ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಬಸ್ ಸ್ಥಗಿತ: ಶಾಲೆಗೆ ಹೋಗದ ಮಕ್ಕಳು

ಕೇಂದ್ರೀಯ ವಿದ್ಯಾಲಯದ ಮಕ್ಕಳ ಪರದಾಟ; ಸಂಘ– ಅಧಿಕಾರಿಗಳ ನಡುವೆ ಜಟಾಪಟಿ
Published 22 ಜೂನ್ 2024, 4:40 IST
Last Updated 22 ಜೂನ್ 2024, 4:40 IST
ಅಕ್ಷರ ಗಾತ್ರ

ತುಮಕೂರು: ನಗರದ ಹೊರ ವಲಯದ ಅಮಾಲಪುರದಲ್ಲಿ ಇರುವ ಕೇಂದ್ರೀಯ ವಿದ್ಯಾಲಯಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಿದ್ದು, ಶುಕ್ರವಾರ ಶಾಲೆಗೆ ತೆರಳಲಾಗದೆ ಮಕ್ಕಳು ಪರದಾಡಿದರು.

ಬೇಸಿಗೆ ರಜೆ ಮುಗಿದು, ಶುಕ್ರವಾರದಿಂದ ಶಾಲೆ ಆರಂಭವಾಗಿದೆ. ಮೊದಲ ದಿನವೇ ಸುಮಾರು 450ಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಯೋಗ ದಿನಾಚರಣೆಯಲ್ಲೂ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಜಿಲ್ಲಾ ಆಡಳಿತ, ಸಹಕಾರ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಕೇಂದ್ರೀಯ ವಿದ್ಯಾಲಯ ಪೋಷಕರ ಕಲ್ಯಾಣ ಸಂಘದಲ್ಲಿನ ಅವ್ಯವಸ್ಥೆಯಿಂದಾಗಿ ಮಕ್ಕಳು ಬಳಲುವಂತಾಗಿದೆ.

ಈ ವಿಚಾರವನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗಮನಕ್ಕೆ ಪೋಷಕರು ತಂದಿದ್ದರೂ, ಸಮಸ್ಯೆ ಪರಿಹರಿಸಿಲ್ಲ. ಮಕ್ಕಳ ಜತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ, ಸಂಘದ ಮೂಲಕ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಂದ ಸಂಗ್ರಹಿಸಿದ ಹಣವನ್ನು ಸಂಘದ ಪದಾಧಿಕಾರಿಗಳು ಕೆಎಸ್‌ಆರ್‌ಟಿಸಿಗೆ ಪಾವತಿಸದೆ, ಸುಮಾರು ₹36 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಮೊತ್ತ ಬೆಟ್ಟದಂತೆ ಬೆಳೆಯುತ್ತಿದ್ದು, 9 ಬಸ್‌ಗಳ ಸಂಚಾರವನ್ನು ಸಂಸ್ಥೆ ಸ್ಥಗಿತಗೊಳಿಸಿದೆ.

ಪ್ರತಿ ವಿದ್ಯಾರ್ಥಿಯಿಂದ ಒಂದು ವರ್ಷಕ್ಕೆ ₹12 ಸಾವಿರ ಶುಲ್ಕವನ್ನು ಸಂಘ ಸಂಗ್ರಹಿಸುತ್ತಿದೆ. ಇದೇ ಹಣವನ್ನು ಕಿ.ಮೀ ಬಾಡಿಗೆ ಲೆಕ್ಕದಲ್ಲಿ ಕೆಎಸ್ಆರ್‌ಟಿಸಿಗೆ ಪಾವತಿಸಲಾಗುತ್ತಿದೆ. ಮಕ್ಕಳನ್ನು ನೋಡಿಕೊಳ್ಳಲು ಪ್ರತಿ ಬಸ್‌ಗೆ ಒಬ್ಬರಂತೆ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು, ಇದೇ ಹಣದಲ್ಲಿ ವೇತನ ನೀಡಲಾಗುತ್ತಿದೆ. ಈ ವ್ಯವಸ್ಥೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈಗ ಎಲ್ಲಾ ವ್ಯವಸ್ಥೆ ತಾಳ ತಪ್ಪಿದ್ದು, ಸಂಸ್ಥೆಗೆ ಬಾಕಿ ಪಾವತಿಸದೆ ಬಸ್‌ಗಳನ್ನು ನೀಡಲು ನಿರಾಕರಿಸಿದೆ. ಮಹಿಳಾ ಸಿಬ್ಬಂದಿಗೂ ಆರು ತಿಂಗಳಿಂದ ಸಂಬಳ ನೀಡಿಲ್ಲ.

ಸಂಘದ ಹಿಂದಿನ ಆಡಳಿತ ಮಂಡಳಿ ಸಾಮಾನ್ಯ ಸಭೆ ನಡೆಸಿ ನಿರ್ಧಾರ ಕೈಗೊಂಡ ನಂತರ ಆಡಳಿತವನ್ನು ಮತ್ತೊಬ್ಬರಿಗೆ ಹಸ್ತಾಂತರ ಮಾಡಬೇಕಿತ್ತು. ಸಭೆಯಲ್ಲಿ ನಿರ್ಧಾರ ಕೈಗೊಳ್ಳದೆ ಏಕಾಏಕಿ ಹಸ್ತಾಂತರ ಮಾಡಿರುವುದು ಹಾಗೂ ಸಂಘದಲ್ಲಿ ಹಣ ದುರುಪಯೋಗ ನಡೆದಿರುವುದು ಇಷ್ಟೆಲ್ಲ ಸಮಸ್ಯೆಗೆ ಮೂಲ ಕಾರಣ ಎಂದು ಪೋಷಕರು ಆರೋಪಿಸುತ್ತಾರೆ.

ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಾಗ ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು. ಆ ಸಮಯದಲ್ಲಿ ಜಿಲ್ಲಾಧಿಕಾರಿ ಸಭೆ ನಡೆಸಿ, ‘ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸಹಕಾರ ಸಂಘಗಳ ಉಪನಿಬಂಧಕ ಎಚ್.ಮೂರ್ತಿ, ಸಹಾಯಕ ನಿಬಂಧಕರಿಗೆ ನಿರ್ದೇಶಿಸಿದ್ದರು. ಆದರೆ ಈವರೆಗೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿ ಸೂಚನೆಗೂ ಸಹಕಾರ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಗತ್ಯ ಕ್ರಮ ಕೈಗೊಂಡಿದ್ದರೆ ಮಕ್ಕಳಿಗೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

‘ತಕ್ಷಣ ಸಮಸ್ಯೆ ಪರಿಹರಿಸಿ ಬಸ್ ಸಂಚಾರ ಆರಂಭಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಯೇ ಮಧ್ಯೆ ಪ್ರವೇಶಿಸಬೇಕು’ ಎಂದು ಪೋಷಕರು ಆಗ್ರಹಿಸಿದರು.

‘ಆಡಳಿತಾಧಿಕಾರಿ ನೇಮಕ ಪ್ರಕ್ರಿಯೆ ಮುಂದುವರಿದಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಸೋಮವಾರದಿಂದ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ’ ಎಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು.

ಈ ಬಗ್ಗೆ ಮಾಹಿತಿ ಪಡೆಯಲು ಸಹಕಾರ ಸಂಘಗಳ ಉಪನಿಬಂಧಕ ಎಚ್.ಮೂರ್ತಿ ಅವರನ್ನು ಸಂಪರ್ಕಿಸಿದರೂ, ಅವರ ಮೊಬೈಲ್ ಸ್ವಿಚ್ಡ್‌ಆಫ್ ಆಗಿತ್ತು.

450ಕ್ಕೂ ಹೆಚ್ಚು ಮಕ್ಕಳಿಗೆ ಸಮಸ್ಯೆ 9 ನಿತ್ಯ ಬಸ್‌ಗಳ ಸಂಚಾರ ₹36 ಲಕ್ಷ ಕೆಎಸ್‌ಆರ್‌ಟಿಸಿಗೆ ಬಾಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT