ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಉಪಚುನಾವಣೆ: ಮತಕ್ಕಾಗಿ ‘ಕುಲ’ದ ಮೊರೆ ಹೋದ ಕುಂಚಿಟಿಗರು

ಮತ ಸೆಳೆಯಲು ಬೆಡಗುಗಳೂ ಆಸರೆ
Last Updated 16 ಅಕ್ಟೋಬರ್ 2020, 4:00 IST
ಅಕ್ಷರ ಗಾತ್ರ

ತುಮಕೂರು: ಶಿರಾ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತ ಪಡೆಯಲು ಅಭ್ಯರ್ಥಿಗಳು ನಾನಾ ತಂತ್ರ–ಪ್ರತಿ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಅಭ್ಯರ್ಥಿಗಳು ಜಾತಿ, ಪಂಗಡ, ಒಳಪಂಗಡಗಳ ಲೆಕ್ಕದಲ್ಲಿ ತೊಡಗಿದ್ದಾರೆ. ‌‌

ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, ಜೆಡಿಎಸ್‌ನ ಅಮ್ಮಾಜಮ್ಮ ಮತ್ತು ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಕ್ಷೇತ್ರದಲ್ಲಿ ಪ್ರಬಲವಾಗಿರುವ ಕುಂಚಿಟಿಗ ಸಮುದಾಯಕ್ಕೆ ಸೇರಿದವರು. ಶಿರಾ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚಿರುವ ಕುಂಚಿಟಿಗರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಕಾರಣದಿಂದಲೇ ಕಾಂಗ್ರೆಸ್‌, ಜೆಡಿಎಸ್ ಮತ್ತು ಬಿಜೆಪಿ ಈ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಮುಂದಾಗಿವೆ.

ಮೂರು ಪಕ್ಷಗಳ ಅಭ್ಯರ್ಥಿಗಳು ಒಂದೇ ಸಮುದಾಯಕ್ಕೆ ಸೇರಿದ ಕಾರಣ ಅವರ ‘ಕುಲ/ಬೆಡಗು’ ಯಾವುದು ಎಂಬ ಲೆಕ್ಕಾಚಾರ ನಡೆಯುತ್ತಿವೆ. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಕೂಡ ‘ಕುಲ/ಬೆಡಗಿ’ನ ಮೊರೆ ಹೋಗುತ್ತಿದ್ದಾರೆ. ‘ನಾವು ಒಂದೇ ಕುಲ/ ಬೆಡಗಿನವರು.ಅಣ್ಣ ತಮ್ಮಂದಿರಂತೆ’ ಎನ್ನುವ ಭಾವನಾತ್ಮಕ ಮಾತು ಕುಂಚಿಟಿಗರ ನಡುವೆ ಚಾಲ್ತಿಗೆ ಬರುತ್ತಿದೆ. ಇದು ಬಹುಸಂಖ್ಯಾತ ಕುಂಚಿಟಿಗರ ಮತವಿಭಜನೆಗೂ ಕಾರಣವಾಗುತ್ತಿದೆ.

ಮೇಲ್ನೋಟಕ್ಕೆ ಈ ಬೆಡಗುಗಳು ಮತಕ್ಕೆ ಅಸ್ತ್ರಗಳಾಗುವುದಿಲ್ಲ ಎನಿಸಿದರೂ ಆಂತರ್ಯದಲ್ಲಿ ಬೆಡಗುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎನ್ನುತ್ತಾರೆ ಕುಂಚಿಟಿಗ ಸಮುದಾಯದ ಹಿರಿಯರು.

ಕುಂಚಿಟಿಗರಲ್ಲಿ 48 ಬೆಡಗು

‘ಕುಂಚಿಟಿಗ ಸಮುದಾಯದಲ್ಲಿ ಒಟ್ಟು 48 ಬೆಡಗುಗಳಿವೆ. ಬೆಡಗುಗಳ ಜನರು ಇಂತಹ ಅಭ್ಯರ್ಥಿಗೆ ಮತ ಹಾಕಬೇಕು ಎಂದು ನಿರ್ಣಯಕೈಗೊಳ್ಳಲು ಬಹಿರಂಗವಾಗಿ ಸಭೆಗಳನ್ನೇನೂ ಮಾಡುವುದಿಲ್ಲ. ಆದರೆ ಆಂತರ್ಯದಲ್ಲಿ ಮತ್ತು ಕುಲದ ಒಳಗೆ ನಮ್ಮ ಅಣ್ಣ, ತಮ್ಮಂದಿರು ಮತ್ತು ನೆಂಟರಿಗೆ (ಕುಲ) ಮತ ಹಾಕಬೇಕು ‌ಎನ್ನುವ ನಿರ್ಣಯ ಖಂಡಿತ ಇದೆ’ ಎನ್ನುತ್ತಾರೆ ಕುಂಚಿಟಿಗ ಯುವಸೇನೆ ಸಂಸ್ಥಾಪಕ ರಾಜಣ್ಣ.

‘ಈ ಬೆಡಗುಗಳಲ್ಲಿ ಮತ್ತೆ ಮೂರು ಮೂರು ಬೆಡಗುಗಳು ಒಗ್ಗೂಡಿ ತಮ್ಮನ್ನು ಅಣ್ಣ, ತಮ್ಮಂದಿರು ಎಂದು ಕರೆದುಕೊಂಡಿವೆ. ಉದಾಹರಣೆಗೆ, ಜಾನಕಲ್‌ನವರು, ಉಂಡೆನವರು, ಅರಸನವರು ಬೆಡಗುಗಳು ಅಣ್ಣ, ತಮ್ಮಂದಿರು ಎನಿಸಿಕೊಂಡಿವೆ. ಇವರಲ್ಲಿ ‌ಯಾರಾದರೂ ಒಂದು ಬೆಡಗಿನ ವ್ಯಕ್ತಿ ಚುನಾವಣೆ ಸ್ಪರ್ಧಿಸಿದರೂ ಆ ಬೆಡಗಿನ ಮತ್ತು ಅವರ ನೆಂಟರು ಅಭ್ಯರ್ಥಿಗೆ ಮತ ಹಾಕುವರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT