ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.5ರಂದು ಎನ್‌ಪಿಎಸ್‌ ನೌಕರರ ಜತೆ ಸಿಎಂ ಸಭೆ

ಒಪಿಎಸ್‌ ಜಾರಿ ಬಗ್ಗೆ ಚರ್ಚೆ
Published 1 ಜನವರಿ 2024, 0:54 IST
Last Updated 1 ಜನವರಿ 2024, 0:54 IST
ಅಕ್ಷರ ಗಾತ್ರ

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.5ರಂದು ಬೆಂಗಳೂರಿನಲ್ಲಿ ನೂತನ ಪಿಂಚಣಿ ನೌಕರರ (ಎನ್‌ಪಿಎಸ್‌) ಸಂಘದ ಸಭೆ ಕರೆದಿದ್ದು, ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಜಾರಿಯ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತಾರಾಂ ತೇಜ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಎನ್‌ಪಿಎಸ್‌ ನೌಕರರ ಸಂಘದ ಬೆಂಗಳೂರು ವಿಭಾಗೀಯ ಮಟ್ಟದ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯಮಂತ್ರಿಯವರ ಜತೆ ಈಗಾಗಲೇ ಮೂರು–ನಾಲ್ಕು ಸಭೆಗಳನ್ನು ಮಾಡಲಾಗಿದೆ. ಮುಂದೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಸಭೆಯ ನಂತರ ಸಂಘದ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದು. ಮುಖ್ಯಮಂತ್ರಿ ಅವರೇ ಸಮಾವೇಶದ ದಿನಾಂಕ ನಿಗದಿ ಪಡಿಸುವುದಾಗಿ ತಿಳಿಸಿದ್ದಾರೆ ಎಂದರು.

ಎನ್‌ಪಿಎಸ್‌ ನೌಕರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣನವರ್, ‘2006ಕ್ಕಿಂತ ಮುಂಚೆ ಇದ್ದ ಪಿಂಚಣಿ ನೀತಿ ಮರು ಜಾರಿ ಮಾಡಬೇಕು. ನೂತನ ಪಿಂಚಣಿ ಯೋಜನೆ ರದ್ದು ಮಾಡಿ, ಒಪಿಎಸ್‌ ವ್ಯವಸ್ಥೆ ತರುತ್ತಾರೆ ಎಂಬ ನಂಬಿಕೆ ಇದೆ. ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.

ಕಳೆದ ಚುನಾವಣೆಯಲ್ಲಿ ನಾವು ನಿಮಗೆ ಮತದಾನ ಮಾಡಿದ್ದೇವೆ. ಈಗ ನಮಗೆ ಪಿಂಚಣಿ ನೀಡಿ, ನಾವು ಮತ್ತೆ ನಿಮಗೆ ಮತ ನೀಡುತ್ತೇವೆ ಎಂದು ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿಂಗೇಗೌಡ, ‘ಮುಂದಿನ ಲೋಕಸಭಾ ಚುನಾವಣೆಯ ಒಳಗಡೆ ಸರ್ಕಾರ ಎನ್‌ಪಿಎಸ್ ನೌಕರರ ಬೇಡಿಕೆ ಈಡೇರಿಸಬೇಕು. ನೂತನ ಪಿಂಚಣಿ ನೀತಿಯಿಂದ ನೌಕರರಿಗೆ ಮುಕ್ತಿ ಕೊಡಿಸಬೇಕು. ಕಾಂಗ್ರೆಸ್‌ ನಾಯಕರು ಚುನಾವಣೆಯ ಪೂರ್ವದಲ್ಲಿ ‘ನಾವು ಅಧಿಕಾರಕ್ಕೆ ಬಂದರೆ ಒಪಿಎಸ್‌ ಜಾರಿ ಮಾಡಲಾಗುವುದು’ ಎಂದು ಹೇಳಿದ್ದರು. ತಮ್ಮ ಪ್ರಣಾಳಿಕೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದರು. ಈಗ ಸಮಯ ಬಂದಿದ್ದು, ಅದರಂತೆ ನಡೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಬೆಂಗಳೂರು ವಿಭಾಗದ ವಿವಿಧ ಜಿಲ್ಲೆಗಳ ನೌಕರರು ಭಾಗವಹಿಸಿದ್ದರು.

ನೌಕರರ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಶಿವರುದ್ರಯ್ಯ, ಮಾಜಿ ಅಧ್ಯಕ್ಷ ಗುರುಸ್ವಾಮಿ, ಜಂಟಿ ಕಾರ್ಯದರ್ಶಿ ಬಿ.ವಿ.ಮಂಜುನಾಥ್‌, ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಡಿ.ಮಂಜುನಾಥ್‌, ಕೆಪಿಟಿಸಿಎಲ್ ನೌಕರರ ಒಕ್ಕೂಟದ ಅಧ್ಯಕ್ಷ ಲಕ್ಷ್ಮಿಪತಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷೆ ಪದ್ಮಲತಾ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ ಮೊದಲಾದವರು ಹಾಜರಿದ್ದರು.

ತುಮಕೂರಿನಲ್ಲಿ ಭಾನುವಾರ ನಡೆದ ಎನ್‌ಪಿಎಸ್‌ ನೌಕರರ ಸಂಘದ ಬೆಂಗಳೂರು ವಿಭಾಗೀಯ ಮಟ್ಟದ ಸಂಘಟನಾ ಸಭೆಯಲ್ಲಿ ಭಾಗವಹಿಸಿದ್ದ ನೌಕರರು
ತುಮಕೂರಿನಲ್ಲಿ ಭಾನುವಾರ ನಡೆದ ಎನ್‌ಪಿಎಸ್‌ ನೌಕರರ ಸಂಘದ ಬೆಂಗಳೂರು ವಿಭಾಗೀಯ ಮಟ್ಟದ ಸಂಘಟನಾ ಸಭೆಯಲ್ಲಿ ಭಾಗವಹಿಸಿದ್ದ ನೌಕರರು

ಒಪಿಎಸ್‌ ಅನುಷ್ಠಾನಕ್ಕೆ ಬದ್ಧ

‘ನೌಕರರು ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲ ಭರವಸೆಗಳನ್ನು ಈಡೇರಿಸಲಿದೆ. ಒಪಿಎಸ್‌ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ’ ಎಂದು ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ್ ಹಾಲಪ್ಪ ಭರವಸೆ ನೀಡಿದರು. ವಿಭಾಗೀಯ ಸಂಘಟನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರ ಪರ ಭಾಗವಹಿಸಿ ಮಾತನಾಡಿ ‘ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲ ಅಂಶಗಳನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT