ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಉಳಿಸುತ್ತಿದೆ ರಕ್ತದಾನಿಗಳ ತಂಡ

ಇಂದು ರಕ್ತದಾನಿಗಳ ದಿನ: ಕುಣಿಗಲ್‌ನಲ್ಲಿ ಸಕ್ರಿಯವಾಗಿದೆ ಎಸ್‌ಬಿಎಫ್ ಬ್ಲಡ್ ಹೆಲ್ಪ್ ಲೈನ್ ಗ್ರೂಪ್
Last Updated 14 ಜೂನ್ 2020, 10:20 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಎಸ್‌ಬಿಎಫ್ ಬ್ಲಡ್ ಹೆಲ್ಪ್ ಲೈನ್ ಗ್ರೂಪ್ ಕಳೆದ ಐದು ವರ್ಷಗಳಿಂದ ನಿರಂತರವಾಗಿ ರಕ್ತದಾನದಲ್ಲಿ ತೊಡಗಿದ್ದು, ಪ್ರತಿವರ್ಷ ಸರಾಸರಿ 50 ಜನರಿಗೆ ರಕ್ತ ನೀಡುತ್ತಿದೆ.

ದಯಾಭವನದ ರಮೇಶ್ ಅವರು ಈ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿದ್ದು, ಸದ್ಯ ಇದರಲ್ಲಿ 200 ಸದಸ್ಯರಿದ್ದಾರೆ. ಅಪಘಾತ, ಹೆರಿಗೆಯಂತಹ ತುರ್ತು ಸ್ಥಿತಿಯಲ್ಲಿ ತಾಲ್ಲೂಕು ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಗೂ ತೆರಳಿ ರಕ್ತದಾನ ಮಾಡಿದ್ದಾರೆ.

ರಕ್ತದ ಅಗತ್ಯ ಇದೆ ಎಂದು ಈ ಗುಂಪಿನಲ್ಲಿರುವ ಯಾವ ಸದಸ್ಯರಿಗೆ ಮಾಹಿತಿ ದೊರೆತರೂ ತಕ್ಷಣ ಅದನ್ನು ಈ ಗ್ರೂಪ್‌ನಲ್ಲಿ ಹಂಚಿಕೊಳ್ಳುತ್ತಾರೆ. ಸ್ಥಳಕ್ಕೆ ಹತ್ತಿರ ಇರುವವರು ಹಾಗೂ ಆಸಕ್ತರು ಅಲ್ಲಿಗೆ ತೆರಳಿ ರಕ್ತದಾನ ಮಾಡುತ್ತಾರೆ.

‘2014ರಲ್ಲಿ ವಿಶ್ವಸಂಸ್ಥೆ ರಕ್ತದಾನಿಗಳ ದಿನಾಚರಣೆಗಾಗಿ, ತಾಯಂದಿರ ರಕ್ಷಣೆಗಾಗಿ ಶುದ್ಧ ರಕ್ತ ಎಂಬ ಘೋಷವಾಕ್ಯ ಪ್ರಕಟಿಸಿತ್ತು. ಅದರ ಪ್ರೇರಣೆಯಿಂದಾಗಿ ತಾಯಿ, ಮಗು ಹಾಗೂ ಗಂಭೀರ ಸ್ಥಿತಿಯಲ್ಲಿರುವವರಿಗೆ ರಕ್ತದ ಅಗತ್ಯ ಮನಗಂಡು ಗ್ರೂಪ್‌ ರಚಿಸಿಕೊಂಡು ರಕ್ತದಾನ ಮಾಡುತ್ತಿದ್ದೇವೆ’ ಎಂದು ರಮೇಶ್ ತಿಳಿಸಿದರು.

ದೇಶದಲ್ಲಿ ಬೇಡಿಕೆ ಇರುವ ರಕ್ತದಲ್ಲಿ ಶೇ 25ರಷ್ಟು ಮಾತ್ರ ಸ್ವಯಂಪ್ರೇರಿತ ರಕ್ತದಾನಿಗಳಿಂದ ಪಡೆಯಲಾಗುತ್ತಿದೆ. ಉಳಿದ ಶೇ 75 ಭಾಗ ಹಣ ನೀಡಿ ಪಡೆಯಬೇಕಾದ ಪರಿಸ್ಥಿತಿ ಇದೆ. ದಾನಿಗಳಿಂದ ಪಡೆದ ರಕ್ತವನ್ನು 30ರಿಂದ 35 ದಿನದವರೆಗೆ ಸಂರಕ್ಷಿಸಿಡಬಹುದು. ನಂತರ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಮಾಹಿತಿ ನೀಡಿದರು.

ಈ ಗ್ರೂಪ್‌ನಲ್ಲಿ ಸಕ್ರಿಯರಾಗಿರುವ ಸೇವಾ ಭಾಗ್ಯ ಸಂಸ್ಥೆಯ ಪದಾಧಿಕಾರಿಗಳಾದ ವಿನೋದ್ ಗೌಡ, ಪದ್ಮನಾಭ, ಚೇತನ್ ರಾಜ್, ಭಗತ್ ಸೇನೆ ಸಂಚಾಲಕ ಮಂಜುನಾಥ್, ವಂದೆಮಾತರಂ ಲ್ಯಾಬ್ ಶ್ರೀನಿವಾಸ್ ಅವರು 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಚಂದನ್, ಸತ್ಯನಾರಾಯಣ್, ಸುದರ್ಶನ್, ನಾರಾಯಣ್ ಮುರಳಿಧರ್, ನರಸಿಂಹಮೂರ್ತಿ ಅವರು ನಿರಂತರ ರಕ್ತದಾನಿಗಳಾಗಿದ್ದು ಉತ್ಸಾಹ ಕುಂದಿಲ್ಲ.

ಸಂಪರ್ಕಕ್ಕೆ: 9964939638

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT