ಬುಧವಾರ, ಆಗಸ್ಟ್ 17, 2022
30 °C

ವಿಶೇಷ ಬೋನ್‌ ಸಹಾಯದಿಂದ ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಒಂದು ವರ್ಷದಿಂದ ಕಾಡಿದ ಗಂಡು ಚಿರತೆಯನ್ನು ತಾಲ್ಲೂಕಿನ ಬನ್ನಿಕುಪ್ಪೆ ಬಳಿ ನಿರ್ಮಿಸಲಾಗಿದ್ದ ವಿಶೇಷ ಬೋನ್‌ನಲ್ಲಿ ಮಂಗಳವಾರ ರಾತ್ರಿ ಸೆರೆ ಹಿಡಿಯಲಾಗಿದೆ.

‘ಹೆಬ್ಬೂರು, ಚಿಕ್ಕಮಳಲವಾಡಿ, ಮಣಿಕುಪ್ಪೆ ಪ್ರದೇಶದಲ್ಲಿ ಒಂದು ವರ್ಷದಲ್ಲಿ 5 ಜನರು ಚಿರತೆ ದಾಳಿಗೆ ಬಲಿಯಾಗಿದ್ದರು. ಚಿರತೆ ಬಾಧಿತ ಪ್ರದೇಶದಲ್ಲಿ ಒಟ್ಟು 46 ಕ್ಯಾಮೆರಾ ಟ್ರ್ಯಾಪ್‍ಗಳನ್ನು ಹಾಗೂ ವಿಶೇಷ ಬೋನ್ ಅಳವಡಿಸಲಾಗಿತ್ತು. ಚಿರತೆಗಳ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಸೆರೆಯಾಗಿರುವ ಚಿರತೆ ಕಳೆದ ಒಂದು ವರ್ಷದಿಂದಲೂ ಬಾಧಿತ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಟ್ರ್ಯಾಪ್ ಕೇಜಿಗೆ ಹೋಗದೆ ಇದ್ದ ಕಾರಣ ಈ ಚಿರತೆಯನ್ನು ಸೆರೆ ಹಿಡಿಯುವುದು ಕಷ್ಟವಾಗಿತ್ತು. ಚಿರತೆಯನ್ನು ಸೆರೆಹಿಡಿಯಲು 10x10 ಅಡಿ ಅಗಲದ ನೋಡಲು ಕೊಟ್ಟಿಗೆಯಂತೆ ಕಾಣುವ ವಿಶೇಷ ಬೋನ್ ರೂಪಿಸಲಾಗಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನದ ಅರಿವಳಿಕೆ ತಜ್ಞ ಡಾ.ರಮೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸ್ಥಳಾಂತರಿಸಲಾಯಿತು. ಈ ಪ್ರದೇಶದಲ್ಲಿ ಇನ್ನು ಎರಡು ಚಿರತೆಗಳು ಸಕ್ರಿಯವಾಗಿವೆ. ಸೆರೆ ಕಾರ್ಯಾಚರಣೆ ಮುಂದುವರೆದಿದೆ. ಸಾರ್ವಜನಿಕರು ಅರಣ್ಯ ಇಲಾಖೆ ಈಗಾಗಲೇ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.