ಶುಕ್ರವಾರ, ಆಗಸ್ಟ್ 6, 2021
22 °C
ಜಿಲ್ಲೆ ಕೆಂಪು ವಲಯದಿಂದ ಕಿತ್ತಲೆ ವಲಯಕ್ಕೆ

ಕಪ್ಪು ಶಿಲೀಂಧ್ರ: ಹೆಚ್ಚಿದ ಸಾವಿನ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಪ್ಪು ಶಿಲೀಂಧ್ರದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಕುಣಿಗಲ್ ತಾಲ್ಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದು, ಈಗ ಪಾವಗಡ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಮೂವರು ಸಾವನ್ನಪ್ಪಿದಂತಾಗಿದೆ.

ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರಕ್ಕೆ 21 ಮಂದಿ ತುತ್ತಾಗಿದ್ದು, ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 15 ಜನರಿಗೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸಿದ್ಧಾರ್ಥ, ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ತಿಳಿಸಿದರು.

ಜಿಲ್ಲಾ ಆಡಳಿತ ಸಾಕಷ್ಟು ಕಟ್ಟುನಿಟ್ಟಿನ, ಕಠಿಣ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದ್ದು, ಕೆಂಪು ವಲಯದಿಂದ ಕಿತ್ತಲೆ ವಲಯಕ್ಕೆ ಬಂದಿದೆ. ಮೇ 15ರ ನಂತರ ವರದಿಯಾಗಿರುವ ಕೋವಿಡ್ ಪ್ರಕರಣಗಳನ್ನು ಅವಲೋಕಿಸಿದಾಗ ಪಾಸಿಟಿವ್ ಪ್ರಕರಣಗಳು ಇಳಿಮುಖವಾಗುತ್ತಿವೆ. ಮೇ 15ರಂದು ಶೇ 42.29ರಷ್ಟಿದ್ದ ಸೋಂಕಿತರ ಸಂಖ್ಯೆ ಮೇ 23ಕ್ಕೆ ಶೇ 31.66ಕ್ಕೆ ಇಳಿದಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ಹಳ್ಳಿಗಳ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸುವ ನಿರ್ಧಾರದಿಂದ ಪರಿಸ್ಥಿತಿ ಸುಧಾರಣೆಯಾಗಿದೆ. ಜಿಲ್ಲೆಯಲ್ಲಿ ಈವರೆಗೂ 17 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.

ಸೋಂಕು ಪ್ರಸರಣ ಕಡಿಮೆಯಾಗಿದ್ದು, ಜಿಲ್ಲೆಯಲ್ಲಿ 82 ಆಮ್ಲಜನಕ ಹಾಸಿಗೆ ಖಾಲಿ ಉಳಿದಿವೆ. ಕಲ್ಲು ಗಣಿಗಾರಿಕೆ ಹಾಗೂ ಕೈಗಾರಿಕೋದ್ಯಮಿಗಳು 256 ಕಾನ್ಸನ್‌ಟ್ರೇಟರ್‌ಗಳನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ತಾಲ್ಲೂಕು ಮಟ್ಟದಲ್ಲಿಯೇ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ರೆಮ್‌ಡಿಸಿವಿರ್, ಕೋವಿಡ್‌ ಲಸಿಕೆಗೆ ಕೊರತೆ ಇಲ್ಲ. ನಗರದಲ್ಲಿ ಪ್ರತಿದಿನ ಒಂದು ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.

ಮೂರನೇ ಅಲೆ ನಿಯಂತ್ರಣಕ್ಕೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಲಸಿಕೆ ನೀಡಲು ಅವಕಾಶ ನೀಡಿದರೆ ಇಲ್ಲಿಯೂ ವ್ಯವಸ್ಥೆ ಮಾಡಲಾಗುವುದು. ಎಬಿಆರ್‌ಕೆ ಯಡಿ ದಾಖಲಾದ ಸೋಂಕಿತರು ಹಣ ನೀಡುವಂತಿಲ್ಲ. ಖಾಸಗಿ ಆಸ್ಪತ್ರೆಗಳು ಹಣಕ್ಕೆ ಬೇಡಿಕೆಯಿಟ್ಟರೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿದರು.

ಸಂಸದ ಜಿ.ಎಸ್.ಬಸವರಾಜು, ‘ಗ್ರಾಮೀಣ ಪ್ರದೇಶಗಳ ಜನರು ಮಾತು ಕೇಳುತ್ತಿಲ್ಲ. ನಿಯಮ ಪಾಲಿಸುತ್ತಿಲ್ಲ. ಅವಶ್ಯಕ ಇರುವ ಹಳ್ಳಿಗಳಲ್ಲಿ ಲಾಕ್‌ಡೌನ್ ಮಾಡುವುದು ಸೂಕ್ತ’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.