯ ಇರುವಲ್ಲಿ ಕೊಳವೆ ಬಾವಿ ಕೊರೆಸಿ. ಕುಡಿಯುವ ನೀರಿಗಾಗಿ ಬಂದಿರುವ ಅನುದಾನ ವಾಪಸ್ ಹೋಗದಂತೆ ಕ್ರಮ ವಹಿಸಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಾಶ್‌ ಮಾತನಾಡಿ, ಜಿಲ್ಲೆಯಲ್ಲಿನ 1,520 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 205 ದುರಸ್ತಿಯಲ್ಲಿವೆ. ಸರಿಪಡಿಸಿ, ಅವುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸುವ ಕಾರ್ಯ ಜಾರಿಯಲ್ಲಿದೆ ಎಂದು ತಿಳಿಸಿದರು.

ಈ ಉತ್ತರಕ್ಕೆ ಸಮಾಧಾನಗೊಳ್ಳದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಶುಭಾ ಕಲ್ಯಾಣ್‌, ದುರಸ್ತಿಯೆಂದರೆ ಏನಾಗಿದೆ. ಅದರಲ್ಲಿನ ಯಾವ ಭಾಗಗಳು ಕೆಟ್ಟಿವೆ ಎಂದು ವಿವರವಾದ ವರದಿಯನ್ನು ಪಂಚಾಯಿತಿಗೆ ನೀವು ಈಗಾಗಲೇ ಕೊಡಬೇಕಿತ್ತು. ಅದಕ್ಕೆ ಬೇಕಾದ ವೆಚ್ಚವನ್ನು ಭರಿಸಲು ಕಾರ್ಯಯೋಜನೆ ರೂಪಿಸಬೇಕಿತ್ತು. ಬೇಸಿಗೆ ಆರಂಭ ಆಗುವ ಹೊತ್ತಿಗೆ ನೀರಿನ ವ್ಯವಸ್ಥೆ ಮಾಡಬಹುದಿತ್ತು. ಹಣಕಾಸು ವರ್ಷದ ಅಂತಿಮ ದಿನ ಹತ್ತಿರ ಆಗುತ್ತಿದೆ. ಸಮರ್ಪಕವಾಗಿ ಅನುದಾನ ಬಳಸದಿದ್ದರೆ, ಅದು ವಾಪಸ್ ಹೋಗುವುದಿಲ್ಲವೆ ಎಂದು ಬೇಸರಿಸಿದರು.

ಎಂಜಿನಿಯರ್‌ ವಿಭಾಗದಿಂದ ಸಮರ್ಪಕವಾದ ಉತ್ತರ ಬರದಿದ್ದಾಗ, ‘ಜಿಲ್ಲಾ ಮಟ್ಟದ ಅಧಿಕಾರಿ ಮಾತನಾಡುವ ರೀತಿ ಏನ್ರಿ ಇದು. ಸಭೆಗೆ ಬರುವ ಮುನ್ನ ಪ್ರತಿ ತಾಲ್ಲೂಕುಗಳಲ್ಲಿನ ನೀರು ಪೂರೈಕೆ ವ್ಯವಸ್ಥೆ ಬಗ್ಗೆ ತಿಳಿದುಕೊಂಡು ಬರಬೇಕಿತ್ತು ಎಂಬುದು ಗೊತ್ತಿಲ್ವ. ನೀವು ಈ ರೀತಿ ನಿಧಾನ ಗತಿಯಲ್ಲಿ ಕೆಲಸ ಮಾಡಿದರೆ ಆಗುವುದಿಲ್ಲ. ಜನ ಸಮಸ್ಯೆಗಳ ಬಗ್ಗೆ ನಮಗೆ ಕೇಳುತ್ತಾರೆ. ನಾವು ಏನೆಂದು ಉತ್ತರಿಸಬೇಕು ಎಂದು ಗದರಿಸಿದರು.

ತುಮಕೂರು ತಾಲ್ಲೂಕಿನ ಬನ್ನಿಕುಪ್ಪೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ ಸೆರೆಗೆ ಚರ್ಚೆ ನಡೆಯಿತು.

ಗ್ರಾಮ ಪಂಚಾಯಿತಿ ಸಹಕಾರದಿಂದ ಊರ ಸುತ್ತಲಿನ ಪೊದೆಗಳನ್ನು ತೆರವು ಮಾಡಿಸಿ. ಅದರಿಂದ ಒಂದಿಷ್ಟಾದರೂ ಚಿರತೆ ಭಯ ಕಡಿಮೆ ಆಗಬಹುದು ಎಂದು ಸಿಇಒ ತಿಳಿಸಿದರು. ಇದಕ್ಕೆ ಜನಪ್ರತಿನಿಧಿಗಳೂ ದನಿಗೂಡಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್‌, ಅಂಗನವಾಡಿಗಳ ನಿರ್ಮಾಣ ಕಾಮಗಾರಿಯ ಪ್ರಗತಿ ಹಾಗೂ ಮಕ್ಕಳಿಗೆ, ಗರ್ಭಿಣಿಯರಿಗೆ ವಿತರಣೆ ಮಾಡುತ್ತಿರುವ ಪೌಷ್ಠಿಕ ಆಹಾರದ ಕುರಿತು ಮಾಹಿತಿ ನೀಡಿದರು.

ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ವೆಂಗಳಮ್ಮನಹಳ್ಳಿಯ ಕೋಳಿಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ 80 ಕುಟುಂಬಗಳಲ್ಲಿನ 11 ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಈ ಕುಟುಂಬಗಳು ನೇಪಾಳ, ಜಾರ್ಖಂಡ್‌, ಒಡಿಶಾ, ಪಶ್ಚಿಮ ಬಂಗಾಳದಿಂದ ವಲಸೆ ಬಂದಿವೆ. ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ, ಭಾಷಾ ಸಮಸ್ಯೆ ಎದುರಾಗುತ್ತದೆ. ಆದರೂ ಇಬ್ಬರೂ ಮಕ್ಕಳನ್ನು ವಯಸ್ಸಿಗೆ ಅನುಗುಣವಾಗಿ ಪ್ರಾಥಮಿಕ ಶಾಲೆಗೆ ಸೇರಿಸಲಾಗಿದೆ. ಉಳಿದ ಮಕ್ಕಳ ಸ್ಥಿತಿ ಸುಧಾರಣೆಗೆ ಕಾರ್ಮಿಕ ಇಲಾಖೆ ಗಮನ ಸೆಳೆಯುವೆ ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ರೇವಣಸಿದ್ದಪ್ಪ ಮಾಹಿತಿ ನೀಡಿದರು.

ಹೇಮಾವತಿ ನಾಲಾ ವಲಯ ಕಚೇರಿಯ ಎಂಜಿನಿಯರ್‌, ಜಿಲ್ಲೆಯ 277 ಕೆರೆಗಳಿಗೆ ನಾಲೆ ನೀರು ಹರಿಸಬೇಕಿತ್ತು. 22 ಕೆರೆಗಳನ್ನು ಹೊರತು ಪಡಿಸಿ ಉಳಿದ ಕೆರೆಯಂಗಳಕ್ಕೆ ನೀರು ತಲುಪಿದೆ ಎಂದು ಮಾಹಿತಿ ನೀಡಿದರು.

ನಾಲೆಯ ಎಡಭಾಗದ ಕೆರೆಗಳು ಎತ್ತರದ ಪ್ರದೇಶಗಳಲ್ಲಿ ಇವೆ. ಕೆಲವು ಕೆರೆಗಳು ನಗರದಲ್ಲಿವೆ. ಇನ್ನೂ ಕೆಲವು ನಾಲೆಯಿಂದ ಸುಮಾರು 24 ಕಿ.ಮೀ.ದೂರವಿವೆ. ಹಾಗಾಗಿ 22 ಕೆರೆಗಳಿಗೆ ನೀರು ಮುಟ್ಟಿಲ್ಲ ಎಂದು ವಿವರಿಸಿದರು.

ಆರೋಗ್ಯ ಇಲಾಖೆಯ ವಿಷಯ ಪ್ರಸ್ತಾಪವಾದಾಗ, ಕೊರೊನಾ ವೈರಸ್‌ ಅಂದರೆ ಏನು, ಅದು ಜಿಲ್ಲೆಯಲ್ಲಿ ಪತ್ತೆಯಾಗಿದೆಯಾ, ಅದನ್ನು ತಗುಲಿದರೆ ನಿಭಾಯಿಸುವ ಔಷಧಿಗಳು ಜಿಲ್ಲಾ ಮಟ್ಟದಲ್ಲಿ ಇವೆಯೇ ಎಂಬುದರೆ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಂದ್ರಿಕಾ ಅವರಿಂದ ಜನಪ್ರತಿನಿಧಿಗಳು ಮಾಹಿತಿ ಪಡೆದರು.

ಸಭೆಯಲ್ಲಿದ್ದ ಜಿ.ಪಂ.ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಇದ್ದರು.

*

ಕುರಿ ಸಾವು; ತನಿಖೆ
ಗುಬ್ಬಿ ತಾಲ್ಲೂಕಿನ ಕಕ್ಕೇರಿಯಲ್ಲಿ ರಸ್ತೆ ಬದಿ ಸುರಿದಿದ್ದ ಅವಧಿ ಮುಗಿದ ಆಹಾರಗಳನ್ನು ತಿಂದ 140 ಕುರಿಗಳಲ್ಲಿ 34 ಮೃತಪಟ್ಟಿವೆ. ಇದರಲ್ಲಿ ಒಂದು ಮೇಕೆಯೂ ಇದೆ. ಉಳಿದ ಕುರಿಗಳ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಲ್‌.ಪ್ರಕಾಶ್‌ ತಿಳಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಜಾರಿಯಲ್ಲಿದೆ. ಆಹಾರ ಪೊಟ್ಟಣದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

*

ಅಸಲಿ ಪತ್ರಕರ್ತರು ಎಷ್ಟಿದ್ದಾರೆ?
ಜಿಲ್ಲೆಯಲ್ಲಿ ಅಸಲಿ ಪತ್ರಕರ್ತರು ಎಷ್ಟಿದ್ದಾರೆ ಎಂಬ ಪ್ರಶ್ನೆಯನ್ನು ಜಿ.ಪಂ.ಅಧ್ಯಕ್ಷೆ ಕೇಳಿದಾಗ, ಸಭೆಯಲ್ಲಿ ಇದ್ದವರಲ್ಲಿ ಬಹುತೇಕರು ಮಾಧ್ಯಮ ಗ್ಯಾಲರಿಯತ್ತ ಕಣ್ಣು ಹಾಯಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಮಂಜುನಾಥ್‌, ನಾವು ಅಸಲಿ ನಕಲಿ ಎಂತ ಪಟ್ಟಿ ಮಾಡುವುದಿಲ್ಲ. ಇಲಾಖೆ ಮಟ್ಟದಲ್ಲಿ ನೋಂದಾಯಿತ ಮಾಧ್ಯಮ ಸಂಸ್ಥೆಯಲ್ಲಿ ಕನಿಷ್ಠ 4 ವರ್ಷ ಕೆಲಸ ಮಾಡಿದ ಪತ್ರಕರ್ತರಿಗೆ ಮಾನ್ಯತೆ (ಅಕ್ರಿಡೇಷನ್‌) ಚೀಟಿ ಕೊಡುತ್ತೇವೆ. ಪತ್ರಕರ್ತರ ಸೋಗಿನಲ್ಲಿ ಯಾರಾದರೂ ತೊಂದರೆ ಕೊಟ್ಟರೆ, ತೊಂದರೆಗೆ ಒಳಗಾದವರು ಪೊಲೀಸರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬಹುದು ಎಂದರು.

*

ಹಣಕಾಸು ವರ್ಷ ಮುಗಿಯುತ್ತಿದೆ. ಯಾವುದೇ ಅನುದಾನ ವಾಪಸ್ಸು ಹೋಗದಂತೆ ಎಲ್ಲರೂ ಕಾರ್ಯನಿರ್ವಹಿಸಿ.
-ಲತಾ ರವಿಕುಮಾರ್‌, ಅಧ್ಯಕ್ಷ, ಜಿ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT