ಸೋಮವಾರ, ಮೇ 10, 2021
19 °C

ಕುಣಿಗಲ್: ಪೆಟ್ಟಿಗೆ ಅಂಗಡಿಗಳ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಪಟ್ಟಣದ ತುಮಕೂರು ರಸ್ತೆಯಲ್ಲಿ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ಅಂಗವಿಕಲ ಮಾಲೀಕರು ಅಂಗಲಾಚಿದರೂ ಬಿಡದೆ ಪುರಸಭೆ ಅಧಿಕಾರಿಗಳು ಪೊಲೀಸರ ಸಹಕಾರದಿಂದ ಮಂಗಳವಾರ ತೆರವುಗೊಳಿಸಿದರು.

ಪುರಸಭೆ ಸಾಮಾನ್ಯ ಸಭೆಯಲ್ಲಿ ತುಮಕೂರು ರಸ್ತೆಯಲ್ಲಿ ಅನಧಿಕೃತ ಪೆಟ್ಟಿ ಅಂಗಡಿಗಳನ್ನು ತೆರವಿಗೆ ನಿರ್ಲಕ್ಷ್ಯ ವಹಿಸಿದ ಪರಿಸರ ಇಂಜನಿಯರ್ ಚಂದ್ರಶೇಖರ್ ಮೇಲೆ ನೀರಿನ ಬಾಟಿಲಿ ಸದಸ್ಯೆ ಜಯಲಕ್ಷ್ಮೀ ತೂರಿ ವಿವಾದ ಸೃಷ್ಟಿಸಿದ್ದರು. ಸದಸ್ಯೆ ಆಗ್ರಹದ ಮೇರೆಗೆ ಮುಖ್ಯಾಧಿಕಾರಿ ರವಿಕುಮಾರ್, ಪರಿಸರ ಎಂಜನಿಯರ್ ಚಂದ್ರಶೇಖರ್, ಕಂದಾಯ ನಿರೀಕ್ಷಕ ಜಗರೆಡ್ಡಿ, ಆರೋಗ್ಯ ನಿರೀಕ್ಷಕಿ ಮಮತಾ ತಂಡ ಬೆಳಗ್ಗೆಯೆ ಪೊಲೀಸರೊಂದಿಗೆ ತೆರಳಿ ಪೆಟ್ಟಿಗೆ ಅಂಗಡಿಗಳ ತೆರವಿಗೆ ಮುಂದಾದರು.

ಈ ಸಮಯದಲ್ಲಿ ಅಂಗಡಿಗಳ ಮಾಲೀಕರಾದ ಅಂಗವಿಕಲರು, ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪಟ್ಟಣದಲ್ಲಿ ಎಲ್ಲ ಕಡೆ
ಗಳಲ್ಲಿ ರಸ್ತೆಗಳ ಬದಿಯಲ್ಲಿ ಪೆಟ್ಟಿ ಅಂಗಡಿಗಳನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ತುಮಕೂರು ರಸ್ತೆಯ ಅಂಗಡಿಗಳನ್ನು ಮಾತ್ರ ತೆರವುಮಾಡಲು ಮುಂದಾಗಿರುವುದು ಸರಿಯಲ್ಲ. ಪುರಸಭೆಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ನಿತ್ಯ ಸುಂಕಪಾವತಿ ಮಾಡುತ್ತಿದ್ದರೂ, ಅಧಿಕಾರಿಗಳು ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿ ತೆರವಿನ ಕಾರ್ಯಕ್ಕೆ ಅಡ್ಡಿಪಡಿಸಿದರು.

ಇಬ್ಬರು ಅಂಗವಿಕಲರು ತಮ್ಮ ಜೀವನಾಧಾರಕ್ಕೆ ಪೆಟ್ಟಿ ಅಂಗಡಿ ಇಟ್ಟಿದ್ದು, ಪರ್ಯಾಯ ವ್ಯವಸ್ಥೆ ಮಾಡುವವರೆಗೂ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರೂ, ಅಧಕಾರಿಗಳು ಪೊಲೀಸರ ಸಹಕಾರದಿಂದ ತೆರವುಗೊಳಿಸಿದರು.

ಪುರಸಭೆಯವರ ಕಾರ್ಯವನ್ನು ಪ್ರಶಂಸಿರುವ ನಾಗರಿಕರು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರಭಾವಿಗಳು ಬಲಾಡ್ಯರು ಅನಧಿಕೃತವಾಗಿ ಪೆಟ್ಟಿಗೆಅಂಗಡಿಗಳನ್ನಿಟ್ಟು ದಂದೆಮಾಡುತ್ತಿದ್ದಾರೆ. ಇದರಿಂದಾಗಿ ಪಾದಚಾರಿ ಮಾರ್ಗವೇ ಇಲ್ಲದಂತಾಗಿದೆ. ತುಮಕೂರು ರಸ್ತೆಯಲ್ಲಿ ಮಾಡಿರುವಂತೆ ಪಟ್ಟಣದಲ್ಲಿರುವ ನೂರೂರು ಅನಧಿಕೃತ ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಿ ಸುಗಮ ರಸ್ತೆ ಸಂಚಾರ ಮತ್ತು ಪಾದಚಾರಿ ಮಾರ್ಗಕ್ಕೆ ಅನವುಮಾಡಿಕೊಡಲು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.