ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಒಪ್ಪಂದದಿಂದ ಸೋಲು: ಮಾಧುಸ್ವಾಮಿ

ಬಿಜೆಪಿ ಕಾರ್ಯಕಾರಿಣಿಯಲ್ಲಿ ಸ್ವಪಕ್ಷೀಯ ನಾಯಕರ ವಿರುದ್ಧ ವಾಗ್ದಾಳಿ
Published 6 ಫೆಬ್ರುವರಿ 2024, 6:15 IST
Last Updated 6 ಫೆಬ್ರುವರಿ 2024, 6:15 IST
ಅಕ್ಷರ ಗಾತ್ರ

ತುಮಕೂರು: ‘ಒಳ ಒಪ್ಪಂದ ಮಾಡಿಕೊಳ್ಳುವುದರಿಂದ ಸೋಲುತ್ತಿದ್ದೇವೆ. ಇಂತಹ ಒಪ್ಪಂದ ಮಾಡಿಕೊಂಡು ರಾಜಕಾರಣ ಏಕೆ ಮಾಡಬೇಕು’ ಎಂದು ಬಿಜೆಪಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪಕ್ಕವೆಂದರೆ ತಾಯಿ ಇದ್ದಂತೆ. ಇಷ್ಟವಿಲ್ಲದಿದ್ದರೆ ಪಕ್ಷ ಬಿಟ್ಟು ಹೋಗಬಹುದು. ಅದು ಬಿಟ್ಟು ಒಳ ಒಪ್ಪಂದ ಮಾಡಿಕೊಂಡು ಏಕಿರಬೇಕು. ಅಂತಹ ರಾಜಕಾರಣ ಏಕೆ ಮಾಡಬೇಕು? ಒಂದು ಕ್ಷೇತ್ರದಲ್ಲಿ ಮತ ಬರದಿದ್ದರೆ ಗೆಲುವು ಕಷ್ಟಕರ. ಯಾರದ್ದೋ ಶಕ್ತಿ ನಂಬಿಕೊಂಡು ಗೆಲ್ಲುತ್ತೇವೆ ಎಂದರೆ ಆಗುವುದಿಲ್ಲ’ ಎಂದು ಜಿಲ್ಲೆಯ ಕೆಲವು ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಲೋಕಸಭೆ ಚುನಾವಣೆಯಲ್ಲಿ ಮಾಧುಸ್ವಾಮಿ ಸ್ಪರ್ಧಿಸಿದರೆ ಗೆಲ್ಲುವುದು ಕಷ್ಟಕರ’ ಎಂದು ಸಂಸದ ಜಿ.ಎಸ್.ಬಸವರಾಜು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈಗ ಮಾಧುಸ್ವಾಮಿ ಒಳ ಒಪ್ಪಂದದ ಬಗ್ಗೆ ಆಡಿರುವ ಮಾತುಗಳು ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಇತಿಹಾಸ ನಿರ್ಮಾಣ ಮಾಡುವವರು ಹೀರೋಗಳಲ್ಲ. ಪಿತೂರಿ ಮಾಡುವವರು ಹೀರೋಗಳಾಗಿದ್ದಾರೆ. ಕೊಂಡಿ ಮಂಚಣ್ಣನಂತಹವರನ್ನು ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುತ್ತಾರೆ’ ಎಂದು ಮಾಧುಸ್ವಾಮಿ ಕುಟುಕಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಪರವಾದ ವಾತಾವರಣ, ಬೆಂಬಲ ಹಾಗೂ ಮತದಾರರು ಇದ್ದರೂ ಗೆಲುವು ಸಾಧ್ಯವಾಗಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಈಗ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಹೆಚ್ಚಿನ ಉತ್ಸಾಹ ಬಂದಿದೆ. ಆದರೆ ನಮ್ಮ ಶಕ್ತಿ ಮೇಲೆ ಚುನಾವಣೆ ಎದುರಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.

ಡೇರಿಗಳಿಗೆ ಹಾಲು ಹಾಕಿದ ರೈತರಿಗೆ ಜೂನ್‌ನಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಆದರೆ ಗ್ಯಾರಂಟಿ ನೀಡಿದ್ದೇವೆ ಎಂದು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಬೇಕು ಎಂದರು.

ತುಮಕೂರು ಲೋಕಸಭಾ ಕ್ಷೇತ್ರದ ಉಸ್ತುವಾರಿ ಕೆ.ಗೋಪಾಲಯ್ಯ, ‘ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು’ ಎಂದು ಸಲಹೆ ಮಾಡಿದರು.

ಬಿಜೆಪಿ ಜಿಲ್ಲಾ ಕಾರ್ಯಕಾರಣಿಯಲ್ಲಿ ಭಾಗವಹಿಸಿದ್ದ ಪ್ರಮುಖರು
ಬಿಜೆಪಿ ಜಿಲ್ಲಾ ಕಾರ್ಯಕಾರಣಿಯಲ್ಲಿ ಭಾಗವಹಿಸಿದ್ದ ಪ್ರಮುಖರು

ಮಾಜಿ ಸಚಿವ ಬಿ.ಸಿ.ನಾಗೇಶ್, ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನಸಾಮಾನ್ಯರ ಮನೆ ಮನೆಗೂ ಕೊಂಡೊಯ್ದು, ಅವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಬೂತ್ ಮಟ್ಟದ ತಂಡಗಳನ್ನು ಬಲಪಡಿಸಬೇಕು. ಕಾರ್ಯಕರ್ತರು ಮನೆಗಳಿಗೆ ತೆರಳಿ ಪ್ರಚಾರ ಮಾಡಬೇಕು’ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ಡಿ.ಕೃಷ್ಣಕುಮಾರ್, ವೈ.ಎಚ್.ಹುಚ್ಚಯ್ಯ, ಎಂ.ಬಿ.ನಂದೀಶ್, ದಿಲೀಪ್‍ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT