ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರೇ ನನ್ನ ಸೋಲಿಸಿದರು: ಮಾಜಿ ಶಾಸಕ ಬಿ. ಸುರೇಶ್‌ಗೌಡ

ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಿರುದ್ಧ ಗುಡುಗಿದ ಮಾಜಿ ಶಾಸಕ
Last Updated 11 ಅಕ್ಟೋಬರ್ 2021, 1:36 IST
ಅಕ್ಷರ ಗಾತ್ರ

ತುಮಕೂರು: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮದೇ ಪಕ್ಷದ ಕೆಲವರು ಸೇರಿಕೊಂಡು ಒಳಸಂಚು ನಡೆಸಿ ನನ್ನನ್ನು ಸೋಲಿಸಿದರು’ ಎಂದು ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಆರೋಪಿಸಿದರು.

ತಾಲ್ಲೂಕಿನ ಗೂಳೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಭಿವೃದ್ಧಿ ಕೆಲಸಗಳನ್ನು ಮರೆತು ಜನರಿಗೆ ಮದ್ಯ ಕುಡಿಸಿ, ತಿನ್ನಿಸುವುದು, ಒಂದಿಷ್ಟು ಹಣಕೊಟ್ಟು ಬಡವರ ಸೇವೆ ಮಾಡುತ್ತಿದ್ದೇನೆ ಎಂದು ಫೋಸು ಕೊಟ್ಟುಕೊಂಡು ಬಂದಿದ್ದರೆ ಸೋಲುತ್ತಿರಲಿಲ್ಲ. ನಮ್ಮವರೂ ಸೇರಿಕೊಂಡು ಸೋಲಿಸಿದ್ದು ನೋವು ತರಿಸಿತು’ ಎಂದರು.

‘ಅಭಿವೃದ್ಧಿ ರಾಜಕಾರಣಿ ಆಗಬೇಕು ಎಂದುಕೊಂಡವನೇ ಹೊರತು. ಜನರನ್ನು ಪ್ರೇರೇಪಿಸಿ, ಕುಡಿಸಿ, ಜೂಜಾಡಿಸಿ, ಸುಳ್ಳು ಭರವಸೆಗಳನ್ನು ನೀಡಿ, ಅವರನ್ನು ಪ್ರಚೋದಿಸಿ ಮತ ಪಡೆದು ರಾಜಕಾರಣಿಯಾಗಿ ಅಧಿಕಾರ ನಡೆಸಬೇಕು ಎಂಬ ಯೋಚನೆಯನ್ನೂ ಮಾಡಿಲ್ಲ. ಜನರನ್ನು ಪೀಡಿಸುತ್ತಿದ್ದ ಗುತ್ತಿಗೆದಾರರು, ಅಧಿಕಾರಿಗಳು, ವೈದ್ಯರು, ಸರ್ಕಾರಿ ಶಾಲೆಯ ಶಿಕ್ಷಕರು, ಕೆಲವು ಗ್ರಾಮಗಳ ಮುಖಂಡರ ಜತೆಗೆ ಕಠಿಣವಾಗಿ ನಡೆದುಕೊಂಡೆ. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಇವರೆಲ್ಲ ಅಪಪ್ರಚಾರ ಮಾಡಿದರು’ ಎಂದು ನೆನಪಿಸಿಕೊಂಡರು.

ಹೇಮಾವತಿ ನೀರು ಹಂಚಿಕೆಯಲ್ಲಿ ಗ್ರಾಮಾಂತರ ಕ್ಷೇತ್ರಕ್ಕೆ ಅನ್ಯಾಯ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ನೇರವಾಗಿ ಹೇಳುತ್ತಿದ್ದೇನೆ. ಕ್ಷೇತ್ರಕ್ಕೆ ಅನ್ಯಾಯ ಮಾಡಬೇಡಿ. ನೀರು ಬಿಡಿ ಎಂದು ಕೇಳುತ್ತಿದ್ದೇನೆ. ಅನ್ಯಾಯವಾದರೆ ಸಹಿಸುವುದಿಲ್ಲ, ನನಗೆ ಯಾವ ಪದವಿಯೂ ಬೇಕಿಲ್ಲ. ನನ್ನ ಜನರೇ ನನಗೆ ಮುಖ್ಯ ಎಂಬುದನ್ನು ಈಗಾಗಲೇ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತೋರಿಸಿದ್ದೇನೆ. ನೀರಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ’ ಎಂದು ಸಚಿವರ ವಿರುದ್ಧ ಗುಡುಗಿದರು.

ಗೌಡರ ಮೇಲೆ ಸಿಟ್ಟು: ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮಾಂತರ ಕ್ಷೇತ್ರಕ್ಕೆ ನಾನು ಕೇಳಿದಷ್ಟು ಹೇಮಾವತಿ ನೀರು ಹಂಚಿಕೆ ಮಾಡಿದ್ದರೆ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ. ಕ್ಷೇತ್ರದ ನೀರಾವರಿ ಕೆಲಸಕ್ಕೆ ಅಡ್ಡಗಾಲು ಹಾಕಿದರು. ಯಾರದೋ ಮಾತು ಕೇಳಿ ನೀರು ಹಂಚಿಕೆಗೆ ತಡೆ ಮಾಡಿದರು’ ಎಂದು ಆರೋಪಿಸಿದರು.

ಸುರೇಶ್‌ಗೌಡ ಅವರಿಗೆ ಅಭಿಮಾನಿಗಳು ಬೆಳ್ಳಿ ಗದೆ ನೀಡಿ ಗೌರವಿಸಿದರು. ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಕಾರದ ವೀರಬಸವ ಸ್ವಾಮೀಜಿ, ಜ್ಞಾನಾನಂದಪುರಿ ಸ್ವಾಮೀಜಿ, ಶಾಸಕರಾದ ಜ್ಯೋತಿಗಣೇಶ್, ಮಸಾಲೆ ಜಯರಾಮ್, ಮುಖಂಡರಾದ ಕೃಷ್ಣಕುಮಾರ್, ಆರ್.ಎಸ್.ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT