ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರದಲ್ಲಿ ಸವಾಲು: ವಿಜ್ಞಾನಿ ಕಸ್ತೂರಿ ರಂಗನ್ ಆತಂಕ

Last Updated 6 ಮಾರ್ಚ್ 2021, 3:22 IST
ಅಕ್ಷರ ಗಾತ್ರ

ತುಮಕೂರು: ದೇಶದ ಶಿಕ್ಷಣ ವ್ಯವಸ್ಥೆಯು ಪ್ರಸ್ತುತ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ ಎಂದು ವಿಜ್ಞಾನಿ ಕೆ.ಕಸ್ತೂರಿ ರಂಗನ್ ಆತಂಕ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಶುಕ್ರವಾರ ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಒಂದೆಡೆ ಸಮಾಜದ ವರ್ತಮಾನದ ಅಗತ್ಯಗಳಿಗೆ ಒತ್ತು ನೀಡಬೇಕು. ಅದೇ ಸಮಯದಲ್ಲಿ ವಿಶ್ವದ ಅತ್ಯುತ್ತಮ ವ್ಯವಸ್ಥೆಯ ಮಟ್ಟಕ್ಕೆ ಶಿಕ್ಷಣವನ್ನು ಬೆಳೆಸುವುದರ ಮೂಲಕ ಈಗಿನ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು’ ಎಂದು ಸಲಹೆ ಮಾಡಿದರು.

‘ಎಲ್ಲಕಿಂತ ಮುಖ್ಯವಾಗಿ ಹೊಸ ಜ್ಞಾನವನ್ನು ಹೊಂದುವುದರ ಜತೆಗೆ ಹೊಸಹೊಸ ಸಾಮರ್ಥ್ಯಗಳನ್ನು ಪಡೆದುಕೊಳ್ಳಬೇಕು. ಅಭಿವೃದ್ಧಿಶೀಲ ಸಮಾಜದ ಬೇಡಿಕೆಗಳನ್ನು ಪೂರೈಸುವ ವೃತ್ತಿಪರ ಮಾನವ ಸಂಪನ್ಮೂಲಗಳನ್ನು ಒಗ್ಗೂಡಿಸುವ ಕೆಲಸ ಆಗಬೇಕು. ಇದೆಲ್ಲವೂ ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದ್ದು, ಉನ್ನತ ಶಿಕ್ಷಣವು ಸಮಾಜದ ಅಗತ್ಯಗಳಿಗೆ ಸ್ಪಂದಿಸಬೇಕು. ನಿರಂತರವಾಗಿ ಸುಧಾರಣೆ, ವೈವಿಧ್ಯತೆಗಳನ್ನು ಹೊಂದುತ್ತಿರಬೇಕು. ವಿಶ್ವವಿದ್ಯಾಲಯಗಳು ಧನಾತ್ಮಕ ಮನೋಭಾವ ಮೂಡಿಸಿ, ನಾಯಕತ್ವದ ಗುಣಗಳನ್ನು ಹೊಂದಿರುವ ಮಾನವ ಪ್ರತಿಭೆ ಬೆಳೆಸಬೇಕು’ ಎಂದು ಹೇಳಿದರು.

ಹೊಸ ಶಿಕ್ಷಣ ನೀತಿಯನ್ನು ಪ್ರಸ್ತಾಪಿಸಿದ ಕಸ್ತೂರಿ ರಂಗನ್, ‘ವೇದಿಕೆ ಕೇಂದ್ರಿತವಾಗಿರುವ ಶಾಲಾ ಶಿಕ್ಷಕರನ್ನು ಅದರಿಂದ ಹೊರತಂದು ಹೊಸ ರೂಪ ನೀಡಲಿದೆ. ಅವರಿಗೆ ಹೊಸ ಜವಾಬ್ದಾರಿ ಕಲ್ಪಿಸಲಿದೆ. ಅಧ್ಯಾಪಕರ ಕಲಿಕಾ ಸಿದ್ಧತೆಗೂ ಅವಕಾಶ ಸಿಗಲಿದೆ. ಉದ್ಯೋಗದ ಸ್ಥಳಗಳಲ್ಲಿ ಎದುರಾಗಲಿರುವ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಿದೆ. ಇಪ್ಪಂತ್ತೊಂದನೇ ಶತಮಾನದ ಅವಿದ್ಯಾವಂತರೆಂದರೆ ಓದಲು, ಬರೆಯಲು ಬಾರದವರಲ್ಲ. ಬದಲಾಗಿ ಕಲಿಯಲು ಬಾರದವರು, ಕಲಿತದ್ದನ್ನು ಮರೆತರೆ ಮರುಕಲಿಕೆ ಮಾಡಲಾಗದವರು’ ಎಂದು ಅಭಿಪ್ರಾಯಪಟ್ಟರು.

ಭಾಷೆ ಸಾವು: ದೇಶದಲ್ಲಿರುವ ಭಾಷೆಗಳಿಗೆ ಪ್ರೋತ್ಸಾಹ ಸಿಗದೆ ಕಳೆದ 50 ವರ್ಷಗಳಲ್ಲಿ 220 ಭಾಷೆಗಳು ನಶಿಸಿವೆ. 22 ಭಾಷೆಗಳು ವಿನಾಶದ ಅಂಚಿನಲ್ಲಿವೆ. ಕೆಲವು ಭಾಷೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಭಾಷಾ ಶಿಕ್ಷಣ ನೀಡುವಂತೆ ನೂತನ ಶಿಕ್ಷಣ ನೀತಿಯಲ್ಲಿ ಶಿಫಾರಸು ಮಾಡಲಾಗಿದೆ. ಪ್ರಾದೇಶಿಕ, ಪ್ರಾಚೀನ ಭಾಷೆಗಳ ಬಳಕೆ, ಶಿಕ್ಷಣ, ಸಂಶೋಧನೆ ಬಲಗೊಳಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಲಾಗಿದೆ ಎಂದರು.

ಸೌಹಾರ್ದ: ಪ್ರಸ್ತುತ ಸನ್ನಿವೇಶದಲ್ಲಿ ಸೌಹಾರ್ದತೆ ಅತ್ಯಗತ್ಯವಿದೆ. ನಮ್ಮ ಯೋಚನೆ, ಕೆಲಸ, ಧರ್ಮ, ವಿಜ್ಞಾನ, ವ್ಯಕ್ತಿ, ಸಮಾಜದಲ್ಲಿ ಜೀವನೋತ್ಸಾಹದ ವಾತಾವರಣ ಸೃಷ್ಟಿಸುವ ಸೌಹಾರ್ದ ಮನೋಭಾವ ಬೆಳೆಸಬೇಕಿದೆ. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.

ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಮುಂದಿನ ವರ್ಷ ಹೊಸ ಕ್ಯಾಂಪಸ್‌ನಲ್ಲಿ ಘಟಿಕೋತ್ಸವ ನಡೆಯಲಿದೆ ಎಂದು ಪ್ರಕಟಿಸಿದರು.

ಕುಲಾಧಿಪತಿಯೂ ಆದ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಧ್ಯಕ್ಷತೆ ವಹಿಸಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT