ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಕೊಟ್ಟ ಹಕ್ಕು ಕಸಿದ ಕೇಂದ್ರ ಸರ್ಕಾರ: ರಾಜರತ್ನ ಅಂಬೇಡ್ಕರ್ ವಿಷಾದ

Published 1 ಡಿಸೆಂಬರ್ 2023, 15:14 IST
Last Updated 1 ಡಿಸೆಂಬರ್ 2023, 15:14 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕು ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಮತ್ತು ತಾಲ್ಲೂಕು ದಲಿತ ಸಂಘರ್ಷ ಸಮಿತಿಯಿಂದ ಪಟ್ಟಣದ ಕೆ.ಹಿರಣ್ಣಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಭೀಮೋತ್ಸವ ಸೋದರತ್ವ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.

ಡಾ.ಬಿ.ಆರ್‌. ಅಂಬೇಡ್ಕರ್ ಮೊಮ್ಮಗ ಹಾಗೂ ‘ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ’ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಮಾತನಾಡಿ, ‘ದೇಶದಲ್ಲಿ ಕೋಮುವಾದ ಉಳಿದುಕೊಂಡರೆ ಅಪಾಯಗಳು ಘಟಿಸುತ್ತವೆ. ದೇಶ ಒಂದು ದೊಡ್ಡ ಬಿರುಗಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ನಾವು ವಿಮಾನದಲ್ಲಿ ಹೋಗುವಾಗ ಬಿರುಗಾಳಿಗೆ ಸಿಲುಕಿ ಹಾಕಿಕೊಂಡಾಗ ವಿಮಾನ ಹೇಗೆ ಅಲ್ಲೋಲ, ಕಲ್ಲೋವಾಗುತ್ತದೆಯೋ ಅಂತಹ ಬಿರುಗಾಳಿ ಇಂದು ಇಡೀ ಭಾರತವನ್ನು ಕಬಳಿಸುತ್ತಿದೆ’ ಎಂದರು.

ದೇಶದ ಜನ ತಮ್ಮ ಆಲೋಚನಾ ಶಕ್ತಿ ಕಳೆದುಕೊಂಡಿದ್ದಾರೆ. ಸಂವಿಧಾನ ಕೊಟ್ಟ ಸಾಂಸ್ಥಿಕ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿದುಕೊಂಡು ಭಾರತದ ಅಃತಸತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ದೂರಿದರು.

ಸಂವಿಧಾನ ಪೀಠಿಕೆಯ ಮಹತ್ವ ಅರಿತು, ಅದಕ್ಕೆ ತೊಡಕುಂಟು ಮಾಡುತ್ತಿರುವ ಶಕ್ತಿಯನ್ನು ದೂರವಿರಿಸಬೇಕು ಎಂದು ಸಲಹೆ ನೀಡಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಅಂಬೇಡ್ಕರ್ ಹೋರಾಟ, ಅವರು ಹಾಕಿಕೊಟ್ಟ ಸಂವಿಧಾನದಿಂದ ನಾವು ಮನುಷ್ಯರಾಗಿ ಬಾಳುತ್ತಿದ್ದೇವೆ. ಈ ಭೂಮಿ ಇರುವವರೆಗೂ ಸಂವಿಧಾನ ಉಳಿಯಬೇಕಿದೆ. ಕೇವಲ ದಲಿತರಲ್ಲ ಇಡೀ ಮನುಕುಲವೇ ಸಂವಿಧಾನದ ಪರ ನಿಲ್ಲಬೇಕಿದೆ. ಭೀಮೋತ್ಸವದ ಹೋರಾಟ ಕಿಡಿ ರಾಜ್ಯದಾದ್ಯಂತ ಹೆಚ್ಚಬೇಕಿದೆ. ದಲಿತರು ಕೊಡುವ ಕೈಗಳಾಗಬೇಕು, ಬೇಡುವ ಕೈಗಳಾಗಬಾರದು. ಅಂಬೇಡ್ಕರ್ ಆಶಯದಂತೆ ಜಾತಿ ಗಣತಿ ವರದಿಯನ್ನು ಸರ್ಕಾರ ಸುದೀರ್ಘ ಚರ್ಚೆ ಮಾಡಿ ಜಾರಿಗೊಳಿಸಲು ಬದ್ಧವಾಗಿದೆ ಎಂದರು.

ರಾಜರತ್ನ ಅಂಭೇಡ್ಕರ್, ಸತೀಶ್ ಜಾರಕಿಹೊಳಿ, ಸಮುದಾಯದ ಸ್ವಾಮೀಜಿ ಹಾಗೂ ಗಣ್ಯರನ್ನು ತೆರೆದ ವಾಹನದಲ್ಲಿ ಪಟ್ಟಣದ ಮಾಯಸಂದ್ರ ರಸ್ತೆಯಿಂದ ವಿವಿಧ ಜನಪದ ಕಲಾತಂಡಗಳೊಂದಿಗೆ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಹಾಗೂ ಗಣ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಭೂಮಿಗಳ ತಂಡದಿಂದ ಕ್ರಾಂತಿಗೀತೆ ಹಾಡಲಾಯಿತು.

ನಿಕೇತ್ ರಾಜ್ ಮೌರ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ತಾಲ್ಲೂಕು ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್. ಮೂರ್ತಿ, ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಷಡಕ್ಷರ ಮುನಿ ಸ್ವಾಮೀಜಿ, ಚಿಂತಕರಾದ ಕೆ.ದೊರೆರಾಜು, ಮಂಜುನಾಥ್ ಅದ್ದೆ, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ಕುಂದೂರ್ ಮುರುಳಿ, ಮುಖಂಡರಾದ ಕೊಟ್ಟಾ ಶಂಕರ್, ವಿ.ಟಿ.ವೆಂಕಟರಾಮು, ದಂಡಿನಶಿವರ ಕುಮಾರ್, ಚಂದ್ರಯ್ಯ, ಬಾಣಸಂದ್ರ ಕೃಷ್ಣ ಮಾದಿಗ, ಚಿದಾನಂದ್ ಸಮುದಾಯದ ಜನರು ಭಾಗವಹಿಸಿದ್ದರು.

ತರುವೇಕೆರೆಯಲ್ಲಿ ನಡೆದ ಭೀಮೋತ್ಸವದಲ್ಲಿ ಗಣ್ಯರ ಮೆರವಣಿಗೆ ಮಾಡಲಾಯಿತು
ತರುವೇಕೆರೆಯಲ್ಲಿ ನಡೆದ ಭೀಮೋತ್ಸವದಲ್ಲಿ ಗಣ್ಯರ ಮೆರವಣಿಗೆ ಮಾಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT