ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಟಿ– ಥೋರಾಕ್ಸ್ ಸ್ಕೋರ್’ ಹೆಸರಲ್ಲಿ ಸುಲಿಗೆ

Last Updated 26 ಏಪ್ರಿಲ್ 2021, 6:08 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್–19 ಚಿಕಿತ್ಸೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡುತ್ತಿರುವ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಗಿನ ನೇರದಲ್ಲೇ ಸುಲಿಗೆ ಆರಂಭವಾಗಿದೆ.

ಕೊರೊನಾ ಸೋಂಕಿನ ಲಕ್ಷಣ ಇಲ್ಲದವರನ್ನೂ ಸೋಂಕಿತರು ಅಥವಾ ಸೋಂಕಿನ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಲಕ್ಷಣಗಳು ಕಂಡುಬರುತ್ತಿವೆ ಎಂಬ ಒಂದೇ ಕಾರಣ ಮುಂದಿಟ್ಟುಕೊಂಡು, ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇಲ್ಲದಿದ್ದರೂ ದಾಖಲಿಸಲಾಗುತ್ತಿದೆ. ಇಂತಹವರನ್ನು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ದೊಡ್ಡ ಮೊತ್ತದ ಬಿಲ್ ಮಾಡಿ, ವಸೂಲಿ ಮಾಡಲಾಗುತ್ತಿದೆ.

ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್– ನೆಗೆಟಿವ್ ಇದ್ದವರನ್ನು ಸಿಟಿ–ಥೋರಾಕ್ಸ್ (THORAX)ನ ಸ್ಕೋರ್ ನೋಡಿಕೊಂಡು ಕೊರೊನಾ ನೆಗೆಟಿವ್ ಎಂದು ಕೆಲವು ವೈದ್ಯರು ಗುರುತಿಸುತ್ತಾರೆ. ನಂತರ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ರೀತಿಯ ವರದಿ ಆಧಾರದ ಮೇಲೆ ಚಿಕಿತ್ಸೆ ಪಡೆದವರಿಗೆ ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, ಎಸ್‌ಆರ್‌ಎಚ್– ಐ.ಡಿ ಇದ್ದವರಿಗೆ ಮಾತ್ರ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಚಿಕಿತ್ಸೆ ಲಭ್ಯವಾಗುತ್ತದೆ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಚಿಕಿತ್ಸೆ ಪಡೆದ ರೋಗಿಯೇ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಬೇಕಾಗುತ್ತದೆ.

ಸಿಟಿ– ಥೋರಾಕ್ಸ್ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಾಗಿ ಉಸಿರಾಟದ ತೊಂದರೆಗೆ ಸಿಲುಕಿ ಹಾಗೂ ತೀವ್ರ ಸಮಸ್ಯೆಗೆ ಒಳಗಾದವರಿಗೂ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಉಚಿತವಾಗಿ ಚಿಕಿತ್ಸೆ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಈವರೆಗೂ ಯಾವೊಬ್ಬ ರೋಗಿಗೂ ಇದರ ಪ್ರಯೋಜನ ಸಿಕ್ಕಿಲ್ಲ. ಉಚಿತವಾಗಿ ಚಿಕಿತ್ಸೆ ಕೊಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ. ಬಡ ರೋಗಿಗಳ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಚಿಕಿತ್ಸೆ ಪಡೆದು ಬಂದ ರೋಗಿಗಳು ಹಾಗೂ ಅವರ ಸಂಬಂಧಿಕರ ಆರೋಪವಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಡ ಕುಟುಂಬದ ರೋಗಿಗಳು ಲಕ್ಷಾಂತರ ರೂಪಾಯಿ ಬಿಲ್ ಕಟ್ಟಲಾಗದೆ ಒದ್ದಾಡುತ್ತಿವೆ. ಕೆಲವು ವೈದ್ಯರು ಹಾಗೂ ಆಸ್ಪತ್ರೆಗಳ ನಡುವಿನ ಒಳ ಒಪ್ಪಂದದಿಂದಾಗಿ ‘ಸಿಟಿ– ಥೋರಾಕ್ಸ್’ ಸ್ಕೋರ್ ಆಧಾರದ ಮೇಲೆ ಕೊರೊನಾ ಸೋಂಕಿತರು ಎಂದು ಗುರುತಿಸಲಾಗುತ್ತಿದೆ. ಹಣ ಸುಲಿಗೆಗೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿವೆ.

ಸಿಟಿ– ಥೋರಾಕ್ಸ್ ಮೇಲೆ ಕೋವಿಡ್ ಎಂದು ಗುರುತಿಸಿ ಚಿಕಿತ್ಸೆ ಪಡೆದವರಿಗೂ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಉಚಿತವಾಗಿ ಚಿಕಿತ್ಸೆ ಲಭ್ಯವಾಗಬೇಕು ಎಂದು ಶಿರಾ ತಾಲ್ಲೂಕು ಕಂಚಿಗಾನಹಳ್ಳಿ ಆರ್.ನಾಗರಾಜು ಒತ್ತಾಯಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಕರೆ ಮಾಡಿದರೂ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT