ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಅಂಗಿ ಧರಿಸಿ ರೈತ ಸಮಾವೇಶದಲ್ಲಿ ಭಾಗಿ: ಕೋಡಿಹಳ್ಳಿ ಚಂದ್ರಶೇಖರ್

ರಾಜ್ಯ ರೈತ ಸಂಘದ ಮತ್ತು ಹಸಿರು ಸೇನೆಯ ಅಧ್ಯಕ್ಷ
Last Updated 1 ಜನವರಿ 2020, 10:42 IST
ಅಕ್ಷರ ಗಾತ್ರ

ತುಮಕೂರು: ತುಮಕೂರಿನಲ್ಲಿ ನಡೆಯಲಿರುವ ರೈತ ಸಮಾವೇಶಕ್ಕೆ ತಾವು ಭಾಗವಹಿಸುತ್ತಿದ್ದು, ಅಂದು ಯಾವುದೇ ಜೈಕಾರವೂ ಹೇಳುವುದಿಲ್ಲ, ಧಿಕ್ಕಾರವೂ ಕೂಗುವುದಿಲ್ಲ. ಆದರೆ, ಕಪ್ಪು ಅಂಗಿ ಧರಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಪ್ರಧಾನಿ ಮೋದಿ ಅವರು 370 ಕಾಯ್ದೆ ಹಾಗೂ ಪೌರತ್ವ ಕಾಯ್ದೆ ನಮ್ಮ ಚುನಾವಣಾ ಪೂರ್ವ ಭರವಸೆಗಳು. ಹಾಗಾಗಿ ಅದನ್ನು ಜಾರಿಗೆ ತಂದಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಸ್ವಾಮಿನಾಥನ್ ವರದಿ ಜಾರಿ ಬಗ್ಗೆಯೂ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಲಾಗಿತ್ತು. ಈ ಬಗ್ಗೆ ಪ್ರಧಾನಿ ಏಕೆ ಮೌನವಹಿಸಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪ್ರಧಾನಿಗಳು ಕೇಂದ್ರ ಸರ್ಕಾರದ ನೌಕರರು ಕೇಳದೇ ಇದ್ದರೂ ₹19 ಸಾವಿರ ಕೋಟಿ ಹಣವನ್ನು ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರೆ. ಆದರೆ ದೇಶದ ವಿವಿಧೆಡೆ ನೆರೆ ಪ್ರವಾಹ ಬಂದು ರೈತರು ಬೀದಿ ಪಾಲಾಗಿ ಮನೆ, ಮಠ ಕಳೆದುಕೊಂಡರೂ ದೇಶದ ರೈತರಿಗೆ ಕೇವಲ ₹6 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಪ್ರಧಾನಿಗೆ ಶ್ರೀಮಂತರ ನೋವು, ಅಂಬಾನಿ, ಅದಾನಿ ಸಾಲದ ಬಗ್ಗೆ ಕನಿಕರ ಹುಟ್ಟುತ್ತದೆ. ಆದರೆ, ರೈತರ ಬಗ್ಗೆ ಕನಿಕರ ಹುಟ್ಟಿತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೀಜ ಕಾಯ್ದೆಯಲ್ಲಿ ರೈತರ ಸಾರ್ವಭೌಮತ್ವ ಪೋಷಿಸಿಲ್ಲ. ಬದಲಾಗಿ ಬೀಜದ ಕಂಪನಿಗೆ ಮಾತ್ರ ಇದರಲ್ಲಿ ಆದ್ಯತೆ ನೀಡಲಾಗಿದೆ. ಬೀಜ ಕಾಯ್ದೆ ಜಾರಿಗೆ ತರುವ ಮುಂಚೆ ರೈತರ ಜತೆಗೆ ಚರ್ಚಿಸದೇ ಏಕಾಏಕಿ ಜಾರಿಗೆ ತರಲು ಹೊರಟಿರುವುದು ಖಂಡನೀಯ. ದೇಶದಲ್ಲಿ ಶೇ 60 ರಷ್ಟು ರೈತರಿದ್ದಾರೆ. ನಮ್ಮನ್ನು ಕಡೆಗಣಿಸಿದರೆ, ನಾವು ನಿಮ್ಮನ್ನು ಕಡೆಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಎಲ್ಲಾ ಅಸಮಾಧಾನದ ಜತೆಗೆ ನಾವು ಜ.2 ರಂದು ನಡೆಯುವ ರೈತ ಸಮಾವೇಶಕ್ಕೆ ಭಾಗವಹಿಸುತ್ತಿದ್ದು, ಅಂದು ಪ್ರತಿಭಟನೆಯ ಸೂಚಕವಾಗಿ ಕಪ್ಪು ಅಂಗಿ ಧರಿಸಲಾಗುತ್ತಿದೆ. ಈ ಬಗ್ಗೆ ನಾವು ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ. ಬೇಕಾದರೆ ಅವರು ನಮ್ಮನ್ನು ಬಂಧಿಸಲಿ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಸಂಘದ ಅಧ್ಯಕ್ಷ ಆನಂದ್ ಪಟೇಲ್, ರಾಜ್ಯ ಉಪಾಧ್ಯಕ್ಷ ಸತೀಶ್ ಕಂಕೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾ ಗೌರವಾಧ್ಯಕ್ಷ ಧನಂಜಯ ಆರಾಧ್ಯ, ಜಿಲ್ಲಾ ಸಂಚಾಲಕ ಚಿಕ್ಕಣ್ಣ, ವಿವಿಧ ತಾಲ್ಲೂಕು ಅಧ್ಯಕ್ಷರಾದ ರಾಜಣ್ಣ, ಅನಿಲ್ ಕುಮಾರ್, ಲೋಕೇಶ್, ಸಣ್ಣದ್ಯಾಮೇಗೌಡ, ಕೋಡ್ಲಳ್ಳಿ ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT