ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಜುಲೈ 19 ಹಾಗೂ 22ರಂದು ನಡೆಯಲಿದ್ದು, ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕೋವಿಡ್‌ನಿಂದಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ವಿದ್ಯಾರ್ಥಿಗಳು ಸಹ ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಕೊರೊನಾ ಸೋಂಕು ಉಲ್ಬಣಿಸಿದ್ದರಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎರಡು ಪತ್ರಿಕೆಗಳಿಗೆ ಸೀಮಿತಗೊಳಿಸಿದೆ. ಎರಡು ಪತ್ರಿಕೆಗಳ ಪರೀಕ್ಷೆ ನಡುವೆ ಎರಡು ದಿನಗಳ ಅಂತರ ನೀಡಲಾಗಿದೆ.
ಹಿಂದಿನ ಸಲಕ್ಕಿಂತ ಈ ಬಾರಿ ಹೊಸ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಶಿಕ್ಷಕರು ಸಜ್ಜುಗೊಳಿಸಿದ್ದಾರೆ. ಪರೀಕ್ಷೆ ನಡೆಸುವುದರ ಪರ– ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅದೆಲ್ಲದರ ನಡುವೆ ಮಕ್ಕಳು ಪರೀಕ್ಷೆ ಎದುರಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡದಂತೆ ಜಿಲ್ಲಾ ಆಡಳಿತ, ಶಿಕ್ಷಣ ಇಲಾಖೆ ಮುಂಜಾಗ್ರತೆ ವಹಿಸಿದ್ದರೂ ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ ಕಡಿಮೆಯಾಗಿಲ್ಲ. ಈ ಎಲ್ಲಾ ಆತಂಕ, ಗೊಂದಲಗಳ ನಡುವೆಯೇ ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗೆ ಪರೀಕ್ಷಾ ಕೇಂದ್ರಕ್ಕೆ ಬರಲಿದ್ದಾರೆ.
ಸಿದ್ಧತೆ: ಎರಡು ದಿನಗಳಿಂದ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದ್ದು, ನೋಂದಣಿ ಸಂಖ್ಯೆ ನಮೂದಿಸಲಾಗಿದೆ. ಪರೀಕ್ಷೆಗೆ ಬರುವ ಮಕ್ಕಳಿಗೆ ಸ್ಯಾನಿಟೈಸ್ ಮಾಡಿ, ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಎಲ್ಲಾ ಮಕ್ಕಳಿಗೂ ಮಾಸ್ಕ್ ಕೊಡಲಾಗುತ್ತದೆ. ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಪ್ರತಿ ಕೇಂದ್ರಕ್ಕೆ ನಿಯೋಜಿಸಲಾಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ದೈಹಿಕ ಶಿಕ್ಷಕರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು ಸಹಕರಿಸಲಿದ್ದಾರೆ. ಅವಶ್ಯಕತೆ ಇದ್ದಲ್ಲಿ ಪರೀಕ್ಷಾ
ಕೇಂದ್ರದಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ನಿಷೇಧಾಜ್ಞೆ: ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬೆಳಿಗ್ಗೆ 9ರಿಂದ ಸಂಜೆ 5.30 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಯಾವುದೇ ಜೆರಾಕ್ಸ್ ಅಂಗಡಿ, ಸ್ಟೇಷನರಿ ಅಂಗಡಿಗಳನ್ನು ತೆರೆಯುವಂತಿಲ್ಲ. ಪರೀಕ್ಷೆ ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿದ್ದು,
ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳ ಪ್ರವೇಶ ನೀಡಲಾಗುತ್ತದೆ. ಪರೀಕ್ಷಾ ಕೊಠಡಿಯಲ್ಲಿ 9.45ರ ವರೆಗೆ ಅಧ್ಯಯನ ಮಾಡಲು ಅವಕಾಶ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.