ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್‌: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

ಗುರುವಾರ , ಜೂಲೈ 18, 2019
22 °C

ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್‌: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

Published:
Updated:

ಕೋರಾ (ತುಮಕೂರು ಜಿಲ್ಲೆ):​ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾದುಹೋಗುವ ಮಾರ್ಗದ ಅಂಗಡಿಯೊಂದರ ಮುಂದೆ ಹಾಕಲಾಗಿದ್ದ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ನೀಡಿರುವ ನೋಟಿಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕೆಸ್ತೂರು ಗ್ರಾಮದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಮುಂಭಾಗ ಹಾಕಲಾಗಿದ್ದ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಬಿಜೆಪಿ ಕಾರ್ಯಕರ್ತನಿಗೆ ಕೆಸ್ತೂರು ಪಂಚಾಯಿತಿ ಪಿಡಿಒ ಶನಿವಾರ ನೋಟಿಸ್‌ ಜಾರಿ ಮಾಡಿದ್ದರು.

ಕೊರಟಗೆರೆ ತಾಲೂಕಿನಲ್ಲಿ ತೋವಿನಕೆರೆಯಲ್ಲಿ ‘ಜನಸಂಪರ್ಕ’ ಸಭೆಯಲ್ಲಿ ಭಾಗವಹಿಸಲು ಪರಮೇಶ್ವರ ಕೆಸ್ತೂರು ಮಾರ್ಗವಾಗಿ ತೆರಳುವವರಿದ್ದರು. ಮಾರ್ಗಮಧ್ಯೆ ಕೆಸ್ತೂರು ಗ್ರಾಮದ ಪ್ರಧಾನಮಂತ್ರಿ ಜನರಿಕ್ ಔಷಧ ಮಳಿಗೆ ಮುಂದೆ ಅಂಗಡಿ ಮಾಲೀಕ, ಬಿಜೆಪಿ ಕಾರ್ಯಕರ್ತ ರವಿನಾಯಕ ಬಿಜೆಪಿ ಬಾವುಟ ಹಾಕಿದ್ದರು. ಈ ಮಾರ್ಗದಲ್ಲಿ ಡಿಸಿಎಂ ತೆರಳಲಿದ್ದು, ಬಾವುಟ ತೆರವುಗೊಳಿಸುವಂತೆ ಪಿಡಿಒ ಶನಿವಾರ ಬೆಳಿಗ್ಗೆ ‘ತಿಳಿವಳಿಕೆ ನೋಟಿಸ್’ ನೀಡಿ, ತೆರವುಗೊಳಿಸದಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಅಂಗಡಿ ಮಾಲೀಕ ರವಿ ನಾಯಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಲೋಕಸಭಾ ಚುನಾವಣಾ ಫಲಿತಾಂಶದ ದಿನದಂದು ಕಾರ್ಯಕರ್ತರ ಸಂಭ್ರಮಾಚರಣೆ ಬಳಿಕ ಬಿಜೆಪಿ ಬಾವುಟವನ್ನು ಅಂಗಡಿಯ ಬೋರ್ಡ್‌ಗೆ ಕಟ್ಟಲಾಗಿತ್ತು. ಇಲ್ಲಿಯವರೆಗೂ ಪಂಚಾಯಿತಿಯವರು ಚಕಾರ ಎತ್ತಿರಲಿಲ್ಲ. ಶನಿವಾರ ಮಧ್ಯಾಹ್ನ ಕೆಸ್ತೂರು ಗ್ರಾಮ ಪಂಚಾಯಿತಿ ವಾಟರ್‌ಮನ್ ಬಂದು ಬಿಜೆಪಿ ಬಾವುಟ ತೆರವುಗೊಳಿಸುವಂತೆ ಸೂಚಿಸಿದರು’ ಎಂದು ಹೇಳಿದರು.

‘ಬಳಿಕ ಪಿಡಿಒ ದೂರವಾಣಿ ಕರೆಮಾಡಿ, ‘ಪರಮೇಶ್ವರ ಈ ದಾರಿಯಲ್ಲಿ ಹೋಗುವವರೆಗೂ ಬಾವುಟ ತೆಗೆದು ನಂತರ ಹಾಕಿಕೊಳ್ಳಿ’ ಎಂದು ಸೂಚಿಸಿದ್ದರು. ಅದಕ್ಕೆ ಕಾರ್ಯಕರ್ತರ ಸಲಹೆ ಪಡೆದು ತಗೆಯುತ್ತೇನೆ’ ಎಂದು ರವಿ ತಿಳಿಸಿದ್ದರು.

ಪರಮೇಶ್ವರ್ ಈ ಮಾರ್ಗದಲ್ಲಿ ಹಾದು ಹೋಗುವಾಗಲೂ ಬಿಜೆಪಿ ಬಾವುಟ ತೆಗೆದಿರಲಿಲ್ಲ. ಬಳಿಕ‌ ಕಾರ್ಯ ನಿಮಿತ್ತ ರವಿ ಪಂಚಾಯಿಗೆ ಹೋಗಿದ್ದಾಗ ಪಿಡಿಒ ನೋಟಿಸ್ ನೀಡಿದ್ದಾರೆ.

‘ಬಿಜೆಪಿ ಬಾವುಟ ಹಾಕಿದರೆ ನೋಟಿಸ್ ನೀಡುತ್ತಾರೆ ಎಂದರೆ ಕೊರಟಗೆರೆ ಕ್ಷೇತ್ರದಲ್ಲಿ ಎಂತಹ ಆಡಳಿತ ಜಾರಿಯಲ್ಲಿದೆ ಎನ್ನುವುದನ್ನು ಬಾಯಿಬಿಟ್ಟು ಹೇಳಬೇಕಿಲ್ಲ’ ಎಂದು ರವಿನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕೆಸ್ತೂರು ಗ್ರಾಮ ಪಂಚಾಯಿತಿ ಪಿಡಿಒ ವನಜಾಕ್ಷಿ ಮಾತನಾಡಿ, ‘ಬಿಜೆಪಿ ಬಾವುಟವನ್ನು ಯಾವುದೇ ಅನುಮತಿ ಪಡೆಯದೆ ಸಾರ್ಜನಿಕ ಸ್ಥಳದಲ್ಲಿ ಹಾಕಿದ್ದಾರೆ. ಆ ಕಾರಣದಿಂದ ರವಿ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 8

  Angry

Comments:

0 comments

Write the first review for this !